ಸಂತೋಷ್ ಪಾಟೀಲ್ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದೇನೆ: ಸಚಿವ ಈಶ್ವರಪ್ಪ

Update: 2022-03-29 07:33 GMT

ಬೆಂಗಳೂರು, ಮಾ.29: ಕಾಮಗಾರಿಯ ಬಿಲ್ ಬಾಕಿ ಮೊತ್ತ ಬಿಡುಗಡೆಗೆ ಕಮಿಷನ್ ಕೇಳಿರುವುದಾಗಿ ತನ್ನ ಮೇಲಿನ ಆರೋಪ ಕಪೋಲಕಲ್ಪಿತ. ಈ ಆರೋಪ ಮಾಡಿರುವ ಬೆಳಗಾವಿ ಮೂಲದ ಗುತ್ತಿಗೆದಾರ ಹಾಗೂ 'ಹಿಂದೂ ವಾಹಿನಿ' ರಾಷ್ಟ್ರೀಯ ಕಾರ್ಯದರ್ಶಿ ಸಂತೋಷ್‍ ಕೆ. ಪಾಟೀಲ್ ವಿರುದ್ಧ ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆ ದಾಖಲಿಸಿರುವುದಾಗಿ ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಇಲಾಖೆ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.

ಸುದ್ದಿಗಾರರ ಜೊತೆ ಮಾತನಾಡಿದ ಅವರು, ಬೆಳಗಾವಿ ಜಿಲ್ಲೆಯಲ್ಲಿ ನಾಲ್ಕು ಕೋಟಿ ರೂ.ಗಳ ಕಾಮಗಾರಿಗೆ ಹಣ ಬಿಡುಗಡೆ ಮಾಡಲು ಕಮಿಷನ್ ನೀಡಬೇಕು ಎಂದು ಒತ್ತಾಯಿಸಿದ್ದಾರೆ ಎಂಬ ಆರೋಪವನ್ನು ಸಂತೋಷ್ ಕೆ. ಪಾಟೀಲ್ ಎಂಬಾತ ಆರೋಪ ಮಾಡಿ ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವರಿಗೆ ಬರೆದಿರುವ ಪತ್ರಕ್ಕೆ ಸಂಬಂಧಿಸಿ  ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಸ್ಪಷ್ಟೀಕರಣ ನೀಡಿದ್ದಾರೆ ಎಂದರು.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು ಸಂತೋಷ್ ಕೆ. ಪಾಟೀಲ್ ಉಲ್ಲೇಖಿಸಿರುವ ಕಾಮಗಾರಿಗೆ ಅನುಮೋದನೆ ಕೋರಿಲ್ಲ ಮತ್ತು ಸರಕಾರವು ಯಾವುದೇ ಕಾಮಗಾರಿಯನ್ನು ಮಂಜೂರು ಮಾಡಿಲ್ಲ. ಈ ಕಾಮಗಾರಿಯ ಸಂಬಂಧ ಇಲಾಖೆಯು ಯಾವುದೇ ಕಾರ್ಯಾದೇಶ ನೀಡಿಲ್ಲ ಮತ್ತು ಆಡಳಿತಾತ್ಮಕ ಅನುಮೋದನೆಯೂ ನೀಡಿಲ್ಲ.  ಹಿಂಡಲಗಾ ಗ್ರಾಮದಲ್ಲಿ ಸಂತೋಷ್ ಕೆ. ಪಾಟೀಲ್ ಹೇಳುವಂತಹ ಕಾಮಗಾರಿಯು ಇಲಾಖಾ ವತಿಯಿಂದ ಅನುಷ್ಠಾನಗೊಂಡಿಲ್ಲ. ಯಾವುದೇ ಸರಕಾರಿ ಏಜೆನ್ಸಿಗಳು ಈ ಕಾಮಗಾರಿಗೆ ತಾಂತ್ರಿಕ ಅನುಮೋದನೆ ನೀಡಿಲ್ಲ ಅಥವಾ ಉಸ್ತುವಾರಿ ಮಾಡಿಲ್ಲ. ಹೀಗಾಗಿ ಹಣ ಬಿಡುಗಡೆ ಮಾಡುವ ಪ್ರಶ್ನೆಯೇ ಉದ್ಬವವಾಗುವುದಿಲ್ಲ ಎಂದು ಇಲಾಖೆಯ ಮುಖ್ಯಸ್ಥರು ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವರಿಗೆ ಸ್ಪಷ್ಟಪಡಿಸಿದ್ದಾರೆ ಎಂದು ಈಶ್ವರಪ್ಪ ಮಾಹಿತಿ ನೀಡಿದ್ದಾರೆ.

ತನ್ನ ವಿರುದ್ಧ ಮಾ.9ರಂದು ಖಾಸಗಿ ಟಿವಿಯಲ್ಲಿ ಪ್ರಕಟವಾದ ಸಂದರ್ಶನವೊಂದರಲ್ಲಿ ಸಂತೋಷ್ ಕೆ. ಪಾಟೀಲ್  ಕಪೋಲಕಲ್ಪಿತ ಆರೋಪ ಮಾಡಿರುವುದು ತನ್ನ ಗಮನಕ್ಕೆ ಬಂದಿತ್ತು. ಈ ಹಿನ್ನೆಲೆಯಲ್ಲಿ ಮರುದಿನವೇ ಅಂದರೆ ಮಾ.10ರಂದು ಸಂತೋಷ್ ಕೆ. ಪಾಟೀಲ್ ವಿರುದ್ಧ 6ನೇ ಅಪರ ಮುಖ್ಯ ಮೆಟ್ರೋಪಾಲಿಟನ್ ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದೇನೆ. ನಾಳೆ ಅವರಿಗೆ ನೋಟಿಸ್ ನೀಡಲಿದ್ದಾರೆ ಎಂದು ಈಶ್ವರಪ್ಪ ತಿಳಿಸಿದ್ದಾರೆ.

ನಮ್ಮ ಕಾರ್ಯಕರ್ತನೇ ಅಲ್ಲ:

ಸಂತೋಷ್ ಕೆ. ಪಾಟೀಲ್  ಬಿಜೆಪಿ ಕಾರ್ಯಕರ್ತನೇ ಅಲ್ಲ. ಆತನಿಗೂ ಪಕ್ಷಕ್ಕೂ ಸಂಬಂಧ‍ವೇ ಇಲ್ಲ ಎಂದು ಸಚಿವ ಈಶ್ವರಪ್ಪ ಹೇಳಿದ್ದಾರೆ.

ಮಾಧ್ಯಮದವರ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ ಈಶ್ವರಪ್ಪ, ತನ್ನ ಮೇಲೆ ಮಾಡಿರುವ ಕಮಿಷನ್‍ ಆರೋಪದ ಷಡ್ಯಂತ್ರದ ಹಿಂದೆ ಯಾರಿದ್ದಾರೆ ಅಂತ ಗೊತ್ತಿಲ್ಲ. ಪಕ್ಷದ ಬೆಳಗಾವಿ ಜಿಲ್ಲಾ ಅಧ್ಯಕ್ಷರನ್ನು ಇಂದು ಬೆಳಗ್ಗೆ ಸಂಪರ್ಕಿಸಿ ಮಾಹಿತಿ ಪಡೆದಿದ್ದು, ಸಂತೋಷ್ ಕೆ. ಪಾಟೀಲ್  ಗೂ ಬಿಜೆಪಿಗೂ ಯಾವುದೇ ಸಂಬಂಧ ಇಲ್ಲ. ಆತ ನಮ್ಮ ಕಾರ್ಯಕರ್ತನೇ ಅಲ್ಲ ಎಂದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News