ಆರ್ಥಿಕ ಶಿಸ್ತು ಕಾಪಾಡಲು ಕಠಿಣ ಕ್ರಮ, ಅನಗತ್ಯ ವೆಚ್ಚಕ್ಕೆ ಕಡಿವಾಣ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

Update: 2022-03-29 12:06 GMT
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಬೆಂಗಳೂರು, ಮಾ. 29: ‘ಆರ್ಥಿಕ ಶಿಸ್ತು ಕಾಪಾಡಲು ಕಠಿಣ ಕ್ರಮಗಳನ್ನು ಕೈಗೊಳ್ಳುವುದಲ್ಲದೆ, ಅನಗತ್ಯ ವೆಚ್ಚಕ್ಕೆ ಕಡಿವಾಣ ಹಾಕುವ ಮೂಲಕ ರಾಜ್ಯದ ಆದಾಯವನ್ನು ಹೆಚ್ಚಿಸಲಾಗುವುದು ಜೊತೆಗೆ ರಾಜಸ್ವ ಕೊರತೆ ತಗ್ಗಿಸಲು ಸರಕಾರ ಕಟ್ಟುನಿಟ್ಟಿನ ಕ್ರಮಗಳನ್ನು ವಹಿಸಲಿದೆ' ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ಮಂಗಳವಾರ ವಿಧಾನಸಭೆಯಲ್ಲಿ 2022-23ನೆ ಸಾಲಿನ ಅನುದಾನ ಬೇಡಿಕೆಗಳ ಮೇಲಿನ ಚರ್ಚೆಗೆ ಉತ್ತರ ನೀಡಿದ ಅವರು, ‘ರಾಜ್ಯದ ಆದಾಯ ಸಂಗ್ರಹದಲ್ಲಿ ಮೋಟಾರ್ ವಾಹನ ತೆರಿಗೆ ಹೊರತುಪಡಿಸಿ ವಾಣಿಜ್ಯ ತೆರಿಗೆ, ಅಬಕಾರಿ ಸೇರಿದಂತೆ ಎಲ್ಲ ಇಲಾಖೆಯಲ್ಲಿಯೂ ನಿಗದಿತ ಗುರಿ ಮೀರಿ ತೆರಿಗೆ ಸಂಗ್ರಹವಾಗಿದ್ದು, ಹೆಚ್ಚುವರಿಯಾಗಿ 9,500 ಕೋಟಿ ರೂ.ಆದಾಯ ಸಂಗ್ರಹವನ್ನು ಅಂದಾಜಿಸಲಾಗಿದೆ' ಎಂದು ವಿವರಿಸಿದರು.

‘ತೆರಿಗೆ ಸಂಗ್ರಹದಲ್ಲಿ ದಕ್ಷತೆ ತೋರಿದ ಪರಿಣಾಮ ವಾಹನ ತೆರಿಗೆ ಹೊರತುಪಡಿಸಿ ಉಳಿದೆಲ್ಲ ಆದಾಯ ಮೂಲಗಳ ತೆರಿಗೆ ಸಂಗ್ರಹದಲ್ಲಿ ಗುರಿ ಮೀರಿ ತೆರಿಗೆ ಸಂಗ್ರಹ ಮಾಡಲಾಗಿದೆ. ಸೆಪ್ಟೆಂಬರ್, ಅಕ್ಟೋಬರ್‍ನಲ್ಲಿ ಆರ್ಥಿಕ ಸ್ಥಿತಿಯನ್ನು ಗಮನಿಸಿದಾಗ ಈ ವರ್ಷ ಬಜೆಟ್ ಗಾತ್ರ ಕಡಿಮೆಯಾಗಬಹುದೆಂದು ಅಧಿಕಾರಿಗಳು ಹೇಳಿದ್ದರು. ಆದರೆ, ಬಜೆಟ್ ಗಾತ್ರ ಕಡಿಮೆಯಾದರೆ ಅಭಿವೃದ್ಧಿಗೆ ತೊಂದರೆಯಾಗುತ್ತದೆಂದು ಅರಿತು ತೆರಿಗೆ ಸಂಗ್ರಹದಲ್ಲಿ ಗುರಿ ಮೀರಿ ಸಾಧನೆ ಮಾಡಲಾಗಿದೆ' ಎಂದು ಹೇಳಿದರು.

ಸೆಕೆಂಡ್ಸ್ ಗೆ  ತಡೆ: ‘ಅಬಕಾರಿ ಇಲಾಖೆಯಲ್ಲಿ ಗರಿಷ್ಠ ಪ್ರಮಾಣದ ಮಾರಾಟವಾಗದೆ ಹೆಚ್ಚಿನ ಆದಾಯ ಸಂಗ್ರಹ ಕಷ್ಟ ಎಂದು ಅಧಿಕಾರಿಗಳು ತಿಳಿಸಿದ್ದರು. ಪಾನೀಯ ನಿಗಮವಾದ ಮೇಲೆ ಸೆಕೆಂಡ್ಸ್ ಇಲ್ಲ ಎಂದುಕೊಂಡಿದ್ದೇವೆ. ಆದರೆ, ನೆರೆಯ ಗೋವಾ ಮತ್ತು ಇತರೆಡೆಗಳಿಂದ ಸೆಕೆಂಡ್ಸ್ ಮದ್ಯ ರಾಜ್ಯಕ್ಕೆ ಬರುತ್ತಿದೆ. ಇದನ್ನು ತಡೆಗಟ್ಟಲು ಕ್ರಮ ಕೈಗೊಳ್ಳಿ ಎಂದು ಅಧಿಕಾರಿಗಳಿಗೆ ಸೂಚಿಸಿದ್ದರಿಂದ ಅಬಕಾರಿಯಲ್ಲಿ 2 ಸಾವಿರ ಕೋಟಿ ಅಧಿಕ ಆದಾಯ ಸಂಗ್ರಹವಾಗಿದೆ' ಎಂದು ಮಾಹಿತಿ ನೀಡಿದರು.

‘ಆಸ್ತಿ ನೋಂದಣಿಗೆ ಸ್ಟ್ಯಾಂಪ್ ಡ್ಯೂಟಿಯಲ್ಲಿ ಶೇ.10ರಷ್ಟು ಮಾರ್ಗಸೂಚಿ ದರಗಳಿಗೆ ರಿಯಾಯಿತಿ ನೀಡಿದ್ದರಿಂದ 100 ಕೋಟಿ ರೂ. ಹೆಚ್ಚು ಆದಾಯ ಸಂಗ್ರಹವಾಯಿತು. ತೆರಿಗೆ ರಹಿತ ಆದಾಯಗಳ ಹೆಚ್ಚಳಕ್ಕೂ ಗಮನ ನೀಡಿದ್ದೇವೆ. 4 ಸಾವಿರ ಕೋಟಿ ರೂ. ತೆರಿಗೇತರ ಆದಾಯ ಗುರಿ ಮೀರಿ 6 ಸಾವಿರ ಕೋಟಿ ರೂ.ಗಳನ್ನು ದಾಯವನ್ನು ಸಂಗ್ರಹ ಮಾಡಲಾಗಿದೆ. ಮಾರಾಟವಾಗದೆ ಉಳಿದಿದ್ದ ಕಬ್ಬಿಣದ ಅದಿರನ್ನು ಮಾರಾಟ ಮಾಡಿ 500 ಕೋಟಿ ರೂ.ಆದಾಯ ಮಾಡಲಾಗಿದೆ'. 

‘ಆರ್ಥಿಕ ಶಿಸ್ತು ಮೂಡಿಸುವ ನಿಟ್ಟಿನಲ್ಲಿ ಈ ಆರ್ಥಿಕ ವರ್ಷದಲ್ಲಿ 67,100 ಕೋಟಿ ರೂ.ಸಾಲ ಪಡೆಯಲು ಅವಕಾಶವಿದ್ದರೂ 63,100 ಕೋಟಿ ರೂ.ಸಾಲ ಪಡೆದು 4 ಸಾವಿರ ಕೋಟಿ ರೂ.ಸಾಲ ಕಡಿಮೆ ಮಾಡಿದ್ದೇವೆ. ಮುಂದಿನ ದಿನಗಳಲ್ಲಿ ಅನಗತ್ಯ ವೆಚ್ಚಗಳನ್ನು ಕಡಿಮೆ ಮಾಡಿ ವಿತ್ತೀಯ ಕೊರತೆ ಸರಿದೂಗಿಸಿ ಆರ್ಥಿಕ ಶಿಸ್ತನ್ನು ಕಾಪಾಡಿಕೊಂಡು ಆದಾಯ ಹೆಚ್ಚಳ ಮಾಡಲು ತೀರ್ಮಾನಿಸಿದ್ದೇವೆ' ಎಂದು ಹೇಳಿದರು.

‘ಮುಂದಿನ ವರ್ಷ ಕೋವಿಡ್ ಸೋಂಕಿನ ನಾಲ್ಕನೆ ಅಲೆ ಬಾರದಿರಲಿ ಎಂದು ನಾನು ದೇವರಲ್ಲಿ ಪ್ರಾರ್ಥನೆ ಮಾಡುತ್ತೇನೆ. ಕೋವಿಡ್ ಲಾಕ್‍ಡೌನ್‍ನಿಂದ ಆರ್ಥಿಕತೆ ಕುಸಿದು ಬೀಳುತ್ತದೆ. ಕೋವಿಡ್‍ಗೆ ಸರಕಾರ ಸುಮಾರು 8 ಸಾವಿರ ಕೋಟಿ ರೂ.ವೆಚ್ಚ ಮಾಡಿದ್ದು, ಸರಕಾರ 15 ಸಾವಿರ ಕೋಟಿ ರೂ. ಎಂದು ಹೇಳಿದೆ. ನೆರೆಯ ರಾಜ್ಯಗಳು ಇನ್ನೂ ಹೆಚ್ಚು ಮೊತ್ತದ ಹಣ ಖರ್ಚು ಮಾಡಿದ್ದಾರೆ. ಸರಕಾರ ಅನಗತ್ಯ ಖರ್ಚು ಕಡಿಮೆ ಮಾಡಿ, ಆರ್ಥಿಕ ಶಿಸ್ತು ಕಾಪಾಡಲು ಆಸ್ಥೆ ವಹಿಸಬೇಕು'

-ಸಿದ್ದರಾಮಯ್ಯ ಪ್ರತಿಪಕ್ಷ ನಾಯಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News