ಕೊಡಗಿನಲ್ಲಿ ವನ್ಯ ಜೀವಿಗಳ ಹಾವಳಿ: ಪರಿಸ್ಥಿತಿ ಹೀಗೆ ಮುಂದುವರಿದರೆ ಪರಿಹಾರ ಕೊಡಲು ಜನ ಉಳಿಯುವುದಿಲ್ಲ; ವೀಣಾ ಅಚ್ಚಯ್ಯ

Update: 2022-03-29 12:33 GMT
ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ

ಬೆಂಗಳೂರು, ಮಾ.29: ಕೊಡಗಿನಲ್ಲಿ ವನ್ಯ ಜೀವಿಗಳ ಹಾವಳಿ ಹೆಚ್ಚಾಗಿದ್ದು, ಜನರು ಆತಂಕಕ್ಕೆ ಒಳಗಾಗಿದ್ದಾರೆ ಎಂದು ಕಾಂಗ್ರೆಸ್ ಸದಸ್ಯೆ ವೀಣಾ ಅಚ್ಚಯ್ಯ ಆತಂಕ ವ್ಯಕ್ತಪಡಿಸಿದರು.

ಮಂಗಳವಾರ ವಿಧಾನ ಪರಿಷತ್ತಿನ ಕಲಾಪದಲ್ಲಿ ವಿಶೇಷ ಸಂದರ್ಭದಲ್ಲಿ ವಿಷಯ ಪ್ರಸ್ತಾಪಿಸಿದ ಅವರು, ಸೋಮವಾರ ಕೊಡಗಿನಲ್ಲಿ ಹುಲಿ ದಾಳಿಯಿಂದ ಕಾರ್ಮಿಕನೊಬ್ಬ ಮೃತಪಟ್ಟಿದ್ದಾರೆ. ಕಳೆದ ವರ್ಷ ನಾಲ್ಕು ಪ್ರಕರಣಗಳಲ್ಲಿ ಹುಲಿ ದಾಳಿಯಾಗಿ, ಮೂರು ಮಂದಿ ಮೃತಪಟ್ಟಿದ್ದಾರೆ. ಈ ಪೈಕಿ ಒಬ್ಬರು ಬದುಕಿ ಉಳಿದಿದ್ದಾರೆ ಎಂದು ಮಾಹಿತಿ ನೀಡಿದರು.

ಇದನ್ನೂ ಓದಿ: ಮಡಿಕೇರಿ: ಹುಲಿ ದಾಳಿಗೆ ಕಾರ್ಮಿಕ ಬಲಿ

ಸರಕಾರ ಮೃತಪಟ್ಟವರಿಗೆ ಪರಿಹಾರ ಕೊಡುತ್ತದೆ. ಆದರೆ ಪರಿಸ್ಥಿತಿ ಹೀಗೆ ಮುಂದುವರೆದರೆ ಪರಿಹಾರ ಕೊಡಲು ಜನ ಉಳಿಯುವುದಿಲ್ಲ ಎಂದ ಅವರು, ಪ್ರಸ್ತುತ ಮೆಣಸು ಕೊಯ್ಲು ಕೆಲಸ ನಡೆಯುತ್ತಿದೆ. ಹುಲಿಗೆ ಹೆದರಿ ಕಾರ್ಮಿಕರು ಕೆಲಸಕ್ಕೆ ಬರುತ್ತಿಲ್ಲ ಎಂದು ತಿಳಿಸಿದರು.

ಸರಕಾರಗಳು ಕೊಡಗಿನ ಪರಿಸರ ಹಾಳು ಮಾಡಿ ಹಲವು ಯೋಜನೆಗಳನ್ನು ಬೇರೆ ಭಾಗಕ್ಕೆ ತೆಗೆದುಕೊಂಡು ಹೋಗುತ್ತಿವೆ. ಬೇರೆ ಕಡೆಗಳಿಂದ ಹುಲಿ, ಕಾಡಾನೆ, ಮಂಗಗಳನ್ನು ಸೇರಿ ಹಲವು ವನ್ಯ ಜೀವಿಗಳನ್ನು ತಂದು ಕೊಡಗಿನಲ್ಲಿ ಬಿಡಲಾಗುತ್ತಿದೆ. ಅಲ್ಲಿನ ಅರಣ್ಯ ಅಧಿಕಾರಿಗಳು ಮನುಷ್ಯರಿಗಿಂತಲೂ ಪ್ರಾಣಿಗಳ ಪರವಾಗಿಯೇ ಕೆಲಸ ಮಾಡುತ್ತಿದ್ದಾರೆ ಎಂದರು.

ಇದಕ್ಕೆ ಸರಕಾರದ ಪರವಾಗಿ ಉತ್ತರಿಸಿದ ಸಭಾನಾಯಕ ಕೋಟಾ ಶ್ರೀನಿವಾಸ ಪೂಜಾರಿ, ಅರಣ್ಯ ಸಚಿವರು ಕೊಡಗಿಗೆ ಭೇಟಿ ನೀಡಿ ಅಲ್ಲಿಯೆ ಸಭೆ ನಡೆಸುವುದಾಗಿ ಈ ಮೊದಲು ಇಲ್ಲಿ ನಡೆದ ಚರ್ಚೆಗೆ ಉತ್ತರ ನೀಡಿದ್ದಾರೆ. ವಿವಾದಿತ ಅಧಿಕಾರಿಯ ವಿರುದ್ಧ ತನಿಖೆ ಮಾಡಿ, ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ಭರವಸೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News