ಅಖಿಲ ಭಾರತ ಮುಷ್ಕರ: ರಾಜ್ಯದ ವಿವಿಧೆಡೆ ಕಾರ್ಮಿಕ ಸಂಘಟನೆಗಳಿಂದ ಪ್ರತಿಭಟನೆ
ಬೆಂಗಳೂರು, ಮಾ.29: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕಾರ್ಮಿಕ ಸಂಘಟನೆಗಳ ಒಕ್ಕೂಟದ ವತಿಯಿಂದ ರಾಷ್ಟ್ರವ್ಯಾಪಿ ಕರೆ ನೀಡಿರುವ ಮುಷ್ಕರವನ್ನು ಬೆಂಬಲಿಸಿ ರಾಜ್ಯದ ವಿವಿಧೆಡೆ ಮಂಗಳವಾರ ಎರಡನೆ ದಿನದ ಮುಷ್ಕರ ನಡೆಸಿದೆ.
ಬೆಂಗಳೂರು ನಗರ: ಬೆಂಗಳೂರಿನ ಫ್ರೀಡಂ ಪಾರ್ಕ್‍ನಲ್ಲಿ ಮಂಗಳವಾರ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿಯಾದ ಜೆಸಿಟಿಯುವಿನ ನೇತೃತ್ವದಲ್ಲಿ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಆಗ್ರಹಿಸಿ ಮುಷ್ಕರ ನಡೆಸಿದರು.
ಫ್ರೀಡಂ ಪಾರ್ಕ್‍ನಲ್ಲಿ ಕಾರ್ಮಿಕರನ್ನು ಉದ್ದೇಶಿಸಿ ಮಾತನಾಡಿದ ಎಐಯುಟಿಯುಸಿನ ರಾಜ್ಯ ಅಧ್ಯಕ್ಷ ಕೆ.ಸೋಮಶೇಖರ್ ಅವರು, ಇಂದು ದೇಶದೆಲ್ಲೆಡೆ ಎಲ್ಲ್ಲ ವರ್ಗದ ಕಾರ್ಮಿಕರು ಆರ್ಥಿಕವಾಗಿ, ಸಾಮಾಜಿಕವಾಗಿ ಶೋಷಣೆಗೆ ಒಳಗಾಗಿದ್ದಾರೆ. ಬೆಲೆ ಏರಿಕೆಯ ಭಾರವನ್ನು ಕೇಂದ್ರ ಸರಕಾರ ಚಾಚು ತಪ್ಪದೆ ಬಡ ಜನರ, ಬಡ ಕಾರ್ಮಿಕರ ಹೇಗಲ ಮೇಲೆ ಹಾಕುತ್ತಿದೆ ಎಂದು ಕಿಡಿಕಾರಿದರು.
ನಿವೇಶನ ರಹಿತ ಕಾರ್ಮಿಕರಿಗೆ ನಿವೇಶನ ಒದಗಿಸಬೇಕು, ಕಾರ್ಮಿಕ ನ್ಯಾಯಾಲಯ ಸ್ಥಾಪನೆಯಾಗಬೇಕು, ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ, ಅಗತ್ಯ ವಸ್ತುಗಳ ಬೆಲೆ ನಿಯಂತ್ರಿಸಬೇಕು. ಅಲ್ಲದೆ, ಕಾರ್ಮಿಕರು ಉಳಿದರೇ ಮಾತ್ರ ದೇಶ ಅಭಿವೃದ್ಧಿಯ ಹಾದಿಯಲ್ಲಿ ಇರುತ್ತದೆ ಎಂಬುದನ್ನು ಸರಕಾರಗಳು ಅರ್ಥ ಮಾಡಿಕೊಳ್ಳಬೇಕೆಂದು ಎಂದು ಒತ್ತಾಯಿಸಿದರು. ನೂರಾರು ಸಂಖ್ಯೆಯಲ್ಲಿ ಆಶಾ, ಅಂಗನವಾಡಿ ಹಾಗೂ ಬಿಸಿಯೂಟ ಯೋಜನಾ ಕಾರ್ಮಿಕರು ಮುಷ್ಕರದಲ್ಲಿ ಭಾಗವಹಿಸಿದ್ದರು.
ಪ್ರಮುಖ ಬೇಡಿಕೆಗಳು: ಎಲ್ಲ ಯೋಜನಾ ಕಾರ್ಮಿಕರಿಗೆ ಕನಿಷ್ಠ ವೇತನ ಹಾಗೂ ಸರಕಾರಿ ನೌಕರರ ಮಾನ್ಯತೆ ಕಡ್ಡಾಯ ಮಾಡಬೇಕು, ಅಲ್ಲದೆ ವಿಶೇಷವಾಗಿ ಆಶಾ ಕಾರ್ಯಕರ್ತೆರನ್ನು ಸರಕಾರಿ ನೌಕರರೆಂದು ಪರಿಗಣಿಸಬೇಕು ಹಾಗೂ ಅವರ ಮಾಸಿಕ ಗೌರವಧನವನ್ನು ಆರ್ ಸಿ ಹೆಚ್ ಪೋರ್ಟಲ್ ನಿಂದ ವಿಂಗಡಿಸಬೇಕೆಂಬ ಆಗ್ರಹ ಮುಗಿಲು ಮುಟ್ಟಿತು.
ಸ್ವಾತಂತ್ರ್ಯ ಉದ್ಯಾನವನದಲ್ಲಿ ನಡೆದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜೆಸಿಟಿಯು ವಿನ ರಾಜ್ಯ ಸಂಚಾಲಕ ಕೆ.ವಿ.ಭಟ್ ಅವರು ವಹಿಸಿದ್ದರು. ಮುಷ್ಕರದಲ್ಲಿ ಇತರೆ ಕೇಂದ್ರ ಕಾರ್ಮಿಕ ಸಂಘಟನೆಗಳ ಮುಖಂಡರು ಕಾರ್ಮಿಕರನ್ನುದ್ದೇಶಿಸಿ ಮಾತನಾಡಿದರು. ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕಾರ್ಮಿಕ ಸಂಘಟನೆಗಳು ಕೋಲಾರ, ಚಿಕ್ಕಮಗಳೂರು ಸೇರಿ ರಾಜ್ಯಾದ್ಯಂತ ಪ್ರತಿಭಟನೆ ನಡೆಸಿವೆ.
ಲಾಭಕ್ಕಾಗಿ ಉದ್ಯಮಗಳ ಮಾರಾಟ: ಕೆ.ಸೋಮಶೇಖರ್
‘ಕಾರ್ಮಿಕ ಕಾಯ್ದೆಗಳನ್ನು ಮಾಲಕರ ಪರವಾಗಿ ತಿದ್ದುಪಡಿ ಮಾಡುತ್ತಿದ್ದಾರೆ. ಎಲ್ಲ ಶ್ರಮಾಧಾರಿತ ಸಾರ್ವಜನಿಕ ಉದ್ಯಮಗಳನ್ನು ದೇಶದ ಕೆಲವೇ ಕೆಲವು ಬಂಡವಾಳಶಾಹಿಗಳಿಗೆ ಅವರ ಖಾಸಗಿ ಲಾಭಕ್ಕಾಗಿ ಮಾರುತಿದ್ದಾರೆ. ಇಂತಹ ಕಾರ್ಮಿಕ ವಿರೋಧಿ ನೀತಿಗಳನ್ನು ಎಲ್ಲ ವರ್ಗದ ಜನರು, ಶೋಷಿತರು ವಿರೋಧಿಸಬೇಕು ಎಂದು ಎಐಯುಟಿಯುಸಿ ನ ರಾಜ್ಯ ಅಧ್ಯಕ್ಷ ಕೆ.ಸೋಮಶೇಖರ್ ಹೇಳಿದರು.
ಕೋಲಾರ : ನಗರದ ಹೊರವಲಯದ ಜಿಲ್ಲಾಧಿಕಾರಿ ಕಛೇರಿ ಮುಂದೆ ಮಂಗಳವಾರ ವಿವಿಧ ಕಾರ್ಮಿಕ ಸಂಘಟನೆಗಳ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಸಿಐಟಿಯು ಮುಖಂಡ ಗಾಂಧಿನಗರ ನಾರಾಯಣಸ್ವಾಮಿ ಮಾತನಾಡಿ ಕೇಂದ್ರ ಸರಕಾರ ಜಾರಿ ಮಾಡಲು ಹೊರಟಿರುವ ಕಾರ್ಮಿಕ ಸಂಹಿತೆಗಳು ಕಾರ್ಮಿಕರನ್ನು ಮತ್ತೊಮ್ಮೆ ಗುಲಾಮಗಿರಿಯ ಪದ್ದತಿಗೆ ತಳ್ಳುವಂತೆ ಮಾಡಿದ್ದಾರೆ ದೇಶದ ಸಂಪತ್ತು ಸೃಷ್ಟಿಸುವ ಕಾರ್ಮಿಕರ ಹಕ್ಕುಗಳನ್ನು ರಕ್ಷಿಸಲು ಸರಕಾರಗಳು ಮುಂದಾಗಬೇಕು ಕಾರ್ಮಿಕರು ಉಳಿದರೇ ಮಾತ್ರ ದೇಶ ಅಭಿವೃದ್ಧಿಯ ಹಾದಿಯಲ್ಲಿ ಇರುತ್ತದೆ ಎಂಬುದನ್ನು ಸರಕಾರಗಳು ಅರ್ಥ ಮಾಡಿಕೊಳ್ಳಬೇಕು ಎಂದು ಒತ್ತಾಯಿಸಿದರು.
ಮನವಿ ಸ್ವೀಕರಿಸಿ ಮಾತನಾಡಿದ ಜಿಪಂ ಸಿಇಓ ಯುಕೇಶ್ ಕುಮಾರ್ ನಮ್ಮ ಹಂತದಲ್ಲಿ ಬಗೆಹರಿಯುವ ಬೇಡಿಕೆಗಳನ್ನು ಕೂಡಲೇ ಬಗೆಹರಿಸುತ್ತೇನೆ ಉಳಿದ ಬೇಡಿಕೆಗಳ ಬಗ್ಗೆ ಸರಕಾರದ ಗಮನಕ್ಕೆ ತರಲಾಗುವುದು ಎಂದು ತಿಳಿಸಿದರು.
ಚಿಕ್ಕಮಗಳೂರು: ನಗರದ ಸಿಪಿಐ ಕಚೇರಿ ಮುಂಭಾಗ ಸಮಾವೇಶಗೊಂಡು ವಿವಿಧ ಕಾರ್ಮಿಕ ಸಂಘಟನೆಗಳ ಮುಖಂಡರು ಹಾಗೂ ಕಾರ್ಮಿಕರು, ಎಂ.ಜಿ.ರಸ್ತೆ ಮೂಲಕ ಪ್ರತಿಭಟನಾ ಆಜಾದ್‍ಪಾರ್ಕ್ ವೃತ್ತದವರೆಗೆ ಬೃಹತ್ ಧರಣಿ ನಡೆಸಿದರು. ಮೆರವಣಿಗೆಯುದ್ದಕ್ಕೂ ಕೇಂದ್ರ ಮತ್ತು ರಾಜ್ಯ ಸರಕಾರಗಳ ಕಾರ್ಮಿಕ ವಿರೋಧಿ ನೀತಿಯನ್ನು ಖಂಡಿಸಿ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಪ್ರಸಕ್ತ ರೈತರು ಮತ್ತು ಕಾರ್ಮಿಕರಿಗೆ ರಕ್ಷಣೆ ಇಲ್ಲದಂತಾಗಿದೆ. ಮತ್ತೊಂದು ಕಡೆ ದಿನನಿತ್ಯ ಬಳಕೆಯ ವಸ್ತುಗಳ ಬೆಲೆ ಗಗನಕ್ಕೆರುತ್ತಿದೆ. ಮದ್ಯಮ ವರ್ಗದ ಜನರು ನೆಮ್ಮದಿಯಿಂದ ಬದುಕಲು ಸಾಧ್ಯವಾಗುತ್ತಿಲ್ಲ, ಕೇಂದ್ರ ಮತ್ತು ರಾಜ್ಯ ಸರಕಾರ ಕಾರ್ಪೋರೇಟ್ ಸಂಸ್ಥೆಗಳ ಪರವಾದ ಕಾನೂನು ರೂಪಿಸುತ್ತಿವೆ ಎಂದ ಅವರು, ಕಾರ್ಮಿಕ ವಿರೋಧಿಯಾಗಿ ನಡೆದುಕೊಳ್ಳುತ್ತಿರುವ ಕೇಂದ್ರ ಮತ್ತು ರಾಜ್ಯದ ಬಿಜೆಪಿ ಸರಕಾರಗಳನ್ನು ಮುಂಬರುವ ಚುನಾವಣೆಯಲ್ಲಿ ಮನೆಗೆ ಕಳಿಸಬೇಕು. ಅಲ್ಲಿಯವರೆಗೂ ಕಾರ್ಮಿಕರು ವಿಶ್ರಮಿಸಬಾರದು ಎಂದು ಕರೆ ನೀಡಿದರು.
ಮಡಿಕೇರಿ: ನಗರದ ಸುದರ್ಶನ ವೃತ್ತದಿಂದ ಮೆರವಣಿಗೆ ಮೂಲಕ ಸಾಗಿ ಬಂದ ಪ್ರತಿಭಟನಾಕಾರರು ಜಿಲ್ಲಾಧಿಕಾರಿಗಳ ಕಚೇರಿ ಎದುರು ಜಮಾಯಿಸಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಅಸಮಾಧಾನ ವ್ಯಕ್ತಪಡಿಸಿದರು.
ಕೇಂದ್ರ ಸರ್ಕಾರದ ರೈತ, ಕಾರ್ಮಿಕ, ಜನ ವಿರೋಧಿ ನೀತಿ, ಕಾರ್ಪೊರೇಟ್ ಪರ ಮತ್ತು ರಾಷ್ಟ್ರ ವಿರೋಧಿ ನೀತಿಗಳ ವಿರುದ್ಧ ಹಾಗೂ ಪಾರ್ಲಿಮೆಂಟ್‍ನಲ್ಲಿ 4 ಕಾರ್ಮಿಕ ಸಂಹಿತೆಗಳ ರದ್ದತಿಗಾಗಿ ಮಂಡಿಸಿರುವ ಖಾಸಗಿ ಮಸೂದೆಯನ್ನು ಅಂಗೀಕರಿಸಬೇಕೆಂದು ಪತ್ರಿಭಟನಾಕಾರರು ಒತ್ತಾಯಿಸಿರು.
ನಿವೇಶನ ರಹಿತ ಕಾರ್ಮಿಕರಿಗೆ ನಿವೇಶನ ಒದಗಿಸಬೇಕು, ವನ್ಯ ಪ್ರಾಣಿಗಳ ಹಾವಳಿ ತಡೆಗಟ್ಟಬೇಕು, ಜಿಲ್ಲೆಯಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ, ಕಾರ್ಮಿಕ ನ್ಯಾಯಾಲಯ ಸ್ಥಾಪನೆಯಾಗಬೇಕು, ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ, ಅಗತ್ಯ ವಸ್ತುಗಳ ಬೆಲೆ ನಿಯಂತ್ರಿಸಬೇಕು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿದರು.
ಕಲಬುರಗಿ: ನಗರದ ಕೇಂದ್ರ ಬಸ್ ನಿಲ್ದಾಣದಿಂದ ಪ್ರತಿಭಟನಾ ಮೆರವಣಿಗೆ ಹೊರಡಿ ಜಗತ್ ಸರ್ಕಲ್ನಲ್ಲಿ ಪ್ರತಿಭಟನಾ ಬಹಿರಂಗ ಸಭೆ ನಡೆಸುವ ಶಾಂತಿಪೂರ್ವಕವಾಗಿ ನಡೆಯಿತು.
ಈ ಸಭೆಯನ್ನು ಉದ್ದೇಶಿಸಿ ಸಿ.ಐ.ಟಿ.ಯು. ನ ಜಿಲ್ಲಾ ಅಧ್ಯಕ್ಷರಾದ ಕಾ|ಮ್ರೇಡ್ ಶಾಂತಾ ಘಂಟಿ, ಎ.ಐ.ಯು.ಟಿ.ಯು.ಸಿ ನ ಜಿಲ್ಲಾ ಅಧ್ಯಕ್ಷರಾದ ವಿ. ಜಿ. ದೇಸಾಯಿ, ಎ.ಐ.ಟಿ.ಯು.ಸಿ ನ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಪ್ರಭುದೇವ ಯಳಸಂಗಿ, ಐ.ಎನ್.ಟಿ.ಯು.ಸಿ ನ ಜಿಲ್ಲಾ ಅಧ್ಯಕ್ಷರಾದ ಅಶೋಕ ಘೂಳಿ, ಎನ್.ಸಿ. ಎಲ್ ಜಿಲ್ಲಾ ಅಧ್ಯಕ್ಷರಾದ ಶಂಕರ ಕಟ್ಟಿ ಸಂಗಾವಿ, ಮುಷ್ಕರವನ್ನು ಬೆಂಬಲಿಸಿ ಎಸ್.ಯು.ಸಿ.ಐ ನ ಜಿಲ್ಲಾ ಕಾರ್ಯದರ್ಶಿಗಳಾದ ಕಾಮ್ರೇಡ್ ಹೆಚ್ ವಿ ದಿವಾಕರ್, ಹಾಗೂ ಸಿ.ಪಿ.ಐ (ಎಂ) ನ ಜಿಲ್ಲಾ ಕಾರ್ಯದರ್ಶಿಗಳಾದ ಕಾಮ್ರೇಡ್ ನೀಲಾ ಕೆ. ರವರು ಮಾತನಾಡಿದರು.
ಕಾರ್ಮಿಕ ಸಂಹಿತೆಗಳನ್ನು ರದ್ದುಗೊಳಿಸಿ. ವಿದ್ಯುತ್ ಮಸೂದೆ (ತಿದ್ದುಪಡಿ) ಹಿಂತೆಗೆದುಕೊಳ್ಳಿ, ಯಾವುದೇ ರೂಪದಲ್ಲಿ ಖಾಸಗೀಕರಣ ಬೇಡ ಮತ್ತು ಎನ್ಎಂಪಿಯನ್ನು ರದ್ದುಮಾಡಬಾರದು, ದೆಹಲಿಯ ಸಂಯುಕ್ತ ಕಿಸಾನ್ ಮೋರ್ಚಾದ ಆರು ಬೇಡಿಕೆಗಳನ್ನು ಈಡೇರಿಸಿ ಕನಿಷ್ಠ ಬೆಂಬಲ ಬೆಲೆ ಖಾತ್ರಿ ಮಾಡಿ, ರಾಷ್ಟ್ರೀಯ ಪಿಂಚಣಿ ಯೋಜನೆ (ಎನ್.ಪಿ.ಎಸ್.) ರದ್ದು ಮಾಡಿ. ಹಳೆ ಪಿಂಚಣಿ ವ್ಯವಸ್ಥೆ ಪುನ: ಜಾರಿಗೆ, ಆದಾಯ ತೆರಿಗೆ ಪಾವತಿಸದ ಕುಟುಂಬಗಳಿಗೆ ತಿಂಗಳಿಗೆ ರೂ. 7500/- ರೂ. ಗಳ ನಗದು ಮತ್ತು ಉಚಿತ್ ರೇಷನ್ ನೀಡಬೇಕೆಂದು ಒತ್ತಾಯಿಸಿದರು.