ಕೃಷಿ ಹೊಂಡ ಯೋಜನೆ ಪುನರ್ ಆರಂಭಿಸಲು ಪರಿಶೀಲನೆ: ಮುಖ್ಯಮಂತ್ರಿ ಬೊಮ್ಮಾಯಿ

Update: 2022-03-29 12:56 GMT
ಕೃಷಿ ಹೊಂಡ ( ಫೈಲ್ ಚಿತ್ರ)

ಬೆಂಗಳೂರು, ಮಾ. 29: ‘ರೈತರಿಗೆ ಹೆಚ್ಚಿನ ಅನುಕೂಲ ಕಲ್ಪಿಸುವ, ಅಂತರ್ಜಲ ಸಂರಕ್ಷಣೆಗೆ ನೆರವಾಗುವ ಕೃಷಿ ಭಾಗ್ಯ ಯೋಜನೆಯಡಿ ‘ಕೃಷಿ ಹೊಂಡ' ನಿರ್ಮಿಸುವ ಯೋಜನೆಯನ್ನು ಪುನರ್ ಆರಂಭಿಸುವ ಸಂಬಂಧ ಪರಿಶೀಲನೆ ನಡೆಸಲಾಗುವುದು' ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ಮಂಗಳವಾರ ವಿಧಾನಸಭೆಯಲ್ಲಿ ಬೇಡಿಕೆಗಳ ಮೇಲೆನ ಚರ್ಚೆಗೆ ಕೃಷಿ ಸಚಿವರು ಉತ್ತರ ನೀಡುತ್ತಿದ್ದ ವೇಳೆ ಮಧ್ಯ ಪ್ರವೇಶಿಸಿ ಪ್ರತಿಕ್ರಿಯಿಸಿದ ಅವರು, ‘ಈ ಹಿಂದೆ ಸಿದ್ದರಾಮಯ್ಯರ ಅವಧಿಯಲ್ಲಿ ಆರಂಭಿಸಿದ ಕೃಷಿ ಹೊಂಡ ಯೋಜನೆ ಉತ್ತಮ ಯೋಜನೆ. ರೈತರಿಗೆ ಇದರಿಂದ ಅನುಕೂಲ ಆಗುವುದರಲ್ಲಿ ಎರಡೂ ಮಾತಿಲ್ಲ. ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿಯೂ ಬದು ನಿರ್ಮಾಣದ ಮೂಲಕ ಅಂತರ್ಜಲ ಸಂರಕ್ಷಣೆ ಇಂಗು ಗುಂಡಿಗಳನ್ನು ನಿರ್ಮಾಣ ಮಾಡಲಾಗುತ್ತಿದೆ' ಎಂದರು.

‘ಕೃಷಿ ಹೊಂಡಗಳು ಕೆಲ ಜಿಲ್ಲೆ ಮತ್ತು ತಾಲೂಕುಗಳಲ್ಲಿ ಅತ್ಯಂತ ಹೆಚ್ಚು, ಇನ್ನೂ ಕೆಲವು ಕಡೆಗಳಲ್ಲಿ ಕಡಿಮೆ ಆಗಿದ್ದು, ಆ ವ್ಯತ್ಯಾಸವನ್ನು ಸರಿಪಡಿಸಲಾಗುವುದು. ಮಳೆ ಆಶ್ರಿತ ಪ್ರದೇಶದಲ್ಲಿ ಕೃಷಿ ಹೊಂಡಗಳನ್ನು ನಿರ್ಮಿಸಲು ಹೆಚ್ಚಿನ ಆದ್ಯತೆ ನೀಡಲಾಗುವುದು. ರೈತರ ಬೇಡಿಕೆಗಳನ್ನು ಆಧರಿಸಿ ಕೃಷಿ ಹೊಂಡ ಯೋಜನೆ ಪುನರ್ ಆರಂಭಿಸುವ ಸಂಬಂಧ ತೀರ್ಮಾನ ಮಾಡಲಾಗುವುದು' ಎಂದು ಹೇಳಿದರು.

ಆರಂಭಕ್ಕೆ ಮಾತನಾಡಿದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ‘ಕೃಷಿ ಹೊಂಡ ಯೋಜನೆ ಅತ್ಯಂತ ಉತ್ತಮ ಯೋಜನೆಯಾಗಿದೆ ಎಂದು ಕೃಷಿ ಇಲಾಖೆ ತಜ್ಞರು ವರದಿ ನೀಡಿದ್ದು, ಆ ಯೋಜನೆಯನ್ನು ನಿಲ್ಲಿಸಲಾಗಿದೆ. ರೈತರಿಗೆ ಅನುಕೂಲ ಆಗುವ ಯೋಜನೆಯನ್ನು ನಿಲ್ಲಿಸಿದ್ದು ಏಕೆ? ಇದು ರೈತ ವಿರೋಧಿ ಕ್ರಮ. ಕೂಡಲೇ ಆ ಯೋಜನೆಯನ್ನು ಪುನರ್ ಆರಂಭಿಸಬೇಕು' ಎಂದು ಆಗ್ರಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News