×
Ad

ಗೋಶಾಲೆ ಆರಂಭಿಸಿರುವ ಬಗ್ಗೆ ಪ್ರಶ್ನಿಸಿದರೆ ಬರೀ ಕಾಗದ ತೋರಿಸುತ್ತೀರಿ: ಸರಕಾರದ ವಿರುದ್ಧ ಹೈಕೋರ್ಟ್ ಅಸಮಾಧಾನ

Update: 2022-03-29 19:00 IST

ಬೆಂಗಳೂರು, ಮಾ.29: ಪ್ರತಿ ಜಿಲ್ಲೆಗಳಲ್ಲಿ ಗೋಶಾಲೆ ಆರಂಭಿಸಲು ಸ್ಥಳ ಗುರುತಿಸಲಾಗಿದೆ ಹಾಗೂ ಬಜೆಟ್‍ನಲ್ಲಿ ಹಣ ಬಿಡುಗಡೆ ಮಾಡಲಾಗಿದೆ ಎಂದೆಲ್ಲಾ ತಿಳಿಸುತ್ತೀರಿ. ಅವು ಎಲ್ಲೆಲ್ಲಿ ಕಾರ್ಯ ನಿರ್ವಹಿಸುತ್ತಿವೆ ಎಂದು ಪ್ರಶ್ನಿಸಿದರೆ ಬರೀ ಕಾಗದ ತೋರಿಸುತ್ತೀರಲ್ಲಾ ಎಂದು ರಾಜ್ಯ ಸರಕಾರದ ವಿರುದ್ಧ ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ. 

ಹೈಕೋರ್ಟ್ ಕಾನೂನು ಸೇವಾ ಪ್ರಾಧಿಕಾರ ಪ್ರತಿ ತಾಲೂಕಿನಲ್ಲಿ ಗೋಶಾಲೆ ಆರಂಭಿಸಬೇಕು ಹಾಗೂ ಗೋಶಾಲೆಗಳಿಗೆ ಸೂಕ್ತ ಪ್ರಮಾಣದಲ್ಲಿ ಮೇವು, ನೀರು ಮತ್ತು ಜಾಗ ಒದಗಿಸಲು ನಿರ್ದೇಶಿಸಬೇಕೆಂದು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ಹೈಕೋರ್ಟ್ ವಿಭಾಗೀಯ ಪೀಠದಲ್ಲಿ ನಡೆಯಿತು. 

ವಿಚಾರಣೆ ವೇಳೆ ಹೆಚ್ಚುವರಿ ಸರಕಾರಿ ವಕೀಲ ಅರುಣ್ ಶೌರಿ, ಸರಕಾರ ಈಗಾಗಲೇ ಜಮೀನುಗಳನ್ನು ಗುರುತಿಸಿದೆ. ಗುರುತಿಸಲಾದ ಜಮೀನುಗಳಲ್ಲಿ ಗೋಶಾಲೆ ನಿರ್ಮಾಣಕ್ಕಾಗಿ ಹಣವನ್ನೂ ಬಿಡುಗಡೆ ಮಾಡಲಾಗಿದೆ ಎಂದು ಪೀಠಕ್ಕೆ ತಿಳಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ಯಾವ ಜಿಲ್ಲೆಯಲ್ಲಿ ಎಷ್ಟು ಗೋಶಾಲೆ ಕಾರ್ಯ ನಿರ್ವಹಿಸುತ್ತಿವೆ. ಗೋಶಾಲೆ ಎಲ್ಲಿದೆ ಎಂದರೆ ಕೇವಲ ಜಮೀನು ಗುರುತಿಸಿದ್ದೇವೆ, ಹಣ ಬಿಡುಗಡೆ ಮಾಡಿದ್ದೇವೆ ಎಂದು ಹೇಳುತ್ತೀರಿ. ಎಲ್ಲೆಲ್ಲಿ ಕಾರ್ಯ ನಿರ್ವಹಿಸುತ್ತಿವೆ, ಎಲ್ಲೆಲ್ಲಿ ನಿರ್ಮಾಣ ಮಾಡುತ್ತಿದ್ದೀರಿ, ಎಲ್ಲಿ ಅಭಿವೃದ್ಧಿ ಪಡಿಸಿದ್ದೀರಿ ಎಂದರೆ ನಿಮ್ಮ ಬಳಿ ಉತ್ತರವೇ ಇಲ್ಲ. ನಿಮ್ಮ ಗೋಶಾಲೆಯೆಲ್ಲ ಬರೀ ಕಾಗದದ ಮೇಲೆ ಇದ್ದಂತಿದೆ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿ, ವಿಚಾರಣೆ ಮುಂದೂಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News