ಹಿಜಾಬ್ ಪ್ರಕರಣ ತೀರ್ಪು: ಬಂದ್‍ಗೆ ಕರೆ ನೀಡಿದ್ದವರ ವಿರುದ್ಧ ನ್ಯಾಯಾಂಗ ನಿಂದನೆ ಕೇಸ್ ದಾಖಲೆಗೆ ಕೋರಿ ಮನವಿ ಸಲ್ಲಿಕೆ
ಬೆಂಗಳೂರು, ಮಾ.29: ಹಿಜಾಬ್ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ವಿಭಾಗೀಯ ಪೀಠವು ತೀರ್ಪು ನೀಡಿತ್ತು. ಈ ಆದೇಶವನ್ನು ವಿರೋಧಿಸಿ ಕರ್ನಾಟಕ ಬಂದ್‍ಗೆ ಕರೆ ನೀಡಿದ್ದವರ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಲು ಅನುಮತಿ ಕೋರಿ ರಾಜ್ಯ ಅಡ್ವೊಕೇಟ್ ಜನರಲ್‍ಗೆ ಮನವಿ ಸಲ್ಲಿಕೆಯಾಗಿದೆ.
ಬೆಂಗಳೂರಿನ ವಕೀಲ ಎನ್.ಪಿ.ಅಮೃತೇಶ್ ಎಜಿ ಪ್ರಭುಲಿಂಗ ಕೆ. ನಾವದಗಿ ಅವರ ಕಚೇರಿಗೆ ತೆರಳಿ, ಕೋರ್ಟ್ ಆದೇಶ ಧಿಕ್ಕರಿಸುವ ಮೂಲಕ ನ್ಯಾಯಾಂಗದ ಘನತೆ ಕುಗ್ಗಿಸಲು ಯತ್ನಿಸುತ್ತಿರುವವರ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಿ ಕ್ರಮ ಜರುಗಿಸಲು ಅನುಮತಿ ಕೋರಿ ಅರ್ಜಿ ಸಲ್ಲಿಸಿದ್ದಾರೆ.
ಹಿಜಾಬ್ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ತೀರ್ಪಿಗೆ ಯಾವುದೇ ಆಕ್ಷೇಪಣೆ ಇದ್ದರೆ, ಅದನ್ನು ಸುಪ್ರೀಂಕೋರ್ಟ್‍ನಲ್ಲಿ ಪ್ರಶ್ನಿಸಲು ಅರ್ಜಿದಾರರಿಗೆ ಅವಕಾಶವಿದೆ. ಹೀಗಿದ್ದರೂ, ಅರ್ಜಿ ಸಲ್ಲಿಸಿದ್ದ ವ್ಯಕ್ತಿಗಳು ನ್ಯಾಯಾಲಯ ಮತ್ತದರ ತೀರ್ಪಿನ ವಿರುದ್ಧ ವೈಯಕ್ತಿಕ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಜತೆಗೆ, ನ್ಯಾಯಮೂರ್ತಿಗಳ ವಿಶ್ವಾಸಾರ್ಹತೆಯನ್ನೂ ಪ್ರಶ್ನಿಸುತ್ತಿದ್ದಾರೆ. ಈ ಮೂಲಕ ನ್ಯಾಯಾಂಗದ ಘನತೆಯನ್ನು ಕುಗ್ಗಿಸುವ ಯತ್ನ ಮಾಡುತ್ತಿದ್ದಾರೆ ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.
ರೇಶಮ್ ಸೇರಿ ಹಲವರ ವಿರುದ್ಧ ದೂರು: ಹಿಜಾಬ್ ನಿರ್ಬಂಧ ಪ್ರಶ್ನಿಸಿ ಹೈಕೋರ್ಟ್‍ಗೆ ಅರ್ಜಿ ಸಲ್ಲಿಸಿದ್ದ ವಿದ್ಯಾರ್ಥಿನಿಯರಾದ ರೇಶಮ್, ಆಯೇಶಾ ಹಾಜೀರಾ ಅಲ್ಮಾಸ್ ಸೇರಿ ಹಲವರ ವಿರುದ್ಧ ನ್ಯಾಯಾಂಗ ನಿಂದನೆ ಕ್ರಮಕ್ಕೆ ಅನುಮತಿ ಕೋರಲಾಗಿದೆ. ಜತೆಗೆ ಕರ್ನಾಟಕ ವಿದ್ಯಾರ್ಥಿ ಸಂಘಟನೆ ಸೇರಿ ಇನ್ನಿತರ ಹಲವು ಸಂಘಟನೆಗಳ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕ್ರಿಯೆಗೆ ಅನುಮತಿ ಕೋರಲಾಗಿದೆ.