×
Ad

ಮಾ.31ರಂದು ಕಾಂಗ್ರೆಸ್ ಕಾರ್ಯಕರ್ತರಿಂದ ಬೆಲೆ ಏರಿಕೆ ವಿರುದ್ಧ ಪ್ರತಿಭಟನೆ: ಡಿ.ಕೆ.ಶಿವಕುಮಾರ್

Update: 2022-03-29 19:16 IST

ಬೆಂಗಳೂರು, ಮಾ. 29: ‘ಪೆಟ್ರೋಲ್, ಡೀಸೆಲ್ ಹಾಗೂ ಅಡುಗೆ ಅನಿಲ ಬೆಲೆ ಏರಿಕೆ ಖಂಡಿಸಿ ಮಾ.31ಕ್ಕೆ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು, ಮುಖಂಡರು ತಮ್ಮ ಮನೆಯ ಮುಂದೆ ತಮ್ಮ ವಾಹನ, ಅಡುಗೆ ಅನಿಲದ ಸಿಲಿಂಡರ್ ಇಟ್ಟು ಹೂವಿನ ಹಾರ ಹಾಕಿ, ಜಾಗಟೆ ಬಾರಿಸಿ ಪ್ರತಿಭಟನೆ ನಡೆಸಬೇಕು. ಆ ವಿಡಿಯೋ, ಫೋಟೋವನ್ನು ಜಾಲತಾಣಗಳಲ್ಲಿ ಪ್ರಧಾನಿ ಮೋದಿಗೆ ಟ್ಯಾಗ್ ಮಾಡಿ ಹಾಕಬೇಕು' ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕರೆ ನೀಡಿದ್ದಾರೆ.

ಮಂಗಳವಾರ ನಗರದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಇದು ಕಾಂಗ್ರೆಸ್ ಪಕ್ಷದ ಕಾರ್ಯಕ್ರಮ. ಎ.7ರಂದು ಜಿಲ್ಲಾ ಮಟ್ಟದಲ್ಲಿ ಪೆಟ್ರೋಲ್, ಡೀಸೆಲ್, ಅನಿಲ ಬೆಲೆ ಏರಿಕೆ ವಿರೋಧಿಸಿ ರ್ಯಾಲಿ ಹಮ್ಮಿಕೊಳ್ಳಲು ಉದ್ದೇಶಿಸಿದ್ದು, ಬಾಬು ಜಗಜೀವನ್ ರಾಮ್ ಜನ್ಮದಿನದ ಹಿನ್ನೆಲೆಯಲ್ಲಿ ಚರ್ಚಿಸಿ ಪ್ರತಿಭಟನೆ ದಿನಾಂಕ ಪ್ರಕಟಿಸಲಾಗುವುದು' ಎಂದರು.

‘ಎಐಸಿಸಿ ಮುಖಂಡ ರಾಹುಲ್ ಗಾಂಧಿ ಅವರು ಮಾ.31ಕ್ಕೆ ರಾಜ್ಯಕ್ಕೆ ಆಗಮಿಸಲಿದ್ದು, ಪ್ರತಿಭಟನೆ ನಡೆಸಲು ಸೂಚಿಸಲಾಗಿದೆ. ತುಮಕೂರಿನ ಸಿದ್ದಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮಿ ಅವರ 115ನೆ ಜಯಂತಿ ಕಾರ್ಯಕ್ರಮ ನಿಮಿತ್ತ ಮಾ.31ರ ಮಧ್ಯಾಹ್ನ 3.30ಕ್ಕೆ ರಾಹುಲ್ ಗಾಂಧಿ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ ಅವರ ಗದ್ದುಗೆಗೆ ಪೂಜೆ, ಗೌರವ ಸಲ್ಲಿಸಲಿದ್ದಾರೆ. ಅಂದು ಮಧ್ಯಾಹ್ನ 2ಗಂಟೆಗೆ ಬೆಂಗಳೂರು ದೇವನಹಳ್ಳಿ ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದು, ಅಲ್ಲಿಂದ ನೇರವಾಗಿ ಸಿದ್ದಗಂಗಾ ಮಠಕ್ಕೆ ತೆರಳಿ, ಅಲ್ಲಿಯೆ ಪ್ರಸಾದ ಸ್ವೀಕರಿಸಲಿದ್ದಾರೆ' ಎಂದು ಹೇಳಿದರು. 

‘ಅನಂತರ ಬೆಂಗಳೂರಿಗೆ ಆಗಮಿಸಲಿದ್ದು, ಕಾಂಗ್ರೆಸ್ ಕಚೇರಿಯಲ್ಲಿ ಸಭೆ ನಡೆಸಿ ಬಿಬಿಎಂಪಿ ವ್ಯಾಪ್ತಿ ನಾಯಕರನ್ನು ಭೇಟಿ ಮಾಡಲಿದ್ದಾರೆ. ನಂತರ ಎ.1ರಂದು ಎಲ್ಲ ಶಾಸಕರು, ಮಾಜಿ ಶಾಸಕರು, 2018ರ ಚುನಾವಣೆ ಪರಾಜಿತ ಅಭ್ಯರ್ಥಿಗಳು, ಸಂಸತ್ ಚುನಾವಣೆಯಲ್ಲಿ ಸೋತ ಅಭ್ಯರ್ಥಿಗಳು, ಮಾಜಿ ಸಂಸದರು, ವಿವಿಧ ಘಟಕಗಳ ಅಧ್ಯಕ್ಷರ ಜತೆ ಸಭೆ ಮಾಡಲಿದ್ದಾರೆ' ಎಂದು ಹೇಳಿದರು.

‘ಪಕ್ಷದ ಸದಸ್ಯತ್ವ ನೋಂದಣಿಯಲ್ಲಿ ಸಕ್ರಿಯವಾಗಿರುವವರ ಜತೆ ಸಂಪರ್ಕ ಮಾಡಲು ಜೂಮ್ ಮೂಲಕ ಸಭೆ ನಡೆಸಲಿದ್ದು, ರಾಜ್ಯದಲ್ಲಿ ಈಗಾಗಲೇ 47ಲಕ್ಷ ಕಾಂಗ್ರೆಸ್ ಸದಸ್ಯರನ್ನು ನೋಂದಣಿ ಮಾಡಲಾಗಿದ್ದು, ಇಡೀ ದೇಶದಲ್ಲಿ ಮೊದಲ ಸ್ಥಾನದಲ್ಲಿದೆ. ಇನ್ನು ತಾಂತ್ರಿಕ ಕಾರಣದಿಂದ ಪ್ರಾವಿಷನ್ ಆಗಿರುವ ಸದಸ್ಯತ್ವ ಬೇರೆ ಇದೆ. ಮಾ.31ಕ್ಕೆ ಈ ಬಗ್ಗೆ ಸ್ಪಷ್ಟ ಚಿತ್ರಣ ಸಿಗಲಿದೆ. ಸದಸ್ಯತ್ವ ನೋಂದಣಿ ಅವಧಿ ವಿಸ್ತರಣೆ ಮಾಡಬೇಕೆಂದು ಕೆಲವರು ಮನವಿ ಮಾಡಿದ್ದು, ಈ ಬಗ್ಗೆ ದಿಲ್ಲಿ ನಾಯಕರು ತೀರ್ಮಾನಿಸಲಿದ್ದು, ಬ್ಲಾಕ್ ಮಟ್ಟದಿಂದ ರಾಷ್ಟ್ರ ಮಟ್ಟದವರೆಗೂ ಪಕ್ಷದ ವಿವಿಧ ಚುನಾವಣೆಗಳು ತೀರ್ಮಾನ ಆಗಿದ್ದರಿಂದ ನಾವು ತರಾತುರಿಯಲ್ಲಿ ಸದಸ್ಯತ್ವ ಮಾಡಿದ್ದೇವೆ. ಎಲ್ಲವೂ ನೈಜ ಸದಸ್ಯತ್ವವಾಗಿವೆ' ಎಂದು ಅವರು ತಿಳಿಸಿದರು.

‘ಗಾಂಧಿ ಕುಟುಂಬಕ್ಕೂ ಮಠಗಳು ಹಾಗೂ ಎಲ್ಲ ಧರ್ಮಗಳಿಗೂ ಇರುವ ಸಂಬಂಧ ಭಕ್ತ ಹಾಗೂ ಭಗವಂತನಿಗೆ ಇರುವ ಸಂಬಂಧದಂತೆ. ಗಾಂಧಿ ಕುಟುಂಬದವರು ಸಾವಿರಾರು ಮಠಗಳಿಗೆ ಭೇಟಿ ನೀಡಿದ್ದಾರೆ. ಇಂದಿರಾಗಾಂಧಿ ಶೃಂಗೇರಿ ಮಠಕ್ಕೆ ಭೇಟಿ ನೀಡಿ ಹಸ್ತ ತೆಗೆದುಕೊಂಡು ಬಂದ ಇತಿಹಾಸವಿದೆ. ರಾಜೀವ್ ಗಾಂಧಿ ಅವರು ಶೃಂಗೇರಿ ಮಠದಲ್ಲಿ ವಾರಗಟ್ಟಲೆ ಹೋಮ-ಹವನ ಮಾಡಿದ್ದರು. ಸೋನಿಯಾ ಗಾಂಧಿ ಅವರು ಸಿದ್ದಗಂಗಾ ಮಠಕ್ಕೆ ಬಂದು ಸ್ವಾಮೀಜಿ ಅವರ ಗುರುವಂದನಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಮಠಗಳು ಕೊಟ್ಟ ಅನ್ನದಾಸೋಹ ಕಾರ್ಯಕ್ರಮ ಸಂದೇಶವನ್ನು ಇಟ್ಟುಕೊಂಡು ನಾವು ಎಸ್.ಎಂ.ಕೃಷ್ಣ ಅವರ ಕಾಲದಲ್ಲಿ ಬಿಸಿಯೂಟ ಕಾರ್ಯಕ್ರಮ ಆರಂಭಿಸಿದ್ದೆವು. ಈಗ ಕೆಲ ಬಿಜೆಪಿ ನಾಯಕರು ಅದನ್ನು ಹೈಜಾಕ್ ಮಾಡಲು ಹೊರಟಿದ್ದಾರೆ. ಗಾಂಧಿ ಕುಟುಂಬ ಮೊದಲಿನಿಂದಲೂ ಮಠಗಳಿಗೆ ಗೌರವ ನೀಡುತ್ತಿದೆ. ಇದೇನು ಹೊಸದಾಗಿ ಸೃಷ್ಟಿ ಮಾಡುತ್ತಿಲ್ಲ' ಎಂದು ಶಿವಕುಮಾರ್ ತಿಳಿಸಿದರು.

‘ಸಚಿವ ಈಶ್ವರಪ್ಪ ಶೇ.40ರಷ್ಟು ಕಮಿಷನ್ ಆರೋಪ ಸಂಬಂಧ ಈಗಾಗಲೇ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಚರ್ಚೆ ಮಾಡಿದ್ದು, ಮುಖ್ಯಮಂತ್ರಿ ಉತ್ತರಕ್ಕೆ ನಾವು ನಿರೀಕ್ಷೆಯಲ್ಲಿದ್ದೇವೆ. ಶೇ.40ರಷ್ಟು ಕಮಿಷನ್ ಜತೆಗೆ ಬೇರೆ ಭ್ರಷ್ಟಾಚಾರ ವಿಚಾರವಾಗಿ ಏನು ಹೇಳುತ್ತಾರೆಂದು ನೋಡಿ ನಂತರ ಕಾಂಗ್ರೆಸ್ ತನ್ನ ಕಾರ್ಯಯೋಜನೆ ತಿಳಿಸಲಿದೆ' ಎಂದು ಶಿವಕುಮಾರ್ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

‘ನನ್ನ ಮೇಲೆ ಯಾರು ಪತ್ರ ಬರೆದಿದ್ದರು? ನನ್ನ ಮೇಲೆ ಕೇಸ್ ಹಾಕಿ ಜೈಲಿಗೆ ಕಳಿಸಿದಾಗ ಯಾರಾದರೂ ಪತ್ರ ಬರೆದಿದ್ದರಾ? ಯಾವುದಾದರೂ ತನಿಖೆ ಆಗಿತ್ತಾ? ಲಂಚ, ರೇಪ್ ಕೇಸ್‍ಗಳು ದಾಖಲಾಗಿದ್ದವಾ? ಏನು ಇರಲಿಲ್ಲ, ಆದರೂ ನನ್ನ ಮೇಲೆ ದಾಳಿ ಮಾಡಿ ಬಂಧಿಸಿದ್ದು ಏಕೆ? ಈಶ್ವರಪ್ಪ, ಯಡಿಯೂರಪ್ಪನವರ ವಿರುದ್ಧ ರಾಜ್ಯಪಾಲರಿಗೆ ಪತ್ರ ಬರೆದಾಗ ಅವರಿಗೆ ಬುದ್ಧಿ ಇರಲಿಲ್ಲವೇ? ಯತ್ನಾಳ್, ವಿಶ್ವನಾಥ್ ಮಾತನಾಡಿದರಲ್ಲ ಅವರಿಗೆ ಬುದ್ಧಿ ಇರಲಿಲ್ಲವೇ? ಯಾವ ಕ್ರಮ ಕೈಗೊಂಡರು? ಯಾವುದೇ ಕ್ರಮ ಕೈಗೊಳ್ಳದಿರುವುದು ಅವರ ಆರೋಪ ನಿಜ ಎಂದು ಒಪ್ಪಿಕೊಂಡಂತೆ. ಮೌನಂ ಸಮ್ಮತಿ ಲಕ್ಷಣಂ ಎಂಬಂತೆ' ಎಂದು ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದರು.

ಚುನಾವಣೆಗೆ ಸಿದ್ಧ: 

‘ಅವಧಿಪೂರ್ವ ಚುನಾವಣೆ ಅಥವಾ ನಾಳೆ, ನಾಡಿದ್ದು, ಅವರು ಯಾವಾಗ ಬೇಕಾದರೂ ಚುನಾವಣೆ ಮಾಡಲಿ, ಈ ತಿಂಗಳು ಅಥವಾ ನಾಳೆಯೇ ಮಾಡಲಿ, ನವೆಂಬರ್ 27ಕ್ಕೆ ಚುನಾವಣೆ ಪ್ರಕಟಿಸಲಿ, ಕಾಂಗ್ರೆಸ್ ಸಜ್ಜಾಗಿದೆ. ಮಾಧ್ಯಮಗಳಿಗೆ ಮಾಹಿತಿ ನೀಡಲು ಮೂಲಗಳು ಇರುವಂತೆ ನಮಗೂ ಇದ್ದಾರೆ. ನಮಗೂ ಮಾಹಿತಿ ಬರುತ್ತದೆ'

-ಡಿ.ಕೆ.ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News