ಸಿದ್ದರಾಮಯ್ಯ ಅವರಿಂದ ಕುರುಬರಿಗೆ ಇದ್ದ ಕ್ಷೇತ್ರಗಳು ತಪ್ಪುತ್ತಿವೆ: ಎಚ್. ವಿಶ್ವನಾಥ್

Update: 2022-03-29 16:05 GMT

ಬೆಂಗಳೂರು, ಮಾ.29: ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರು ಕುರುಬ ಸಮಾಜದ ಬೆಳವಣಿಗೆಗೆ ಸಹಕಾರ ಕೊಡುತ್ತಿಲ್ಲ. ಅಲ್ಲದೆ, ಕುರುಬರಿಗೆ ಇದ್ದ ಕ್ಷೇತ್ರಗಳನ್ನು ಒಂದೊಂದಾಗಿ ದೂರ ಮಾಡುತ್ತಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಹೆಚ್. ವಿಶ್ವನಾಥ್ ಕಿಡಿಕಾರಿದ್ದಾರೆ.

ಮಂಗಳವಾರ ನಗರದ ಸ್ವಾತಂತ್ರ್ಯ ಉದ್ಯಾನವನದಲ್ಲಿ ಕುರುಬ ಸಮಾಜ ಕೈಗೊಂಡಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಸಮಾಜದ ಹಿತದೃಷ್ಟಿಯಿಂದ ಮಾಡಿದ ಕೆಲಸಗಳಿಗೆ ಸಿದ್ದರಾಮಯ್ಯ ಸ್ಪಂದಿಸಲಿಲ್ಲ.

ಇತ್ತೀಚಿಗೆ ವಿಧಾನಸಭೆ ಚುನಾವಣೆಗೆ ಕುರುಬರಿಗೆ ಕ್ಷೇತ್ರವೇ ಇಲ್ಲದಂತಾಗಿದೆ. ಬಾದಾಮಿಗೆ ಹೋಗಿ ಹಿರಿಯ ನಾಯಕ ಚಿಮ್ಮನಕಟ್ಟಿಗೆ ಅನ್ಯಾಯ ಮಾಡಿದ್ದಲ್ಲದೆ, ಕ್ಷೇತ್ರದಲ್ಲಿ ಚಿಮ್ಮನಕಟ್ಟಿಯನ್ನು ಮೂಲೆಗುಂಪು ಮಾಡಿದ್ದಾರೆ. ಹೆಚ್.ಎಂ. ರೇವಣ್ಣ ಅವರಿಗೂ ಕ್ಷೇತ್ರ ಇಲ್ಲದಂತೆ ಮಾಡಿದ್ದಾರೆ. ನವಲಗುಂದದಲ್ಲಿ ಕೋನರೆಡ್ಡಿಯನ್ನು ಕಾಂಗ್ರೆಸ್ ಪಕ್ಷಕ್ಕೆ ಸೇರಿಸಿಕೊಂಡು ಕುರುಬರಿಗೆ ಅಲ್ಲಿಯೂ ಅನ್ಯಾಯ ಮಾಡಿದ್ದಾರೆ. ಇಂದು ಹುಣಸೂರು ಮತ್ತು ಕೆ.ಆರ್. ನಗರದಲ್ಲಿ ನಮ್ಮನ್ನು ಸೋಲಿಸಿದ್ದಾರೆ ಎಂದು ಸಿಟ್ಟನ್ನು ಹೊರಹಾಕಿದ ಅವರು, ಇಂದು ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಸ್ಪರ್ಧಿಸಲು ಒಂದೂ ಕ್ಷೇತ್ರ ಇಲ್ಲದಂತಾಗಿದೆ ಎಂದು ವ್ಯಂಗ್ಯವಾಗಿ ಹೇಳಿದರು.

ಕ್ಷೇತ್ರ ಹುಡುಕುತ್ತಿರುವ ಸಿದ್ದರಾಮಯ್ಯ ಹುಣಸೂರಿಗೆ ಬಂದಲ್ಲಿ, ಹಳೆಯದನ್ನು ಮರೆತು ನಾವೇ ಗೆಲ್ಲಿಸುತ್ತೇವೆ. ಅವರು ಎಲ್ಲ ನಾಯಕರನ್ನು ತಮ್ಮ ರಾಜಕೀಯ ಸ್ವಾರ್ಥಕ್ಕಾಗಿ ಬಳಸಿ ಬಿಸಾಡಿದ್ದಾರೆ. ಸಿದ್ದರಾಮಯ್ಯ ಯಾರು ಎಂದು ಗೊತ್ತಿಲ್ಲದ ಸಮಯದಲ್ಲಿ ನಾನು ಸೇರಿದಂತೆ ಆಂಟೋನಿ, ಎಸ್.ಎಂ. ಕೃಷ್ಣ, ವಿರೂಪಾಕ್ಷಪ್ಪ ಸೇರಿ ಕಾಂಗ್ರೆಸ್ ಪಕ್ಷಕ್ಕೆ ಸೇರಿಸಿದ್ದನ್ನು ಅವರು ನೆನಪಿಸಿಕೊಂಡರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News