ಬಿಜೆಪಿ ಸರಕಾರ ತೋಡಿದ ಹೊಂಡದೊಳಗೆ ಕಾಂಗ್ರೆಸ್

Update: 2022-03-30 04:04 GMT

'ದೇಶದಲ್ಲಿ ಪ್ರಜಾಪ್ರಭುತ್ವ ಬಲಿಷ್ಠವಾಗಬೇಕಾದರೆ ಬಲಿಷ್ಠ ವಿರೋಧ ಪಕ್ಷದ ಅಗತ್ಯವಿದೆ' ಎಂದು ಬಿಜೆಪಿಯ ನಾಯಕರಾದ ನಿತಿನ್ ಗಡ್ಕರಿ ಹೇಳಿಕೆ ನೀಡಿದ್ದಾರೆ. ಈ ಕಾರಣಕ್ಕಾಗಿಯಾದರೂ ಕಾಂಗ್ರೆಸ್ ಬೆಳೆಯಬೇಕು ಎಂದು ಅವರು ಆಶಯ ವ್ಯಕ್ತಪಡಿಸಿದರು. ಆಡಳಿತ ಪಕ್ಷದಲ್ಲಿದ್ದುಕೊಂಡು ಪ್ರಜಾಸತ್ತೆಯ ಕುರಿತಂತೆ ಅವರು ವ್ಯಕ್ತಪಡಿಸಿದ ಕಾಳಜಿ ಅಭಿನಂದನೀಯವಾಗಿದೆ. ಈ ಹೇಳಿಕೆಯಿಂದ ಎರಡು ಸ್ಪಷ್ಟವಾಗಿದೆ. ಒಂದು, ಕಾಂಗ್ರೆಸ್ ದುರ್ಬಲವಾಗಿದೆ. ಆದುದರಿಂದ ವಿರೋಧ ಪಕ್ಷದ ಹೊಣೆಗಾರಿಕೆಯನ್ನು ನಿಭಾಯಿಸಲು ಅದಕ್ಕೆ ಸಾಧ್ಯವಾಗುತ್ತಿಲ್ಲ ಎಂದು ಅವರು ಹೇಳುತ್ತಿದ್ದಾರೆ. ಇನ್ನೊಂದು, ಆ ಕಾರಣದಿಂದ ದೇಶದ ಪ್ರಜಾಪ್ರಭುತ್ವ ಆತಂಕಕ್ಕೆ ಒಳಗಾಗಿದೆ ಎನ್ನುವ ಕಹಿ ಸತ್ಯವನ್ನೂ ಅವರು ತೋಡಿಕೊಂಡಿದ್ದಾರೆ.

ಕಾಂಗ್ರೆಸ್‌ನ ಕುರಿತ ಕಾಳಜಿಗೆ ಇನ್ನೊಂದು ಕಾರಣವೂ ಇದೆ. ರಾಷ್ಟ್ರೀಯ ಪಕ್ಷವಾಗಿರುವ ಕಾಂಗ್ರೆಸ್ ದುರ್ಬಲವಾಗುತ್ತಿದ್ದಂತೆಯೇ ಬೇರೆ ಬೇರೆ ರಾಜ್ಯಗಳಲ್ಲಿ ಪ್ರಾದೇಶಿಕ ಪಕ್ಷಗಳು ಬಲಿಷ್ಠವಾಗುತ್ತಿವೆ. ಪ್ರಾದೇಶಿಕ ಪಕ್ಷಗಳು ಪ್ರಾದೇಶಿಕತೆಯ ತಳಹದಿಯಲ್ಲಿ ನಿಂತಿರುತ್ತವೆ. ತನ್ನ ರಾಜ್ಯದ ಅಭಿವೃದ್ಧಿ ಅವುಗಳಿಗೆ ಮುಖ್ಯವಾಗುತ್ತದೆ. ಕೇಂದ್ರದಲ್ಲಿರುವ ಸರಕಾರಕ್ಕೆ ಈ ಪಕ್ಷಗಳ ಬೆಂಬಲಬೇಕಾದರೆ, ಈ ಪ್ರಾದೇಶಿಕತೆಯನ್ನು ಗೌರವಿಸಲೇಬೇಕು. ಒಕ್ಕೂಟ ವ್ಯವಸ್ಥೆಗೆ ತಲೆಬಾಗುವುದು ಕೇಂದ್ರಕ್ಕೆ ಅನಿವಾರ್ಯವಾಗುತ್ತದೆ. ಇದಕ್ಕೆ ಅತ್ಯುತ್ತಮ ಉದಾಹರಣೆ ಕೇರಳ ಮತ್ತು ತಮಿಳುನಾಡು. ಅಲ್ಲಿನ ಪ್ರಾದೇಶಿಕ ಪಕ್ಷಗಳು ರಾಜಕೀಯವಾಗಿ ಬಲಿಷ್ಠವಾಗಿರುವುದರಿಂದ, ಕೇಂದ್ರ ಅವರಿಗೆ ಸುಲಭವಾಗಿ ಮಣಿದಿದೆ. ಅವರ ಬೇಡಿಕೆಗಳನ್ನು ಮನ್ನಿಸಿ ಅವರನ್ನು ಒಲಿಸಿಕೊಳ್ಳಲು ಪ್ರಯತ್ನಿಸುತ್ತಿದೆ. ಇತ್ತ ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿದೆ. ಆದರೂ ರಾಜ್ಯಕ್ಕೆ ಯಾವುದೇ ಲಾಭವಾಗಿಲ್ಲ. ಬದಲಿಗೆ ರಾಜ್ಯಕ್ಕೆ ಬರಬೇಕಾದ ಪರಿಹಾರ ಧನವನ್ನೇ ಕೇಂದ್ರ ಹಿಡಿದಿಟ್ಟುಕೊಂಡಿದೆ. ಅನುದಾನಗಳಲ್ಲಿ ಕಡಿತವಾಗಿದೆ. ಜೊತೆಗೆ ಹಿಂದಿಯನ್ನು ರಾಜ್ಯದ ಮೇಲೆ ಹೇರುವ ಸಂಚು ನಡೆಸುತ್ತಿದೆ. ರಾಜ್ಯದಲ್ಲಿ ಒಂದು ಬಲಿಷ್ಠ ಪ್ರಾದೇಶಿಕ ಪಕ್ಷ ಇದ್ದಿದ್ದರೆ ಇಂದು ರಾಜ್ಯದ ಸ್ಥಿತಿ ಹೀಗಾಗುತ್ತಿರಲಿಲ್ಲ. ಎಲ್ಲ ರಾಜ್ಯಗಳನ್ನು ಆಯಾ ಪ್ರಾದೇಶಿಕ ಪಕ್ಷಗಳು ಆಳತೊಡಗಿದರೆ, ಕೇಂದ್ರದ ಸರ್ವಾಧಿಕಾರಿ ಆಡಳಿತಕ್ಕೆ ಧಕ್ಕೆಯಾಗುತ್ತದೆ. ಆದುದರಿಂದ ಅದು ಕಾಂಗ್ರೆಸ್‌ನಂತಹ ರಾಷ್ಟ್ರೀಯ ಪಕ್ಷಗಳು ದುರ್ಬಲವಾಗಬಾರದು ಎಂದು ಬಯಸುತ್ತದೆ.

ಆಡಳಿತಪಕ್ಷವೇ ಮರುಗುತ್ತಿದೆಯೆಂದ ಮೇಲೆ ಕಾಂಗ್ರೆಸ್‌ನ ಸ್ಥಿತಿ ಅದೆಷ್ಟು ದಯನೀಯವಾಗಿರಬೇಕು ಎನ್ನುವುದನ್ನು ನಾವು ಊಹಿಸಬಹುದು. ಸಾಧಾರಣವಾಗಿ ಸರಕಾರವನ್ನು ನಿದ್ದೆಗೆಡಿಸುವುದು ವಿರೋಧ ಪಕ್ಷಗಳು. ಕಾಂಗ್ರೆಸ್ ಆಡಳಿತ ನಡೆಸುತ್ತಿದ್ದಾಗ ಬಿಜೆಪಿ ಯಶಸ್ವಿ ವಿರೋಧಪಕ್ಷವಾಗಿ ಕಾರ್ಯನಿರ್ವಹಿಸಿತ್ತು. ಯುಪಿಎ ಹತ್ತು ಹಲವು ಜನಪರ ಕಾರ್ಯಕ್ರಮಗಳನ್ನು ಹಾಕಿಕೊಂಡರೂ, ಅದು ಮುನ್ನೆಲೆಗೆ ಬರದಂತೆ ತಡೆದು, ಸರಕಾರದ ವಿವಿಧ ಹಗರಣಗಳನ್ನು ದೇಶದ ಮುಂದಿಡುವಲ್ಲಿ ಯಶಸ್ವಿಯಾಗಿತ್ತು. ಇಂದು ಬಿಜೆಪಿ ಈ ದೇಶವನ್ನು ಆಳುತ್ತಿದೆ. ಕಾಂಗ್ರೆಸ್ ಪಕ್ಷ ಪ್ರಶ್ನಿಸಬೇಕಾಗಿತ್ತು ಮತ್ತು ಅದಕ್ಕೆ ಆಡಳಿತ ಪಕ್ಷ ಉತ್ತರಿಸಬೇಕಾಗಿತ್ತು. ಆದರೆ ವಿಪರ್ಯಾಸವೆಂದರೆ, ಈಗಲೂ ಪ್ರಶ್ನೆಗಳನ್ನಿಡುತ್ತಿರುವುದು ಬಿಜೆಪಿ ಸರಕಾರವೇ ಆಗಿದೆ ಮತ್ತು ಕಾಂಗ್ರೆಸ್ ಅದಕ್ಕೆ ಉತ್ತರಿಸುವುದರಲ್ಲೇ ಸಮಯವನ್ನು ವ್ಯಯ ಮಾಡುತ್ತಿದೆ. ಬಿಜೆಪಿ ಸರಕಾರ ತನ್ನ ವೈಫಲ್ಯಗಳು ಮುನ್ನೆಲೆಗೆ ಬರದಂತೆ ನೋಡಿಕೊಳ್ಳಲು ಸಮಸ್ಯೆಗಳನ್ನು ಸೃಷ್ಟಿಸುತ್ತದೆ ಮತ್ತು ಕಾಂಗ್ರೆಸ್ ಆ ಸಮಸ್ಯೆಯನ್ನು ಹೇಗೆ ಎದುರಿಸುವುದು ಎಂದು ಗೊತ್ತಾಗದೇ ಅದರಲ್ಲೇ ಹೊರಳಾಡುತ್ತಿದೆ. ಇತ್ತ, ಬಿಜೆಪಿಯ ವೈಫಲ್ಯಗಳನ್ನು ಪ್ರಶ್ನಿಸುವುದಕ್ಕೆ ಜನರೇ ಇಲ್ಲದಂತಾಗಿದೆ. 'ಪ್ರಶ್ನೆ ಮಾಡಬೇಕಾದವರು ನೀವಲ್ಲ. ಸಮಸ್ಯೆಗಳನ್ನು ಜನರ ಮುಂದಿಡಬೇಕಾದವರು ನಾವು, ನೀವಲ್ಲ. ನಿಮ್ಮದು ಉತ್ತರ ಕೊಡುವ ಕೆಲಸ' ಎನ್ನುವ ಸ್ಪಷ್ಟತೆ ಕೇಂದ್ರದಲ್ಲಾಗಲಿ, ರಾಜ್ಯದಲ್ಲಾಗಲಿ ಕಾಂಗ್ರೆಸ್‌ಗೆ ಇಲ್ಲವಾಗಿದೆ.

ಸಮಸ್ಯೆಗಳನ್ನು ಮರೆಸುವುದಕ್ಕೆ ಹಿಜಾಬ್ ವಿವಾದವನ್ನು ಸರಕಾರ ಸೃಷ್ಟಿಸುತ್ತದೆ. ಇದನ್ನು ಸ್ಪಷ್ಟವಾಗಿ ಎದುರಿಸಿ, ಅದಕ್ಕಿಂತಲೂ ದೊಡ್ಡದಾಗಿರುವ ಜನರ ಗ್ಯಾಸ್, ಪೆಟ್ರೋಲ್ ಬೆಲೆಯೇರಿಕೆಯನ್ನು ಮುಂದಿಡುವಲ್ಲಿ ಕಾಂಗ್ರೆಸ್ ವಿಫಲವಾಗುತ್ತದೆ. ಇತ್ತ ಹಿಜಾಬ್‌ಗೆ ಹೇಗೆ ಪ್ರತಿಕ್ರಿಯಿಸಬೇಕು ಎನ್ನುವುದೂ ತಿಳಿಯದೆ ಮತ್ತೆ ಬಿಜೆಪಿ ತೋಡಿದ ಹೊಂಡದಲ್ಲಿ ಬಿದ್ದು ಬಿಡುತ್ತದೆ. ಕೊರೋನಕಾಲದಲ್ಲಿ ಹದಗೆಟ್ಟ ಶಿಕ್ಷಣ, ಶಾಲೆಯಿಂದ ಹೊರಬಿದ್ದಿರುವ ವಿದ್ಯಾರ್ಥಿಗಳು, ಇನ್ನಷ್ಟು ಹಿಂದೆ ಬಿದ್ದಿರುವ ಸರಕಾರಿ ಶಾಲೆಗಳನ್ನು ಮುಂದಿಟ್ಟು ಬಿಜೆಪಿ ಸರಕಾರವನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿ ಅವರಿಂದ ಉತ್ತರ ಪಡೆಯುವ ಕೆಲಸವನ್ನು ಕಾಂಗ್ರೆಸ್ ಮಾಡುವುದೇ ಇಲ್ಲ. ಕೊರೋನ ಕಾಲದಲ್ಲಿ ನಡೆದ ಅವ್ಯವಹಾರಗಳನ್ನು ಮುಂದಿಟ್ಟು ಸರಕಾರವನ್ನು ಮುಜುಗರಕ್ಕೆ ಸಿಲುಕಿಸಲು ದೊಡ್ಡದೊಂದು ಆಂದೋಲವನ್ನೇ ಮಾಡಬಹುದಿತ್ತು. ಆದರೆ ಕೊರೋನದಲ್ಲಿ ನಡೆದ ಅವ್ಯವಹಾರ ಆರೋಪವನ್ನು ದಡ ಮುಟ್ಟಿಸುವಲ್ಲಿ ಕಾಂಗ್ರೆಸ್‌ಗೆ ಆಸಕ್ತಿಯೇ ಇಲ್ಲವಾಯಿತು. ಬಹುಶಃ ಈ ಹಿಂದೆ ಆಳಿದ ಯಾವ ಸರಕಾರವೂ ಇಷ್ಟೊಂದು ಹಗರಣಗಳನ್ನು ಮಾಡಿರಲಿಕ್ಕಿಲ್ಲ.

ನೋಟು ನಿಷೇಧದಿಂದಾಗಿರುವ ದುಷ್ಪರಿಣಾಮ, ವೈಫಲ್ಯಗಳನ್ನು ಜನರ ಮುಂದಿಡುವಲ್ಲಿ ಅದು ವಿಫಲವಾಯಿತು. ಲಾಕ್‌ಡೌನ್‌ನಿಂದಾಗಿ ಜನರಿಗಾದ ಅನ್ಯಾಯಗಳನ್ನೂ ಪ್ರಶ್ನಿಸಿ ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವಲ್ಲೂ ಕಾಂಗ್ರೆಸ್ ಹಿಂದೆ ಬಿತ್ತು. ಆಕ್ಸಿಜನ್ ವೈಫಲ್ಯದ ಬಗ್ಗೆ ಗದ್ದಲ ಎಬ್ಬಿಸುವ ಎದೆಗಾರಿಕೆಯೂ ಕಾಂಗ್ರೆಸ್ ಬಳಿ ಇರಲಿಲ್ಲ. ದಲಿತರ ಮೇಲೆ ನಡೆಯುತ್ತಿರುವ ದೌರ್ಜನ್ಯ, ಅಂಬೇಡ್ಕರ್‌ಗೆ ಅವಮಾನ, ನಾರಾಯಣ ಗುರುಗಳಿಗಾದ ಅಪಮಾನ, ಇವೆಲ್ಲದರ ನಡುವೆ ತಾಂಡವವಾಡುತ್ತಿರುವ ಬಡತನ, ಬೆಲೆಯೇರಿಕೆ, ಬ್ಯಾಂಕ್‌ಗಳ ಖಾಸಗೀಕರಣ...ಹೀಗೆ ಸಾಲು ಸಾಲು ವಿಷಯಗಳಿದ್ದರೂ, ಕಾಂಗ್ರೆಸ್ ಅವೆಲ್ಲವನ್ನೂ ಪರಿಣಾಮಕಾರಿಯಾಗಿ ಮಂಡಿಸುವುದಕ್ಕೆ, ಜನರ ಮುಂದಿಡುವುದಕ್ಕೆ ವಿಫಲವಾಗಿದೆ. ಸರಕಾರದ ಭ್ರಷ್ಟಾಚಾರವನ್ನು ಬರೇ ಒಂದು ಪ್ರೆಸ್‌ಮೀಟ್‌ನಲ್ಲಿ ಖಂಡಿಸುವುದಕ್ಕೆ ವಿರೋಧಪಕ್ಷದ ಅಗತ್ಯವಿದೆಯೇ? ಅದನ್ನು ಜನರ ಮುಂದೆ ಕೊಂಡೊಯ್ದು ಜನರಲ್ಲಿ ಅಭಿಪ್ರಾಯ ರೂಪಿಸುವ ಕೆಲಸವನ್ನು ಯಾಕೆ ಕಾಂಗ್ರೆಸ್ ಮಾಡುತ್ತಿಲ್ಲ? ಆರ್ಥಿಕ ಸಂಕಷ್ಟದಲ್ಲಿ ಜನರಿಗೆ ಯಾವ ರೀತಿಯಲ್ಲೂ ಉಪಯೋಗಕ್ಕೆ ಬರದ ಭಾವನಾತ್ಮಕ ವಿಷಯಗಳನ್ನು ಮುಂದಿಟ್ಟು ಬಿಜೆಪಿ ತನ್ನನ್ನು ರಕ್ಷಿಸಿಕೊಳ್ಳಬಹುದಾದರೆ, ಬಿಜೆಪಿ ಸರಕಾರದ ಆಡಳಿತ ವೈಫಲ್ಯಗಳನ್ನು, ಹಗರಣಗಳನ್ನು ಜನರಿಗೆ ತಲುಪಿಸುವಲ್ಲಿ ಯಾಕೆ ಕಾಂಗ್ರೆಸ್‌ಗೆ ಸಾಧ್ಯವಾಗುತ್ತಿಲ್ಲ? ಪ್ರೆಸ್‌ಮೀಟ್‌ಗಳನ್ನು ನಿಲ್ಲಿಸಿ ಕಾಂಗ್ರೆಸ್ ಪಕ್ಷ ತನ್ನ ಕಾರ್ಯಕರ್ತರನ್ನು ಸಂಘಟಿಸಿ ಸರಕಾರದ ವೈಫಲ್ಯಗಳನ್ನು ಜನರ ಬಳಿಗೆ ಕೊಂಡೊಯ್ಯುವವರೆಗೆ ಕಾಂಗ್ರೆಸ್ ಪಕ್ಷದ ನಾಯಕರು ಬಿಜೆಪಿ ತೋಡಿದ ಹೊಂಡದೊಳಗೆ ಒದ್ದಾಡುತ್ತಾ ಇರಬೇಕಾಗುತ್ತದೆ. ನಿಧಾನಕ್ಕೆ ಕಾಂಗ್ರೆಸ್‌ನ ಜಾಗವನ್ನು ಪ್ರಾದೇಶಿಕ ಪಕ್ಷಗಳು ತನ್ನ ತೆಕ್ಕೆಗೆ ತೆಗೆದುಕೊಂಡರೆ ಅದರಲ್ಲಿ ಅಚ್ಚರಿಯೇನೂ ಇಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News