×
Ad

ಹಲಾಲ್ ಆಹಾರ 'ಆರ್ಥಿಕ ಜಿಹಾದ್' ಎಂದ ಸಿ.ಟಿ.ರವಿ

Update: 2022-03-30 08:59 IST

ಬೆಂಗಳೂರು: ಕೆಲ ಬಲಪಂಥೀಯ ಸಂಘಟನೆಗಳು ಇದೀಗ ಹಲಾಲ್ ಮಾಂಸದ ನಿಷೇಧಕ್ಕೆ ಒತ್ತಾಯಿಸುತ್ತಿರುವ ನಡುವೆಯೇ, ಹಲಾಲ್ ಆಹಾರ "ಆರ್ಥಿಕ ಜಿಹಾದ್" ಎಂದು ಹೇಳುವ ಮೂಲಕ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ವಿವಾದದ ಕಿಡಿ ಹೊತ್ತಿಸಿದ್ದಾರೆ.

ಕಳೆದ ಎರಡು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಹಿಂದೂಗಳು ಹಲಾಲ್ ಮಾಂಸವನ್ನು ಅದರಲ್ಲೂ ಮುಖ್ಯವಾಗಿ, ಹಿಂದೂ ಹೊಸ ವರ್ಷ ಆರಂಭದ ಸಂಕೇತವಾದ ಯುಗಾದಿ ಬಳಿಕ ಬಹಿಷ್ಕರಿಸಬೇಕು ಎಂದು ಕರೆ ನೀಡುವ ಸಂದೇಶಗಳು ವ್ಯಾಪಕವಾಗಿ ಹರಿದಾಡುತ್ತಿವೆ.

ಯುಗಾದಿಯ ಮರುದಿನ ಹಿಂದೂಗಳಲ್ಲಿ ಮಾಂಸಾಹಾರಿಗಳು ದೇವರಿಗೆ ಮಾಂಸ ನೈವೇದ್ಯ ಮಾಡುವ ಮೂಲಕ ಹೊಸ ವರ್ಷ ಆಚರಿಸುತ್ತಾರೆ. ಇದನ್ನು ನಿಲ್ಲಿಸುವಂತೆ ಬಲಪಂಥೀಯ ಸಂಘಟನೆಗಳು ಕರೆ ನೀಡುತ್ತಿವೆ. ದೇವಾಲಯಗಳಲ್ಲಿ ನಡೆಯುವ ಹಿಂದೂ ಧಾರ್ಮಿಕ ಜಾತ್ರೆಗಳ ಸಂದರ್ಭದಲ್ಲಿ ಮುಸ್ಲಿಂ ವ್ಯಾಪಾರಿಗಳನ್ನು ನಿಷೇಧಿಸಬೇಕು ಎಂಬ ಆಗ್ರಹದ ನಡುವೆಯೇ, ಮಾಂಸ ನಿಷೇಧದ ಕೂಗು ಕೇಳಿ ಬರುತ್ತಿದೆ.

"ಹಲಾಲ್ ಒಂದು ಆರ್ಥಿಕ ಜಿಹಾದ್. ಅಂದರೆ ಇದನ್ನು ಜಿಹಾದ್ ರೂಪದಲ್ಲಿ ಬಳಸಲಾಗುತ್ತದೆ. ಅಂದರೆ ಮುಸ್ಲಿಮರು ಇತರರ ಜತೆ ವಹಿವಾಟು ನಡೆಸಬಾರದು. ಹಲಾಲ್ ಮಾಂಸವನ್ನೇ ಬಳಸಬೇಕು ಎಂದು ಅವರು ಯೋಚಿಸುವುದಾದರೆ, ಅದನ್ನು ಬಳಸಬಾರದು ಎಂದು ಹೇಳುವುದರಲ್ಲಿ ತಪ್ಪೇನಿದೆ" ಎಂದು ಸುದ್ದಿಗಾರರೊಂದಿಗೆ ಮಾತನಾಡಿದ ಸಿಟಿ ರವಿ ಪ್ರಶ್ನಿಸಿದರು.

"ಅವರ ದೇವರಿಗೆ" ನೀಡುವ ಹಲಾಲ್ ಮಾಂಸ ಮುಸ್ಲಿಮರಿಗೆ ಪ್ರೀತಿ. ಆದರೆ ಹಿಂದೂಗಳಿಗೆ ಅದು ಕೆಲವರು ಬಿಟ್ಟ ಆಹಾರ. ಮುಸ್ಲಿಮರಿಂದ ಮಾತ್ರವೇ ಉತ್ಪನ್ನಗಳನ್ನು ಖರೀದಿಸಬೇಕು ಎಂದು ಮಾಡುವ ಸಲುವಾಗಿ ಯೋಜಿತವಾಗಿ ಹಲಾಲ್ ಮಾರಾಟ ಮಾಡಲಾಗುತ್ತಿದೆ. ಮುಸ್ಲಿಮರು ಹಿಂದೂಗಳಿಂದ ಮಾಂಸ ಖರೀದಿಸಲು ನಿರಾಕರಿಸುವುದಾದರೆ, ಹಿಂದೂಗಳು ತಮ್ಮಿಂದ ಖರೀದಿಸಬೇಕು ಎಂದು ಏಕೆ ಒತ್ತಾಯಿಸುತ್ತೀರಿ? ಇದನ್ನು ಕೇಳಲು ಜನರಿಗೆ ಯಾವ ಹಕ್ಕು ಇದೆ ಎಂದು ರವಿ ಕೇಳಿದರು.

ವ್ಯಾಪಾರ ಪದ್ಧತಿಗಳು ದ್ವಿಮುಖವಾಗಿರಬೇಕೇ ವಿನಃ ಏಕಮುಖವಾಗಿರಬಾರದು. ಮುಸ್ಲಿಮರು ಹಲಾಲ್ ಹೊರತುಪಡಿಸಿದ ಮಾಂಸ ತಿನ್ನಲು ಒಪ್ಪಿದರೆ, ಬಳಿಕ ಹಿಂದೂಗಳು ಕೂಡಾ ಹಲಾಲ್ ಮಾಂಸ ಬಳಸುತ್ತಾರೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News