ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲೇ ಮುಂಬರುವ ಚುನಾವಣೆ: ಯಡಿಯೂರಪ್ಪ
ಮೈಸೂರು: ಮುಂಬರುವ ಸಾರ್ವತ್ರಿಕ ಚುನಾವಣೆಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲೇ ಎದುರಿಸಲಿದ್ದು, ಯಾವುದೇ ಕಾರಣಕ್ಕೂ ಮುಖ್ಯಮಂತ್ರಿ ಬದಲಾವಣೆ ಪ್ರಶ್ನೆಯೇ ಇಲ್ಲ ಎಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಸ್ಪಷ್ಟಪಡಿಸಿದರು.
ನಗರದ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ಸುತ್ತೂರು ಶಾಖಾ ಮಠಕ್ಕೆ ಬುಧವಾರ ಭೇಟಿ ನೀಡಿದ ಅವರು ಸುತ್ತೂರು ಶ್ರೀಶಿವರಾತ್ರೀ ದೇಶಿಕೇಂದ್ರ ಸ್ವಾಮೀಜಿ ಆಶೀರ್ವಾದ ಪಡೆದು ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು.
ಮುಂದಿನ ಚುನಾವಣೆ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲೇ ನಡೆಯಲಿದೆ. ಯಾವುದೇ ಊಹ ಪೋಹಗಳಿಗೆ ಕಿವಿಗೊಡಬೇಡಿ, ಅವದಿಗೆ ಮುನ್ನ ಚುನಾವಣೆ ಬರುವುದಿಲ್ಲ ಎಂದು ಹೇಳಿದರು.
ಎಪ್ರಿಲ್ 1ರಂದು ಅಮಿತ್ ಶಾ ರಾಜ್ಯಕ್ಕೆ ಭೇಟಿ ನೀಡಲಿದ್ದಾರೆ. ಅವರ ಭೇಟಿ ವಿಚಾರದ ಬಗ್ಗೆ ತಿಳಿಸಲಿದ್ದೇವೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರನ್ನು ನೂರಕ್ಕೆ ನೂರರಷ್ಟು ನಮ್ಮ ಜೊತೆಗೆ ತೆಗೆದುಕೊಂಡು ಹೋಗಲಿದ್ದೇವೆ ಎಂದರು.
ಕಾಂಗ್ರೆಸ್ ಏನೆ ಹೇಳಿದರು ಮುಂಬರುವ ಚುನಾವಣೆಯಲ್ಲಿ ನೂರಕ್ಕೆ ನೂರು ನಾವೇ ಅಧಿಕಾರಕ್ಕೆ ಬರಲಿದ್ದೇವೆ. 140 ಸ್ಥಾನ ಪಡೆದು ಅಧಿಕಾರಕ್ಕೆ ಬರುವುದು ನೂರರಷ್ಟು ಸತ್ಯ. ಇಂದು ಅಧಿವೇಶನದ ಕೊನೆಯ ದಿನ.ನಾವು ಕೊಟ್ಟ ಭರವಸೆಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಈಡೇರಿಸಲಿದ್ದಾರೆ ಎಂದು ಹೇಳಿದರು. ನನ್ನ ಮಗ ವಿಜಯೇಂದ್ರನಿಗೆ ಯಾವುದೇ ಸ್ಥಾನ ಮಾನ ನೀಡುವ ಬಗ್ಗೆ ನಾನು ಯಾರೊಂದಿಗೂ ಚರ್ಚೆ ಮಾಡಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಎಪ್ರಿಲ್ ಒಂದರ ಬಂತರ ನಾಲ್ಕು ತಂಡಗಳಾಗಿ ರಾಜ್ಯ ಪ್ರವಾಸ ಮಾಡುತ್ತೇವೆ. ರಾಜ್ಯದಲ್ಲಿ ಬಿಜೆಪಿಗೆ ಅನುಕೂಲಕರವಾದ ವಾತಾವರಣವಿದ್ದು, ನಾವು ಮಾಡಿರುವ ಕೆಲಸಗಳನ್ನು ಮನೆಗೆ ತಲುಪಿಸುವ ಕೆಲಸ ಮಾಡಲಾಗುವುದು ಎಂದು ತಿಳಿಸಿದರು.