ಐಎಎಸ್, ಐಪಿಎಸ್ ಅಧಿಕಾರಿಗಳ ವರ್ಗಾವಣೆಗೆ ಸಿಎಸ್‍ಬಿ ರಚಿಸದ ಸರಕಾರಕ್ಕೆ ಹೈಕೋರ್ಟ್ ನೋಟಿಸ್

Update: 2022-03-30 12:14 GMT

ಬೆಂಗಳೂರು, ಮಾ.30: ಐಎಎಸ್ ಮತ್ತು ಐಪಿಎಸ್ ಸೇರಿ ನಾಗರಿಕ ಸೇವೆಯಲ್ಲಿರುವ ಅಧಿಕಾರಿಗಳ ವರ್ಗಾವಣೆಗೆ ಕೇಂದ್ರ ನಾಗರಿಕ ಸೇವಾ ಮಂಡಳಿ(ಸಿಎಸ್‍ಬಿ) ರಚಿಸದ ವಿಚಾರಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ರಾಜ್ಯ ಸರಕಾರಕ್ಕೆ ನೋಟಿಸ್ ಜಾರಿ ಮಾಡಿದೆ. 

ಕೇಂದ್ರ ನಾಗರಿಕ ಸೇವಾ ಮಂಡಳಿ(ಸಿಎಸ್‍ಬಿ) ರಚಿಸುವಂತೆ ಕೋರಿ ವಕೀಲೆ ಸುಧಾ ಕಾಟ್ವಾ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ವಿಭಾಗೀಯ ಪೀಠ, ಪ್ರತಿವಾದಿಗಳಾದ ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಹಾಗೂ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ನೋಟಿಸ್ ಜಾರಿಗೊಳಿಸಿತು.

ಸುಪ್ರೀಂಕೋರ್ಟ್ ಮತ್ತು ಹೈಕೋರ್ಟ್ ಆದೇಶ ನೀಡಿ ಹಲವು ವರ್ಷ ಕಳೆದರೂ ಈವರೆಗೂ ಏಕೆ ರಾಜ್ಯದಲ್ಲಿ ವರ್ಗಾವಣೆಗೆ ಸಂಬಂಧಿಸಿದಂತೆ ನಾಗರಿಕ ಸೇವಾ ಮಂಡಳಿ ರಚನೆ ಮಾಡಿಲ್ಲ ಎಂಬ ಬಗ್ಗೆ ವಿವರಣೆ ನೀಡುವಂತೆ ಸರಕಾರಕ್ಕೆ ಸೂಚನೆ ನೀಡಿತು.

ಅರ್ಜಿದಾರ ಪರ ವಕೀಲ ಎಸ್.ಉಮಾಪತಿ ವಾದ ಮಂಡಿಸಿದರು. ಐಎಎಸ್, ಐಪಿಎಸ್ ಸೇರಿದಂತೆ ನಾಗರಿಕ ಸೇವೆಯಲ್ಲಿರುವ ಅಧಿಕಾರಿಗಳು ದಕ್ಷತೆ ಹಾಗೂ ನಿರ್ಭೀತಿಯಿಂದ ಕರ್ತವ್ಯ ನಿರ್ವಹಿಸಬೇಕು. ಆದರೆ, ವರ್ಗಾವಣೆಗೆ ಕನಿಷ್ಠ ಅವಧಿ ನಿಗದಿ ಮಾಡದ ಕಾರಣ ರಾಜಕಾರಣಿಗಳು ಇವರನ್ನು ಮನಬಂದಂತೆ ವರ್ಗಾವಣೆ ಮಾಡುತ್ತಿದ್ದಾರೆ. ಇದು ಭ್ರಷ್ಟಾಚಾರಕ್ಕೂ ದಾರಿಯಾಗಿದೆ.

ನಾಗರಿಕ ಸೇವೆಯಲ್ಲಿರುವ ಅಧಿಕಾರಿಗಳ ವರ್ಗಾವಣೆಗೆ ಕನಿಷ್ಠ ಸೇವಾವಧಿ ನಿಯಮ ಜಾರಿಗೊಳಿಸುವಂತೆ ಹಾಗೂ ವರ್ಗಾವಣೆ ಪ್ರಕ್ರಿಯೆ ನಡೆಸಲು ಕೇಂದ್ರ ನಾಗರಿಕ ಸೇವಾ ಮಂಡಳಿ ರಚಿಸುವಂತೆ ಸುಪ್ರೀಂಕೋರ್ಟ್ 2013ರ ಅಕ್ಟೋಬರ್ 30ರಂದು ಎಲ್ಲ ರಾಜ್ಯ ಸರಕಾರಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ನಿರ್ದೇಶಿಸಿದೆ.

ಐಎಎಸ್ ಅಧಿಕಾರಿಗಳಾದ ರೋಹಿಣಿ ಸಿಂಧೂರಿ ಮತ್ತು ಶರತ್ ನಡುವಿನ ವರ್ಗಾವಣೆ ವ್ಯಾಜ್ಯ ವಿಚಾರಣೆ ನಡೆಸಿದ್ದ ಹೈಕೋರ್ಟ್, 2 ತಿಂಗಳಲ್ಲಿ ಸಿಎಸ್‍ಬಿ ರಚಿಸುವಂತೆ 2021ರ ಜುಲೈ 8ರಂದೇ ರಾಜ್ಯ ಸರಕಾರಕ್ಕೆ ಆದೇಶಿಸಿದೆ. ಆದರೆ, ರಾಜ್ಯ ಸರಕಾರ ಸುಪ್ರೀಂ ಹಾಗೂ ಹೈಕೋರ್ಟ್ ಆದೇಶಗಳನ್ನು ಈವರೆಗೂ ಪಾಲಿಸಿಲ್ಲ. ಹೀಗಾಗಿ, ನಾಗರಿಕ ಸೇವೆಯಲ್ಲಿರುವ ಅಧಿಕಾರಿಗಳ ವರ್ಗಾವಣೆಗೆ ಕನಿಷ್ಠ ಅವಧಿ ನಿಗದಿಪಡಿಸುವ ಸಲುವಾಗಿ ನೀತಿ ರೂಪಿಸಲು ಹಾಗೂ ಮಂಡಳಿ ರಚಿಸಲು ರಾಜ್ಯ ಸರಕಾರಕ್ಕೆ ನಿರ್ದೇಶಿಸಬೇಕು ಎಂದು ಅರ್ಜಿದಾರರು ಕೋರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News