ಎಸ್ಟಿ ಮೀಸಲಾತಿ ಹೆಚ್ಚಳ: ಸಮುದಾಯಕ್ಕೆ ನ್ಯಾಯ ಒದಗಿಸಲು ಸೂಕ್ತ ಕ್ರಮ; ಮುಖ್ಯಮಂತ್ರಿ ಬೊಮ್ಮಾಯಿ

Update: 2022-03-30 12:18 GMT

ಬೆಂಗಳೂರು, ಮಾ. 30: ‘ಪರಿಶಿಷ್ಟ ಪಂಗಡ(ಎಸ್ಟಿ)ದ ಮೀಸಲಾತಿ ಪ್ರಮಾಣ ಹೆಚ್ಚಳ ಬೇಡಿಕೆ ಆಗ್ರಹಿಸಿ ಧರಣಿ ಕೈಗೊಂಡಿರುವ ಪ್ರಸನ್ನಾನಂದಪುರಿ ಸ್ವಾಮಿ ತಮ್ಮ ಸತ್ಯಾಗ್ರಹವನ್ನು ಕೂಡಲೇ ಕೈಬಿಡಬೇಕು. ಸಮುದಾಯಕ್ಕೆ ನ್ಯಾಯ ಒದಗಿಸಲು ಸರಕಾರ ಇನ್ನು ಹತ್ತು, ಹದಿನೈದು ದಿನಗಳಲ್ಲಿ ಸೂಕ್ತ ತೀರ್ಮಾನವನ್ನು ಕೈಗೊಳ್ಳಲಿದೆ' ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದಿಲ್ಲಿ ಮನವಿ ಮಾಡಿದ್ದಾರೆ.

ಬುಧವಾರ ವಿಧಾನಸಭೆಯಲ್ಲಿ ಎಸ್ಟಿ ಮೀಸಲಾತಿ ಹೆಚ್ಚಳ ಸಂಬಂಧ ಮೀಸಲು ಕ್ಷೇತ್ರಗಳಿಂದ ಆಯ್ಕೆಯಾಗಿರುವ ಕಾಂಗ್ರೆಸ್ ಪಕ್ಷದ ಸದಸ್ಯರಾದ ರಘುಮೂರ್ತಿ, ಬಸನಗೌಡ ದದ್ದಲ್, ಪ್ರಿಯಾಂಕ್ ಖರ್ಗೆ, ಭೀಮಾನಾಯ್ಕ್ ಸೇರಿದಂತೆ ಇನ್ನಿತರರ ಪ್ರಸ್ತಾಪಕ್ಕೆ ಪ್ರತಿಕ್ರಿಯಿಸಿದ ಅವರು, ‘ಸತ್ಯಾಗ್ರಹನಿರತ ಸ್ವಾಮಿಗಳ ಜೊತೆ ಸಂಪುಟ ಸಚಿವರು ಮಾತಾಡಿದ್ದು, ಮೀಸಲಾತಿ ಬೇಡಿಕೆಗಳಿಗೆ ಸಂಬಂಧಿಸಿದಂತೆ ನ್ಯಾಯಮೂರ್ತಿ ಸುಭಾಷ್ ಆಡಿ ನೇತೃತ್ವದ ಸಮಿತಿ ಶೀಘ್ರದಲ್ಲೇ ವರದಿ ನಿರೀಕ್ಷೆ ಇದೆ. ಅಡ್ವೋಕೇಟ್ ಜನರಲ್ ಅವರಿಗೂ ವರದಿ ನೀಡಲು ಸೂಚಿಸಿದ್ದು, ವರದಿ ಬಂದ ನಂತರ ಸರ್ವಪಕ್ಷ ಸಭೆ ಕರೆದು ಸೂಕ್ತ ತೀರ್ಮಾನ ಮಾಡಲಾಗುವುದು ಎಂದು ಭರವಸೆ ನೀಡಿದರು.

‘ಜನಸಂಖ್ಯೆ ಅನುಗುಣವಾಗಿ ಮೀಸಲಾತಿ ಕಲ್ಪಿಸಬೇಕೆಂಬ ಬೇಡಿಕೆ ಬಗ್ಗೆ ನಿರ್ಧಾರ ಮಾಡುತ್ತೇವೆ. ಸ್ವಾಮಿ ಮನವೊಲಿಕೆಗೆ ಸಂಪುಟ ಸಚಿವರು ಮಾಡಲಿದ್ದಾರೆ. ಶ್ರೀಗಳು ತಮ್ಮ ಸತ್ಯಾಗ್ರಹವನ್ನು ಹಿಂಪಡೆಯಬೇಕು ಎಂದ ಬಸವರಾಜ ಬೊಮ್ಮಾಯಿ, ಎಸ್ಟಿ ಸಮುದಾಯಕ್ಕೆ ಶೇ.7.5ರಷ್ಟು ಮೀಸಲಾತಿ ಹೆಚ್ಚಳ ಮಾಡಬೇಕೆಂಬ ಬೇಡಿಕೆ ಇದೆ. ಆದರೆ, ಸುಪ್ರೀಂ ಕೋರ್ಟ್ ಒಟ್ಟಾರೆ ಮೀಸಲಾತಿ ಪ್ರಮಾಣ ಶೇ.50ರಷ್ಟು ಮೀರುವಂತಿಲ್ಲ ಎಂದು ಷರತ್ತು ವಿಧಿಸಿದೆ.

‘ಜನಸಂಖ್ಯೆ ಆಧಾರದ ಮೇಲೆ ಎಸ್ಸಿ-ಎಸ್ಟಿಗಳಿಗೆ ಮೀಸಲಾತಿ ಹೆಚ್ಚಿಸಬೇಕೆಂಬ ಆಗ್ರಹವಿದೆ. ಹಿಂದುಳಿದ ವರ್ಗಗಳಲ್ಲಿನ ಕೆಲ ಸಮುದಾಯಗಳು ಎಸ್ಟಿ ಅಡಿಯಲ್ಲಿ ಮೀಸಲಾತಿ ಕಲ್ಪಿಸಬೇಕೆಂದು ಒತ್ತಾಯಿಸುತ್ತಿದ್ದಾರೆ. ಅಲ್ಲದೆ, ಒಬಿಸಿ 3ಎ ಅಡಿಯಲ್ಲಿರುವವರು ಪ್ರವರ್ಗ 2ಎಗೆ ಬರಬೇಕೆಂಬ ಆಗ್ರಹವೂ ಇದೆ. ಹೀಗಾಗಿ ಏನೇ ಕ್ರಮ ವಹಿಸಿದರೂ ಸುಪ್ರೀಂ ಕೋರ್ಟ್ ತೀರ್ಪಿನ ಹಿನ್ನೆಲೆಯಲ್ಲಿ ‘ಮೀಸಲಾತಿ' ಹೆಚ್ಚಿಸಬೇಕಿದೆ. ಈ ಬಗ್ಗೆ ಪರಿಶೀಲಿಸಿ ಸರ್ವಪಕ್ಷ ಸಭೆಯಲ್ಲಿ ಚರ್ಚಿಸಿ ಕಾನೂನು ದೃಷ್ಟಿಯಲ್ಲಿ ಸಮುದಾಯಕ್ಕೆ ನ್ಯಾಯಕೊಡುವ ಕೆಲಸವನ್ನು ನಮ್ಮ ಸರಕಾರ ಮಾಡಲಿದೆ' ಎಂದು ಬಸವರಾಜ ಬೊಮ್ಮಾಯಿ ಅಭಯ ನೀಡಿದರು.

ಮೀಸಲಾತಿ ಪ್ರಮಾಣ ಹೆಚ್ಚಿಸಿ: ಆರಂಭಕ್ಕೆ ಮಾತನಾಡಿದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ‘ಎಸ್ಟಿ ಮೀಸಲಾತಿ ಪ್ರಮಾಣ ಹೆಚ್ಚಳಕ್ಕೆ ಆಗ್ರಹಿಸಿ ವಾಲ್ಮೀಕಿ ಸ್ವಾಮೀಜಿ 49 ದಿನಗಳಿಂದ ಧರಣಿ ನಡೆಸುತ್ತಿದ್ದು, ಸಮಾಜದ ಹಿತರಕ್ಷಣೆ ಜವಾಬ್ದಾರಿ ನಮ್ಮ ಮೇಲಿದೆ. ಆದರೆ, ಸರಕಾರ ಇನ್ನೂ ಅವರನ್ನು ಮನವೊಲಿಸುವ ಕೆಲಸ ಮಾಡಿಲ್ಲ. ಸಚಿವ ಶ್ರೀರಾಮುಲು ಅವರು ಮೀಸಲಾತಿ ಹೆಚ್ಚಳ ಸಂಬಂಧ ನಾನು ರಕ್ತದಲ್ಲಿ ಬರೆದುಕೊಡುತ್ತೇನೆ ಎಂದಿದ್ದರು, ಸರಕಾರ ಶ್ರೀಗಳ ಮನವೊಲಿಸಬೇಕು' ಎಂದು ಸಲಹೆ ನೀಡಿದರು.

‘ಮೀಸಲಾತಿ ಪ್ರಮಾಣ ಶೇ.50ರಷ್ಟು ಮೀರಿ ಹೆಚ್ಚಿಸಲು ಸುಪ್ರೀಂ ಕೋರ್ಟ್ ನಿರ್ಬಂಧ ಹೇರಿದ್ದು, ಮೀಸಲಾತಿ ಪ್ರಮಾಣ ಹೆಚ್ಚಿಸದೆ ಸಮುದಾಯಗಳ ಜನಸಂಖ್ಯೆಯನ್ನು ಆಧರಿಸಿ ಮೀಸಲಾತಿ ಒದಗಿಸಲು ಸಾಧ್ಯವಿಲ್ಲ. ಈ ಮಧ್ಯೆ ಕೇಂದ್ರ ಸರಕಾರ ಸಂವಿಧಾನದ ನಿಯಮಗಳನ್ನು ಗಾಳಿಗೆ ತೂರಿ ಆರ್ಥಿಕವಾಗಿ ಹಿಂದುಳಿದವರಿಗೆ ಶೇ.10ರಷ್ಟು ಮೀಸಲಾತಿ ಕಲ್ಪಿಸಿದೆ. ಮೀಸಲಾತಿ ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಹಿಂದುಳಿದವರಿಗೆ ಮಾತ್ರವೇ ಕಲ್ಪಿಸಬೇಕೆಂದು ಸಂವಿಧಾನ ಹೇಳಿದೆ. ತಮಿಳುನಾಡು ಮಾದರಿಯಲ್ಲೇ ರಾಜ್ಯದಲ್ಲಿಯೂ ಮೀಸಲಾತಿ ಪ್ರಮಾಣ ಹೆಚ್ಚಿಸಬೇಕು' ಎಂದು ಸಿದ್ದರಾಮಯ್ಯ ಆಗ್ರಹಿಸಿದರು.

‘ನ್ಯಾಯಮೂರ್ತಿ ನಾಗಮೋಹನ್ ದಾಸ್ ನೇತೃತ್ವದ ಸಮಿತಿ ವರದಿ ನೀಡಿದ ಬಳಿಕ ಆ ವರದಿ ಅನುಷ್ಠಾನ ಬಿಟ್ಟು ಸರಕಾರ ವಿಳಂಬ ನೀತಿ ಅನುಸಲು ನ್ಯಾ.ಸುಭಾಷ್ ಆಡಿ ಸಮಿತಿ ರಚನೆ ಮಾಡಿರುವುದು ಸರಿಯಲ್ಲ. ನಾಗಮೋಹನ್ ದಾಸ್ ಸಮಿತಿ ವರದಿ ಅನುಷ್ಠಾನಗೊಳಿಸಬೇಕು. ಪರಿಶಿಷ್ಟ ಪಂಗಡಕ್ಕೆ ಶೇ.7.5ರಷ್ಟು ಮೀಸಲಾತಿ ಕಲ್ಪಿಸಲು ಸರಕಾರ ಸೂಕ್ತ ತೀರ್ಮಾನ ಕೈಗೊಳ್ಳಬೇಕು'

-ರಘುಮೂರ್ತಿ ಕಾಂಗ್ರೆಸ್ ಸದಸ್ಯ

‘ಪರಿಶಿಷ್ಟ ಪಂಗಡ(ಎಸ್ಟಿ)ಕ್ಕೆ ಶೇ.7.5ರಷ್ಟು ಮೀಸಲಾತಿ ಹೆಚ್ಚಿಸುವ ಸಂಬಂಧ ನ್ಯಾಯಮೂರ್ತಿ ನಾಗಮೋಹನ್ ದಾಸ್ ಸಮಿತಿ ವರದಿ ಅನುಷ್ಠಾನಕ್ಕೆ ಸರಕಾರ ತ್ವರಿತಗತಿಯಲ್ಲಿ ಕ್ರಮ ಕೈಗೊಳ್ಳಬೇಕು. ಶ್ರೀಗಳು ಬಿಸಿಲು, ಮಳೆ, ಗಾಳಿಯನ್ನು ಲೆಕ್ಕಿಸದೆ ಸತ್ಯಾಗ್ರಹ ಕೈಗೊಂಡಿದ್ದಾರೆ. ಹೀಗಾಗಿ ಸರಕಾರ ಸೂಕ್ತ ನಿರ್ಧಾರವನ್ನು ಪ್ರಕಟಿಸಬೇಕು'

-ರಾಜುಗೌಡ ಬಿಜೆಪಿ ಸದಸ್ಯ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News