ರೈತಸಂಘದಿಂದ ಪರ್ಯಾಯ ರಾಜಕೀಯ ಪಕ್ಷ ರಚಿಸಿ 224 ಕ್ಷೇತ್ರಗಳಲ್ಲೂ ಸ್ಪರ್ಧೆ: ಕೋಡಿಹಳ್ಳಿ ಚಂದ್ರಶೇಖರ್

Update: 2022-03-30 12:30 GMT

ಚಿಕ್ಕಮಗಳೂರು, ಮಾ.30: ರಾಜ್ಯದಲ್ಲಿ ಅಧಿಕಾರದಲ್ಲಿರುವ ಹಾಗೂ ಈ ಹಿಂದೆ ಅಧಿಕಾರದ ನಡೆಸಿರುವ ಯಾವುದೇ ರಾಜಕೀಯ ಪಕ್ಷಗಳಿಂದ ರೈತರು, ಕಾರ್ಮಿಕರು ಸೇರಿದಂತೆ ರಾಜ್ಯದ ಸಮಗ್ರ ಅಭಿವೃದ್ಧಿ ಸಾಧ್ಯವಿಲ್ಲ. ಮುಂದಿನ ವಿಧಾನಸಭೆ ಚುನಾವಣೆಯಲ್ಲಿ 224 ಕ್ಷೇತ್ರಗಳಲ್ಲೂ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗುವುದು ಎಂದು ರೈತಸಂಘ ಹಾಗೂ ಹಸಿರುಸೇನೆ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ತಿಳಿಸಿದ್ದಾರೆ.

ಬುಧವಾರ ಚಿಕ್ಕಮಗಳೂರು ನಗರಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಸದ್ಯ ಅಧಿಕಾರ ನಡೆಸುತ್ತಿರುವ ಬಿಜೆಪಿ ಸರಕಾರ ಸಮಾಜವನ್ನು ಒಡೆದು ಆಳುತ್ತಿದೆಯೇ ಹೊರತು ಜನಪರ ಕಾರ್ಯಕ್ರಮಗಳನ್ನು ನೀಡುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ. ಅಲ್ಪಸಂಖ್ಯಾತರ ವಿರುದ್ಧ ಧ್ವೇಷದ ರಾಜಕಾರಣ ಮಾಡುತ್ತಿರುವ ಬಿಜೆಪಿ ಮುಂದಿನ ವಿಧಾನಸಭೆ ಚುನಾವಣೆ ಲಾಭಕ್ಕಾಗಿ ಸಮಾಜವನ್ನು ಒಡೆಯುತ್ತಿದೆ. ಇನ್ನೂ ವಿರೋಧ ಪಕ್ಷದ ಸ್ಥಾನದಲ್ಲಿರುವ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ಜನರ ಹಿತವನ್ನು ಮರೆತು ಸ್ವಾರ್ಥಕ್ಕಾಗಿ ರಾಜಕಾರಣ ಮಾಡುತ್ತಿವೆ ಎಂದು ಆರೋಪಿಸಿದರು.

ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಪಕ್ಷಗಳಿಗೆ ನಿರ್ದಿಷ್ಟ ಸಿದ್ಧಾಂತ, ಬದ್ಧತೆ, ಇಚ್ಛಾಶಕ್ತಿ ಎಂಬುದೇ ಇಲ್ಲ. ರಾಜ್ಯವನ್ನು ಲೂಟಿ ಮಾಡಿರುವ ಇಂತಹ ರಾಜಕೀಯ ಪಕ್ಷಗಳಿಂದ ರಾಜ್ಯದ ಅಭಿವೃದ್ಧಿಯನ್ನಾಗಲೀ, ರೈತರು, ಕಾರ್ಮಿಕರು, ಬಡಜನರ ಕಲ್ಯಾಣವನ್ನಾಗಲೀ ನಿರೀಕ್ಷೆ ಮಾಡಲೂ ಸಾಧ್ಯವಿಲ್ಲ ಎಂದ ಅವರು, ರಾಜ್ಯದಲ್ಲಿ ಪರ್ಯಾಯ ರಾಜಕಾರಣ ಅತ್ಯಗತ್ಯವಾಗಿದೆ. ಪರ್ಯಾಯ ರಾಜಕರಣ ಎಂದರೆ ಯಡಿಯೂರಪ್ಪ ಅಥವಾ ಬಿಜೆಪಿಗೆ ಪರ್ಯಾಯ ಎಂದರೇ ಸಿದ್ದರಾಮಯ್ಯ, ಎಚ್.ಡಿ.ಕುಮಾರಸ್ವಾಮಿ ಅಲ್ಲ. ಈ ಮೂರು ಪಕ್ಷಗಳಿಗೆ ಪರ್ಯಾಯವಾಗಿ ರೈತ ಸಂಘ ಪರ್ಯಾಯ ರಾಜಕೀಯ ಶಕ್ತಿಯೊಂದನ್ನು ಹುಟ್ಟು ಹಾಕಲಿದೆ. ಈ ನಿಟ್ಟಿನಲ್ಲಿ ಎ.25ರಂದು ಬೆಂಗಳೂರಿನ ನ್ಯಾಷನಲ್ ಕಾಲೇಜು ಆವರಣದಲ್ಲಿ ರೈತರ ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗಿದ್ದು, ಈ ಸಮಾವೇಶದಲ್ಲಿ ಪರ್ಯಾಯ ರಾಜಕೀಯ ಪಕ್ಷದ ಬಗ್ಗೆ ನಿರ್ಣಯಕೈಗೊಳ್ಳಲಾಗುವುದು. ಈ ಪಕ್ಷದಿಂದ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ರಾಜ್ಯದ 224 ಕ್ಷೇತ್ರಗಳಲ್ಲೂ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗುವುದು. ರೈತರೂ ಸೇರಿದಂತೆ ಎಲ್ಲ ಸಮುದಾಯದವರಿಗೆ ಹಾಗೂ ರೈತ ಸಂಘದ ಸಿದ್ಧಾಂತಕ್ಕೆ ಬದ್ಧರಿರುವವರಿಗೆ ಟಿಕೆಟ್ ನೀಡಲಾಗುವುದು ಎಂದರು.

ಈ ವೇಳೆ ರೈತ ಸಂಘ ಹಸಿರುಸೇನೆ ರಾಜ್ಯ ಉಪಾಧ್ಯಕ್ಷ ಭಕ್ತರಹಳ್ಳಿ ಭೈರೇಗೌಡ, ಜಿಲ್ಲಾ ಉಪಾಧ್ಯಕ್ಷರಾದ ದುಗ್ಗಪ್ಪಗೌಡ, ತರೀಕೆರೆ ಮಹೇಶ್, ಮುಖಂಡರಾದ ನಿರಂಜನ್, ವಕೀಲ ಅನಂತ್ ಮತ್ತಿತರರು ಉಪಸ್ಥಿತರಿದ್ದರು.

ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ರಾಜ್ಯವನ್ನು ಲೂಟಿ ಮಾಡಿರುವ ಪಕ್ಷಗಳಾಗಿವೆ. ಮೂರೂ ಪಕ್ಷಗಳಿಗೆ ಅಧಿಕಾರ ಮುಖ್ಯವೇ ಹೊರತು ರೈತರು, ಕಾರ್ಮಿಕರು, ಬಡಜನರ ಹಿತ ಮುಖ್ಯವಲ್ಲ. ಬಿಜೆಪಿಗೆ ಪರ್ಯಾಯ ಸಿದ್ದರಾಮಯ್ಯ ಅಲ್ಲ. ಸಿದ್ದರಾಮಯ್ಯ ಅವರು ಅಧಿಕಾರದಲ್ಲಿದ್ದ ಅವಧಿಯಲ್ಲಿ ಲೋಕಾಯುಕ್ತ ಸಂಸ್ಥೆಯನ್ನೇ ದುರ್ಬಲಗೊಳಿಸಿ ಭ್ರಷ್ಟಾಚಾರ ಹೆಚ್ಚಾಗಲು ಕಾರಣಕರ್ತರಾಗಿದ್ದಾರೆ. ಈ ಲೋಕಾಯುಕ್ತಕ್ಕೆ ಬಲ ನೀಡಿದಲ್ಲಿ ರಾಜ್ಯದ ಮೂವರು ಮಾಜಿ ಮುಖ್ಯಮಂತ್ರಿಗಳು ಜೈಲು ಪಾಲಾಗಲಿದ್ದಾರೆ.

- ಕೋಡಿಹಳ್ಳಿ ಚಂದ್ರಶೇಖರ್
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News