ಟಿಆರ್ ಪಿಗಾಗಿ ಸುದ್ದಿ ವಾಹಿನಿಗಳಿಂದ ಸಮಾಜದಲ್ಲಿ ಅಶಾಂತಿ ಸೃಷ್ಟಿ: ಕುಮಾರಸ್ವಾಮಿ ಆರೋಪ

Update: 2022-03-30 15:46 GMT

ಬೆಂಗಳೂರು, ಮಾ. 30: ‘ಖಾಸಗಿ ಸುದ್ದಿ ಮಾಧ್ಯಮಗಳು ಇಂದು ದೂರು, ವಾದ, ತೀರ್ಪು ನೀಡುವ ನ್ಯಾಯಾಧೀಶರೂ ಅವರೇ ಆಗಿದ್ದಾರೆ. ಸಮಾಜದಲ್ಲಿ ಅಭಿಪ್ರಾಯ ರೂಪಿಸುವವರೂ ಇವರೇ. ತಮ್ಮ ಟಿಆರ್‍ಪಿಗಾಗಿ ಸಮಾಜದಲ್ಲಿ ಅಶಾಂತಿ, ಕಲುಷಿತ ವಾತಾವರಣ ಸೃಷ್ಟಿಸಲು ಅವರೇ ಜವಾಬ್ದಾರರೂ ಆಗುತ್ತಿದ್ದಾರೆ' ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಆರೋಪಿಸಿದ್ದಕ್ಕೆ ಪಕ್ಷ ಭೇದವಿಲ್ಲದೆ ಎಲ್ಲ ಸದಸ್ಯರು ಮೇಜುಕುಟ್ಟಿದ ಪ್ರಸಂಗ ನಡೆಯಿತು.

ಬುಧವಾರ ವಿಧಾನಸಭೆಯಲ್ಲಿ ‘ಚುನಾವಣಾ ವ್ಯವಸ್ಥೆ ಸುಧಾರಣೆಗಳ ಅಗತ್ಯತೆ' ಕುರಿತ ವಿಶೇಷ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ‘ಮಾಧ್ಯಮಗಳನ್ನು ಯಾರೂ ಕೇಳುವವರು ಇಲ್ಲ. ಅವರು ಬೇಕಾದ ರೀತಿಯಲ್ಲಿ ಯಾರನ್ನು ಬೇಕಾದರೂ ಮೇಲಕ್ಕೆ ಕಳುಹಿಸುತ್ತಾರೆ, ಯಾರನ್ನು ಬೇಕಾದರೂ ನೆಲಕ್ಕೆ ಹಾಕಿ ತುಳಿಯುತ್ತಿದ್ದಾರೆ' ಎಂದು ದೂರಿದರು.

‘ಈ ಹಿಂದೆ ಕೆಲ ಸಣ್ಣ ಪುಟ್ಟ, ಕಪ್ಪು-ಬಿಳುಪು ಪತ್ರಿಕೆಗಳು ಬರುತ್ತಿದ್ದವು. ಅವರು ಅಧಿಕಾರಗಳ ಬಳಿ ಹೋಗಿ ಧಮ್ಕಿ ಹಾಕಿ ಹಣ ವಸೂಲಿ ಮಾಡುತ್ತಿದ್ದರು. ಅದೇ ರೀತಿಯಲ್ಲಿ ಇದೀಗ ಖಾಸಗಿ ಸುದ್ದಿ ವಾಹಿನಿಗಳು ಪ್ರತಿನಿತ್ಯ ಎಪಿಸೋಡ್‍ಗಳನ್ನು ಮಾಡಿ ರಾಜ್ಯವನ್ನು ಎಲ್ಲಿಗೆ ತೆಗೆದುಕೊಂಡು ಹೋಗುತ್ತಿದ್ದಾರೆಂದು ಗೊತ್ತಿಲ್ಲ. ನಾವ್ಯಾರು ಇಲ್ಲಿ ಶಾಶ್ವತವಾಗಿ ಇರುವುದಿಲ್ಲ. ಆದರೆ, ಸಮಾಜದಲ್ಲಿ ಅಶಾಂತಿ ಸೃಷ್ಟಿ ಮಾಡಬೇಡಿ' ಎಂದು ಕುಮಾರಸ್ವಾಮಿ ಕೋರಿದರು.

‘ಸುದ್ದಿ ವಾಹಿನಿಗಳು ತಮ್ಮ ಟಿಆರ್‍ಪಿಗಾಗಿ ಸಮವಸ್ತ್ರ ವಿಚಾರದಲ್ಲಿ ಅನಗತ್ಯ ವಿವಾದ ಸೃಷ್ಟಿಸಿದರು. ಸ್ಟೋರಿಗಳ ಮೂಲಕ ಎರಡು ಧರ್ಮಗಳ ನಡುವೆ ದ್ವೇಷ ಉಂಟುಮಾಡುವಲ್ಲಿ ಇವರದ್ದೇ ಪಾತ್ರ. ಇದೀಗ ‘ಹಲಾಲ್' ಹೆಸರಿನಲ್ಲಿ ಗೊಂದಲ. ಇಂತಹ ವಿಚಾರಗಳಿಗೆ ಮಾಧ್ಯಮಗಳು ಪ್ರಾಮುಖ್ಯತೆ ನೀಡುವ ಅಗತ್ಯವೇ ಇಲ್ಲ. ವೈಯಕ್ತಿಕ ಲಾಭಕ್ಕೆ ಸಮಾಜ ಒಡೆಯುವ ಕೆಲಸ ಮಾಡಬಾರದು. ನಿಮ್ಮಗಳ ಮೇಲೆಯೂ ನಾಡಿನ ಜನತೆ ಮತ್ತು ಪ್ರಜಾಪ್ರಭುತ್ವವನ್ನು ಉಳಿಸುವ ಜವಾಬ್ದಾರಿ ಇದೆ' ಎಂದು ಕುಮಾರಸ್ವಾಮಿ ಎಚ್ಚರಿಸಿದರು.

ಇದಕ್ಕೆ ಧ್ವನಿಗೂಡಿಸಿದ ಸ್ಪೀಕರ್ ವಿಶೇಶ್ವರ ಹೆಗಡೆ ಕಾಗೇರಿ, ‘ಇದು ಬಹಳ ಗಂಭೀರವಾದ ವಿಚಾರ, ನೀವು ಪ್ರಸ್ತಾಪ ಮಾಡಿದ್ದೀರಿ. ಉಳಿದವರು ಇಷ್ಟು ಧೈರ್ಯವಾಗಿ ಮಾತನಾಡಲು ಆಗುವುದಿಲ್ಲ. ಆದರೆ ಇದು ನಮ್ಮ ಜವಾಬ್ದಾರಿಯೆಂದು ಎಲ್ಲರಿಗೂ ಅನ್ನಿಸಿರುವುದು. ಅವರಿಗೆ ಅವರವರ ಟಿಆರ್‍ಪಿ ಅಷ್ಟೇ ಮುಖ್ಯ. ಇದನ್ನೆಲ್ಲಾ ಸರಿಪಡಿಸಬೇಕಾದದ್ದು ನಮ್ಮ-ನಿಮ್ಮೆಲ್ಲರ ಹೊಣೆ' ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News