ಮುಸ್ಲಿಂ ರಾಷ್ಟ್ರಗಳ ಜತೆಗೆ ವ್ಯವಹಾರ ಮಾಡುವುದಿಲ್ಲ ಎಂಬುದಕ್ಕೆ ಬಿಜೆಪಿಗರಿಂದ ಉತ್ತರವೇ ಇಲ್ಲ: ಪ್ರಿಯಾಂಕ್ ಖರ್ಗೆ

Update: 2022-03-30 15:18 GMT

ಬೆಂಗಳೂರು, ಮಾ. 30: ‘ಬಿಜೆಪಿ ನಾಯಕರು ಮುಸ್ಲಿಂ ಸಮುದಾಯದ ಸಣ್ಣಪುಟ್ಟ ವ್ಯಾಪಾರಿಗಳನ್ನು ಮಾತ್ರ ಏಕೆ ಗುರಿ ಮಾಡುತ್ತಿದ್ದಾರೆ. ಮುಸ್ಲಿಂ ರಾಷ್ಟ್ರಗಳ ಜತೆಗೆ ಯಾವುದೇ ವ್ಯವಹಾರ ಮಾಡುವುದಿಲ್ಲವೆಂದು, ಮೋದಿ ಅವರ ಆತ್ಮನಿರ್ಭರ ಭಾರತದ ಕೂಗಿಗೆ ಮಾದರಿಯಾಗಬೇಕು. ಆದರೆ ಈ ವಿಚಾರವಾಗಿ ಬಿಜೆಪಿ ನಾಯಕರು ಇದುವರೆಗೂ ಯಾವುದೇ ಉತ್ತರ ನೀಡಿಲ್ಲ' ಎಂದು ಮಾಜಿ ಸಚಿವ ಹಾಗೂ ಹಾಲಿ ಶಾಸಕ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.

ಬುಧವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ಇದೀಗ ಹಲಾಲ್ ಕಟ್ ಮಾಂಸ ಮಾರಾಟ ನಿರ್ಬಂಧದ ವಿಚಾರ ತಂದಿದ್ದಾರೆ. ಇದೆಲ್ಲದರ ಬಗ್ಗೆ ಮಾತನಾಡುತ್ತಿರುವ ಬಿಜೆಪಿಯವರು ಬಜೆಟ್ ಕಟ್ ಬಗ್ಗೆ ಏಕೆ ಮಾತನಾಡುತ್ತಿಲ್ಲ? ಬಿಜೆಪಿಯವರ ಪ್ರಕಾರ ಜಿಹಾದ್ ಎಂದರೆ ಯುದ್ಧ, ಭಯೋತ್ಪಾದನೆ ಎಂದು ಬಿಂಬಿಸುತ್ತಿದ್ದಾರೆ. ಈ ಸರಕಾರ ಬೇರೆ ಬೇರೆ ಸಮುದಾಯದ ವಿರುದ್ಧ ಭಯೋತ್ಪಾದನೆ ನಡೆಸುತ್ತಿದೆ. ನಿನ್ನೆ ಬಿಜೆಪಿ ಶಾಸಕರು, ಮಂತ್ರಿಗಳು ಮಾಧ್ಯಮಗಳಲ್ಲಿ, ‘ನಾವು ಆರ್ಥಿಕವಾದ ಜಿಹಾದ್ ನಡೆಸುತ್ತೇವೆ' ಎಂದು ಹೇಳಿದ್ದಾರೆ. ಆದರೆ, ದುರ್ದೈವ ಎಂದರೆ ಬಿಜೆಪಿ ಬೇರೆ ಸಮುದಾಯಗಳ ಮೇಲೆ ನಡೆಸುತ್ತಿರುವ ಆರ್ಥಿಕ ಜಿಹಾದ್ ಬಗ್ಗೆ ಏಕೆ ಚರ್ಚೆ ಮಾಡುತ್ತಿಲ್ಲ?' ಎಂದು ಪ್ರಶ್ನಿಸಿದರು.

‘ಸಿಎಂ ಬಜೆಟ್‍ನಲ್ಲಿ ಬೇರೆ ಸಮುದಾಯಗಳಿಗೆ ಅನುದಾನ ಕೊಟ್ಟಿದ್ದಾರೋ ಇಲ್ಲವೋ ಆದರೆ ಬಜೆಟ್‍ನಲ್ಲಿ ಮೋದಿ ಅವರನ್ನು ಮೀರಿಸುವಂತೆ ಘೋಷವಾಕ್ಯಗಳನ್ನು ಹೇಳಿದ್ದಾರೆ. ಇದು ಜನಸಾಮಾನ್ಯರ ಬಜೆಟ್, ಕರ್ನಾಟಕ ಭವಿಷ್ಯಕ್ಕೆ ಮಾನವ ಸಂಪನ್ಮೂಲ ಅಭಿವೃದ್ಧಿ ಬಜೆಟ್, ಸರ್ವಸ್ಪರ್ಶಿ ಸರ್ವವ್ಯಾಪಿ ಬಜೆಟ್ ಎಂದೆಲ್ಲ ಹೇಳಿಕೊಂಡಿದ್ದಾರೆ. ಮೋದಿ ಅವರ ಸಬ್ ಕಾ ಸಾಥ್, ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ್ ಘೋಷಣೆ ಮಾಡುವುದಾಗಿ ಹೇಳಿದ್ದರು. ಬಿಜೆಪಿಯವರು ಈ ಬಜೆಟ್‍ನಲ್ಲಿ ಯಾವುದಾದರೂ ವಲಯದಲ್ಲಿ ಸರ್ವಸ್ಪರ್ಶಿ ಮಾಡಿದ್ದರೆ ಅದು ಅಭಿವೃದ್ಧಿಯಲ್ಲ, ಭ್ರಷ್ಟಾಚಾರದಲ್ಲಿ. ಅವರು ಯಾವುದೇ ಸಚಿವಾಲಯ, ಯಾವುದೇ ಸಮುದಾಯದ ಗುತ್ತಿಗೆದಾರರನ್ನು ಬಿಟ್ಟಿಲ್ಲ. ಬಿಜೆಪಿಯವರ ಆರ್ಥಿಕ ಜಿಹಾದ್ ಅಲ್ಪಸಂಖ್ಯಾತರಿಗೆ ಮಾತ್ರವಲ್ಲ, ಶಿಕ್ಷಣ ಕ್ಷೇತ್ರದಲ್ಲಿ ವಿದ್ಯಾರ್ಥಿ, ಪರಿಶಿಷ್ಟರು, ಹಿಂದುಳಿದ ವರ್ಗದವರು, ಆರ್ಥಿಕವಾಗಿ ಹಿಂದುಳಿದವರು, ಮಹಿಳೆಯರಿಗೆ ಮಾಡುತ್ತಿದೆ' ಎಂದು ದೂರಿದರು.

‘ಬಿಜೆಪಿಯವರ ಜಿಹಾದ್ ಕೇವಲ ಮುಸಲ್ಮಾನರ ಮೇಲೆ ಅಲ್ಲ, ಎಲ್ಲ ವರ್ಗದವರ ಮೇಲೂ ನಡೆದಿದೆ. ಹಿಂದುಳಿದ ವರ್ಗದ ರೈತರಿಗಾಗಿ ಮಾಡಿದ ಗಂಗಾ ಕಲ್ಯಾಣ ಯೋಜನೆಯಲ್ಲೂ ಭ್ರಷ್ಟಾಚಾರ ಮಾಡಲಾಗುತ್ತಿದೆ. ನಿಮ್ಮ ಹೊಟ್ಟೆ ತುಂಬಿಸಿಕೊಳ್ಳಲು ಹಿಂದುಳಿದವರು, ಪರಿಶಿಷ್ಟರಿಗೆ ನೀಡುವ ಹಣವೇ ಬೇಕಾ? ಬಿಜೆಪಿ ಸರಕಾರದ ಮತ್ತೊಂದು ಜಿಹಾದ್ ಎಂದರೆ ಪರಿಶಿಷ್ಟರಿಗೆ ಸಂವಿಧಾನಾತ್ಮಕವಾಗಿ ನೀಡಿರುವ ಹಕ್ಕನ್ನು ಕಸಿದುಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ.

ಸರಕಾರದ ಶಾಸಕರ ಕುಟುಂಬದ ಸದಸ್ಯರಿಗೆ ನಕಲಿ ಜಾತಿ ಪ್ರಮಾಣ ಪತ್ರ ನೀಡಿ, ಪರಿಶಿಷ್ಟರ ಸೌಲಭ್ಯ ಪಡೆಯುತ್ತಿದ್ದಾರೆ. ಮಾಜಿ ಸಚಿವ ರೇಣುಕಾಚಾರ್ಯ ಕುಟುಂಬ ಸದಸ್ಯರಿಗೆ ನಕಲಿ ಜಾತಿ ಪ್ರಮಾಣ ಪತ್ರ ಹೇಗೆ ಸಿಕ್ಕಿತು? ಅವರು ಸಾಮಾನ್ಯ ವ್ಯಕ್ತಿ ಅಲ್ಲ, ಮಾಜಿ ಸಚಿವರಾಗಿದ್ದು, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಗಳಾಗಿದ್ದಾರೆ. ಅಂತಹವರು ನಕಲಿ ಜಾತಿ ಪ್ರಮಾಣ ಪತ್ರ ತೆಗೆದುಕೊಳ್ಳುತ್ತಾರೆ ಎಂದರೆ ಇವರಿಗೆ ನಾಚಿಕೆ ಇಲ್ಲವೇ? ರಾಜೀನಾಮೆ ನೀಡುವ ನೈತಿಕತೆ ಇಲ್ಲವೇ? ಇದು ಸಂವಿಧಾನದ ಮೇಲಿನ ಜಿಹಾದ್ ಅಲ್ಲವೇ?' ಎಂದು ಪ್ರಿಯಾಂಕ್ ಖರ್ಗೆ ವಾಗ್ದಾಳಿ ನಡೆಸಿದರು.

‘ನಾವು ಚುನಾವಣೆ ಎದುರಿಸುವಾಗಿ ತನ್ನ ಸಾಧನೆ ಪಟ್ಟಿ ಇಟ್ಟುಕೊಂಡು ಜನರ ಮುಂದೆ ಹೋಗುತ್ತೇವೆ. ಆದರೆ, ಇವರು ಸಾಧನೆ ಇಲ್ಲದೇ ಕೋಮು ವಿಷ ಬೀಜ ಬಿತ್ತಿ, ಭಾವನಾತ್ಮಕ ವಿಚಾರವನ್ನು ಎಳೆದು ತರುತ್ತಾರೆ. ಶಿರಾ ಉಪಚುನಾವಣೆ ಬಂದಾಗ ಕಾಡುಗೊಲ್ಲ ನಿಗಮ ಮಾಡಿದರು, ಆರ್‍ಆರ್ ನಗರ ಉಪಚುನಾವಣೆ ಬಂದಾಗ, ಒಕ್ಕಲಿಗ ಅಭಿವೃದ್ಧಿ ನಿಗಮ ಮಾಡಿದರು. ಬಸವ ಕಲ್ಯಾಣ ಉಪಚುನಾವಣೆ ಬಂದಾಗ ಮರಾಠ ಅಭಿವೃದ್ಧಿ ನಿಗಮ, ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ ಮಾಡಿದರು. ಹಿಂದುಳಿದ ವರ್ಗಗಳ ಕಲ್ಯಾಣ ಅಭಿವೃದ್ಧಿ 2021-2022ರ ವಾರ್ಷಿಕ ವರದಿ ಹಾಗೂ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮಕ್ಕೆ ಸರಕಾರ ಕೊಟ್ಟಿರುವ ಅನುದಾನ ಎಷ್ಟು ಎಂದು ಕೇಳಿದ್ದೆವು. ಅವರು ಈ ಹಿಂದೆ ಈ ನಿಗಮಕ್ಕೆ 500 ಕೋಟಿ ರೂ.ನೀಡುವುದಾಗಿ ತಿಳಿಸಿದ್ದರು. ಕೊಟ್ಟಿರುವುದು 100 ಕೋಟಿ ರೂ. ಖರ್ಚಾಗಿರುವುದು ಶೂನ್ಯ. ಸರಕಾರದ ಉತ್ತರ ಯೋಜನೆಗಳಿಗೆ ಅರ್ಜಿ ಹಂತದಲ್ಲಿದೆ ಎಂದು ಕೊಡುತ್ತಾರೆ. ಇವರು ಈ ಒಂದು ವರ್ಷ ಏನು ಮಾಡುತ್ತಿದ್ದರು ಎಂದು ಪ್ರಶ್ನಿಸಿದರು.

‘ಶ್ರೀಸಾಮಾನ್ಯರ ಮೇಲೆ ಜಿಹಾದ್ ನಡೆಸುತ್ತಿದ್ದೀರಿ. ನಿಮಗೆ ಅವರ ಬಗ್ಗೆ ಕಾಳಜಿ ಇದ್ದರೆ ಮೋದಿ ಅವರ ಮೇಲೆ ಒತ್ತಡ ಹಾಕಿ ಪೆಟ್ರೋಲ್, ಡೀಸೆಲ್, ಅಡುಗೆ ಅನಿಲದ ದರ ಇಳಿಸಿ. ಈ ಸರಕಾರ ಕಾರ್ಮಿಕರು, ಮಹಿಳೆಯರು, ರೈತರು, ಕಾರ್ಮಿಕರು, ಪರಿಶಿಷ್ಟರು ಸೇರಿದಂತೆ ಸಮಾಜದ ಯಾವುದೇ ವರ್ಗದ ಪರವಾಗಿಲ್ಲ. ಆದರೆ ಈ ಹಲಾಲ್ ಕಟ್ಟ ವಿಚಾರವಾಗಿ ಚರ್ಚೆ ಮಾಡುತ್ತಿದ್ದಾರೆ. ನೀವು ಭಾರತವನ್ನು ವಿಶ್ವಗುರು ಮಾಡಲು ಹೊರಟಿದ್ದೀರೋ, ಪಾಕಿಸ್ತಾನ ಮಾಡಲು ಹೊರಟಿದ್ದೀರೋ? ಕರ್ನಾಟಕವನ್ನು ಯುಪಿ ಮಾಡುತ್ತಿದ್ದೀರೋ? ಒಂದು ಸಮುದಾಯದವರ ಅಂಗಡಿಯಲ್ಲಿ ಕೋಳಿ ಖರೀದಿ ಮಾಡಬೇಡಿ ಎನ್ನುತ್ತೀರಾ? ಅಲ್ಲಿರುವ ಕೋಳಿಗಳನ್ನು ಎಲ್ಲಿ ಸಾಕಿರುತ್ತಾರೆ ಎಂದು ಗೊತ್ತಾಗುತ್ತದೆಯೇ?' ಎಂದು ಅವರು ವಾಗ್ದಾಳಿ ನಡೆಸಿದರು.

‘ಇನ್ವೆಸ್ಟ್ ಕರ್ನಾಟಕ ಎಂದು ಮಾಧ್ಯಮಗಳಲ್ಲಿ ಜಾಹೀರಾತು ಪ್ರಕಟಿಸುತ್ತೀರಿ? ಈ ರೀತಿ ಸ್ಥಿತಿ ನಿರ್ಮಾಣವಾದರೆ ಯಾರು ಬಂಡವಾಳ ಹೂಡಲು ಮುಂದೆ ಬರುತ್ತಾರೆ? ಕಾಶ್ಮೀರದಲ್ಲಿ ಬಂಡವಾಳ ಹೂಡಲು ಇಸ್ಲಾಂ ದೇಶಗಳಿಗೆ ಆಮಂತ್ರಣ ಕಳುಹಿಸುತ್ತೀರಿ. ಮತ್ತೆ ಕಾಶ್ಮೀರ ಫೈಲ್ಸ್ ಬಗ್ಗೆ ಮಾತನಾಡುತ್ತೀರಿ. ಹಿಂದೂ ಮುಸ್ಲಿಮ್ ಎಂದು ಮಾತನಾಡುತ್ತೀರಿ. ಕೇಂದ್ರ ವಿತ್ತ ಸಚಿವಾಲಯ ರಾಜ್ಯ ಸಚಿವ ಅನುರಾಗ್ ಠಾಕೂರ್ ದುಬೈ ಎಕ್ಸ್ ಪೋಗೆ ಹೋಗಿದ್ದಾರೆ. ಅಲ್ಲಿ ಬೇರೆ ದೇಶದವರನ್ನು ಕರೆಯಲು ಹೋಗಿದ್ದಾರೆ. ಏನಾಯ್ತು ನಿಮ್ಮ ಆತ್ಮನಿರ್ಭರ ಭಾರತ್, ಮೇಕ್ ಇನ್ ಇಂಡಿಯಾ ಕಾರ್ಯಕ್ರಮಗಳು?

ಇಂತಹ ವಾತಾವರಣ ಇದ್ದರೆ 1ರೂ. ಬಂಡವಾಳ ಬರುವುದಿಲ್ಲ. ಮೇಕ್ ಇಂಡಿಯಾ ಎಂದು ಹೇಳಿ ಫೇಕ್ ಇನ್ ಇಂಡಿಯಾ ಮಾಡುತ್ತಿದ್ದೀರಿ. ವಾಟ್ಸಪ್, ಫೇಸ್‍ಬುಕ್‍ನಲ್ಲಿ ಸುಳ್ಳು ಸಂದೇಶ ಕಳುಹಿಸುವುದು, ಸಿಎಂ ಆ ಬಗ್ಗೆ ಏಕೆ ಮೌನವೇ? ರಾಜ್ಯದ ಪ್ರಗತಿ ತ್ಯಾಗ ಮಾಡುವಷ್ಟು ಕುರ್ಚಿ ಮೇಲೆ ವ್ಯಾಮೋಹವೇ? ಅವರು ಈ ಹಿಂದೆ ಈ ರೀತಿ ಇರಲಿಲ್ಲ. ಬಿಜೆಪಿಯಲ್ಲಿ ಹೈಕಮಾಂಡ್ ಮನವೊಲಿಸುವ ಸ್ಪರ್ಧೆಗೆ ಇಳಿದಿದ್ದಾರೆ. ಸ್ಪೀಕರ್ ಅವರು ತಮ್ಮ ಸ್ಥಾನದಲ್ಲಿ ಕೂತು ನಾನು ಆರೆಸೆಸ್ಸ್‍ನಿಂದ ಬಂದಿದ್ದೇನೆಂದು ಹೇಳುತ್ತಾರೆ. ಆರೆಸೆಸ್ಸ್ ಇತಿಹಾಸ ಅವರಿಗೆ ಗೊತ್ತಿದೆಯೇ? ರಾಮಲೀಲಾ ಮೈದಾನದಲ್ಲಿ 150 ಪ್ರತಿಭಟನೆ ಮಾಡಿ ನಮಗೆ ಸಂವಿಧಾನ ಬೇಡ, ಮನುಸ್ಮೃತಿ ಬೇಕು ಎಂದು ಹೇಳಿ ಸಂವಿಧಾನ ಸುಟ್ಟಿರುವ ಇತಿಹಾಸವಿದೆ. ಆರೆಸೆಸ್ಸ್ ಕಾರ್ಯಕರ್ತರಾಗಿ ದೇಶಭಕ್ತರಾಗಲು ಸಾಧ್ಯವೇ ಇಲ್ಲ. ಎರಡರ ಪೈಕಿ ಒಂದು ಮಾತ್ರ ಆಗಲು ಸಾಧ್ಯ.

ನೀವು ಅಲ್ಪಸಂಖ್ಯಾತರು, ದಲಿತರು, ಹಿಂದುಳಿದ ವರ್ಗದವರು, ಆರ್ಥಿಕವಾಗಿ ಹಿಂದುಳಿದ ಮೇಲ್ವರ್ಗದವರು, ಮಹಿಳೆಯರು, ಯುವಕರು, ಕಾರ್ಮಿಕರು, ಗುತ್ತಿಗೆದಾರರು ಎಲ್ಲರ ಮೇಲೆ ಜಿಹಾದ್ ಮಾಡುತ್ತಿದ್ದೀರಿ. ನೀವು ನಮ್ಮ ನಾಡಗೀತೆಯನ್ನು ಓದಿ. ಅದರಲ್ಲಿ ಕುವೆಂಪು ಅವರು ಏನು ಬರೆದಿದ್ದಾರೆ ಎಂದು ನೋಡಿ. ನಿಮ್ಮ ಹೈಕಮಾಂಡ್ ಮನವೊಲಿಸಲು ರಾಜ್ಯದ ಸಾಮರಸ್ಯ ಹಾಳು ಮಾಡಬೇಡಿ' ಎಂದು ಪ್ರಿಯಾಂಕ್ ಖರ್ಗೆ ಮನವಿ ಮಾಡಿದರು.

‘ಅಮಿತ್ ಶಾ ಪುತ್ರ ಜಯ್ ಶಾ ಅವರು ಇಸ್ಲಾಂ ದೇಶಗಳ ಜತೆ ಉತ್ತಮ ಸಂಬಂಧ ಇಟ್ಟುಕೊಂಡಿದ್ದಾರೆ. ಅವರ ಬಳಿ ಹೋಗಿ ವ್ಯಾಪಾರ ಮಾಡಬೇಡಿ ಎಂದು ಹೇಳಿ. ಇಲ್ಲಿ ಕೊರೋನ ಇದ್ದಾಗ ಐಪಿಎಲ್ ಎಲ್ಲಿ ನಡೆದಿತ್ತು? ಯಾರು ಹೋಗಿದ್ದರು ಅಲ್ಲಿಗೆ? ಅಲ್ಲಿ ದುಬೈ ಶೇಖ್ ಜತೆ ಕೈ ಮಿಲಾಯಿಸಿ ಇಲ್ಲಿ ಬಂದು ಇಸ್ಲಾಂ ವಿರೋಧಿ ಹೇಳಿಕೆ ನೀಡುತ್ತಾರಾ? ನಿಮಗೆ ಆರ್ಥಿಕ ಲಾಭ ಆಗುವಾಗ ಇಸ್ಲಾಂ, ಅಲ್ಪಸಂಖ್ಯಾತರು, ಹಿಂದುಳಿದವರು ಎಲ್ಲರ ಜತೆ ಚೆನ್ನಾಗಿರುತ್ತೀರಿ? ನಿಮ್ಮ ಮಕ್ಕಳಿಗೆ ಕಾನ್ವೆಂಟ್‍ಗಳಲ್ಲಿ ಸೀಟು ಬೇಕಾದಾಗ ಕ್ರೈಸ್ತ ಸಮುದಾಯದವರ ಜತೆ ಚೆನ್ನಾಗಿರುತ್ತೀರಿ. ಕೆಲಸ ಆಗಬೇಕಾದಾಗ ದಲಿತರೂ ಚೆನ್ನಾಗಿರುತ್ತಾರೆ. ಆದರೆ ಚುನಾವಣೆ ಬಂದಾಗ ಇವೆಲ್ಲ ವಿಚಾರ ನಿಮ್ಮ ಮುಂದೆ ಬರುತ್ತದೆ' ಎಂದು ಪ್ರಿಯಾಂಕ್ ಖರ್ಗೆ ಆಕ್ರೋಶ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News