ಮುಂದಿನ ಚುನಾವಣೆಯಲ್ಲೂ ಎನ್.ಮಹೇಶ್ ಗೆ ಆಶೀರ್ವಾದ ಮಾಡಿ: ಯಡಿಯೂರಪ್ಪ

Update: 2022-03-31 06:27 GMT

ಚಾಮರಾಜನಗರ : ಮುಂದಿನ ಚುನಾವಣೆಯಲ್ಲೂ ಎನ್.ಮಹೇಶ್ ಅವರಿಗೆ ಆಶೀರ್ವಾದ ಮಾಡಿ ಅವರನ್ನು ವಿಧಾನಸಭೆಗೆ ಕಳುಹಿಸಬೇಕು ಎಂದು ಕ್ಷೇತ್ರದ ಜನತೆಗೆ ನಾನು ಕೈಮುಗಿದು ಪ್ರಾರ್ಥಿಸಿಕೊಳ್ಳುತ್ತೇನೆ ಎಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಮನವಿ ಮಾಡಿಕೊಂಡರು.

ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲೂಕಿನ ಗೌಡಹಳ್ಳಿಯಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಅವರು ಶಾಸಕ ಎನ್.ಮಹೇಶ್ ಅವರ ಪರ ಗೌಡಹಳ್ಳಿ ಜನರಲ್ಲಿ ಮನವಿ ಮಾಡಿಕೊಂಡರು.

ಎನ್.ಮಹೇಶ್ ಅವರಂತಹ ಒಬ್ಬ ಜವಾಬ್ದಾರಿಯುತ ಶಾಸಕರನ್ನು ಈ ಕ್ಷೇತ್ರದ ಜನ ಆಯ್ಕೆ ಮಾಡಿ ವಿಧಾನಸೌಧಕ್ಕೆ ಕಳುಹಿಸಿದ್ದಾರೆ. ಎನ್.ಮಹೇಶ್ ಅವರು ವಿಧಾನಸಭೆಯೊಳಗೆ ಮಾತನಾಡಲು ನಿಂತರೆ ಇಡೀ ಸದನವೇ ಪಕ್ಷ ಭೇದಮರೆತು ಅವರ ಮಾತನ್ನು ಕೇಳುತ್ತಾರೆ. ಈ ರೀತಿ ಒಬ್ಬ ಜವಾಬ್ದಾರಿಯುತ ಶಾಸಕನನ್ನು ಆಯ್ಕೆ ಮಾಡಿರುವಂತೆ ಮುಂದಿನ ಚುನಾವಣೆಯಲ್ಲಿಯೂ ಅವರನ್ನು ಆಯ್ಕೆ ಮಾಡಿ ವಿಧಾನಸೌಧಕ್ಕೆ ಕಳುಹಿಸುವಂತೆ ಮನವಿ ಮಾಡಿದರು.

ಪೋಷಕರು ಹೆಣ್ಣು ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡುವ ಕಡೆ ಹೆಚ್ಚು ಗಮನ ಹರಿಸಬೇಕು. 18-20 ವರ್ಷಕ್ಕೆ ಹೆಣ್ಣು ಮಕ್ಕಳಿಗೆ ಮದುವೆ ಮಾಡುವುದನ್ನು ಯೋಚನೆ ಮಾಡದೇ, ಅವಳಿಗೆ ಶಿಕ್ಷಣ ನೀಡಿದರೆ ಅವಳು ಸ್ವತಂತ್ರವಾಗಿ ಬದುಕಿ, ಹೋಗುವ ಮನೆಗೆ ದಾರಿ ದೀಪವಾಗಲಿದ್ದಾಳೆ. ಆದ್ದರಿಂದ ಪ್ರತಿಯೊಬ್ಬ ತಾಯಂದಿರು ಹೆಣ್ಣು ಮಕ್ಕಳಿಗೆ ಶಿಕ್ಷಣವನ್ನು ಕೊಡಿಸಬೇಕಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಆಶಯವೂ ಇದೇ ಆಗಿದೆ ಎಂದರು.

ಗ್ರಾಮೀಣ ಜನರು ವಿದ್ಯಾವಂತರಾಗಬೇಕು, ಅವರು ಸ್ವತಂತ್ರವಾಗಿ ಅವರ ಕಾಲ‌ ಮೇಲೆ ಅವರು ನಿಲ್ಲುವಂತಾಗಬೇಕು ಹಾಗೂ ಗ್ರಾಮೀಣಾಭಿವೃದ್ಧಿಯಾಗಬೇಕು ಎನ್ನುವುದು ಪ್ರಧಾನಿ ಮೋದಿ ಅವರ ಆಶಯವಾಗಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News