×
Ad

"ಹೆಚ್ಚುತ್ತಿರುವ ಧರ್ಮಾಧಾರಿತ ವಿಭಜನೆಯನ್ನು ಸರಿಪಡಿಸಿ": ಸಿಎಂಗೆ ಬಯೋಕಾನ್ ಮುಖ್ಯಸ್ಥೆ ಕಿರಣ್ ಮಜೂಂದಾರ್ ಶಾ ಮನವಿ

Update: 2022-03-31 12:03 IST

ಹೊಸದಿಲ್ಲಿ: ಹಿಂದು ದೇವಸ್ಥಾನಗಳ ಜಾತ್ರೆಗಳಿಂದ ಮುಸ್ಲಿಂ ವ್ಯಾಪಾರಿಗಳನ್ನು ಹೊರಗಿಡುವ ನಿಟ್ಟಿನಲ್ಲಿ ಹಿಂದುತ್ವ ಸಂಘಟನೆಗಳು ಇಡುತ್ತಿರುವ ಬೇಡಿಕೆ ಹಾಗೂ ನಡೆಸುತ್ತಿರುವ ಯತ್ನಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ಭಾರತದ ಐಟಿ ರಾಜಧಾನಿ ಬೆಂಗಳೂರಿನ ಕಾರ್ಪೊರೇಟ್ ವಲಯದಿಂದ ಮೊದಲ ಧ್ವನಿ ಕೇಳಿ ಬಂದಿದೆ.

ಬಯೋಕಾನ್ ಸಂಸ್ಥೆಯ ಮುಖ್ಯಸ್ಥೆ ಕಿರಣ್ ಮಜೂಂದಾರ್ ಶಾ ಈ ಕುರಿತು ಬುಧವಾರ ಟ್ವೀಟ್ ಮಾಡಿ, ರಾಜ್ಯದಲ್ಲಿ "ಹೆಚ್ಚುತ್ತಿರುವ ಧರ್ಮಾಧರಿತ ವಿಭಜನೆಯ" ವಿಚಾರವನ್ನು ಪರಿಹರಿಸುವಂತೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರಿಗೆ ಮನವಿ ಮಾಡಿದ್ದಾರೆ. ಟೆಕ್ ಮತ್ತು ಬಯೋಟೆಕ್ ಕ್ಷೇತ್ರದ `ಜಾಗತಿಕ ನಾಯಕತ್ವ' ಅಪಾಯದಲ್ಲಿದೆ ಎಂಬ ಎಚ್ಚರಿಕೆಯನ್ನೂ  ಅವರು ನೀಡಿದ್ದಾರೆ.

ಬುಧವಾರ ತಮ್ಮ ಟ್ವೀಟ್‍ನಲ್ಲಿ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಯ "ಅಸಮಾಧಾನ ಹೆಚ್ಚಾಗುತ್ತಿದೆ, ಕರ್ನಾಟಕ ದೇವಸ್ಥಾನ ಸಮಿತಿಗಳು, ವ್ಯಾಪಾರಿಗಳು ಎದುರಿಸುತ್ತಿರುವ ಒತ್ತಡವನ್ನು ಒಪ್ಪುತ್ತಾರೆ" ಎಂಬ ಶೀರ್ಷಿಕೆಯ ವರದಿಯನ್ನು ಉಲ್ಲೇಖಿಸಿದ  ಶಾ "ಕರ್ನಾಟಕ  ಯಾವತ್ತೂ ಸರ್ವರನ್ನೊಳಗೊಂಡ ಆರ್ಥಿಕ ಅಭಿವೃದ್ಧಿಗೆ ಒತ್ತು ನೀಡಿದೆ ಹಾಗೂ ನಾವು ಧರ್ಮದ ಕಾರಣಕ್ಕಾಗಿ ಇಂತಹ ಹೊರಗಿಡುವಿಕೆಯನ್ನು ಅನುಮತಿಸಬಾರದು- ಐಟಿ/ಬಿಟಿ ಕೂಡ ಮತೀಯವಾಗಿ ಬಿಟ್ಟರೆ ಅದು ನಮ್ಮ ಜಾಗತಿಕ  ನಾಯಕತ್ವವನ್ನು ನಾಶಗೈಯ್ಯಬಹುದು" ಎಂದು ಅವರು ಬರೆದಿದ್ದಾರೆ.

ತಮ್ಮ ಟ್ವೀಟ್‍ನಲ್ಲಿ ಬೊಮ್ಮಾಯಿ ಅವರನ್ನು ಟ್ಯಾಗ್ ಮಾಡಿದ ಶಾ "ದಯವಿಟ್ಟು ಈ ಹೆಚ್ಚುತ್ತಿರುವ ಧಾರ್ಮಿಕ ಕಂದರವನ್ನು ಪರಿಹರಿಸಿ" ಎಂದು ಮನವಿ ಮಾಡಿದ್ದಾರೆ.

ಇನ್ನೊಂದು ಟ್ವೀಟ್ ಮಾಡಿದ ಅವರು "ನಮ್ಮ ಮುಖ್ಯಮಂತ್ರಿ ಒಬ್ಬ ಪ್ರಗತಿಪರ ನಾಯಕ, ಅವರು ಖಂಡಿತವಾಗಿಯೂ ಈ ವಿಚಾರವನ್ನು ಪರಿಹರಿಸುತ್ತಾರೆ" ಎಂದು ಬರೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News