ಸಿಎಂಗೆ ಪತ್ರ ಬರೆದವರು ಯಾರೂ ಬುದ್ಧಿಜೀವಿಗಳೇ ಅಲ್ಲ: ಗೃಹ ಸಚಿವ ಆರಗ ಜ್ಞಾನೇಂದ್ರ
ಕೊಪ್ಪಳ, ಮಾ. 31: 'ಯಾವಾಗ ಮೌನವಾಗಿರಬೇಕು, ಯಾವಾಗ ಬಾಯಿ ಬಿಡಬೇಕು ಎಂಬುದಕ್ಕೆ ಮಾತ್ರ ವಿಚಾರವಂತರು ಸೀಮಿತರಾಗಿದ್ದಾರೆ. ಮುಖ್ಯಮಂತ್ರಿಗೆ ಪತ್ರ ಬರೆದಿರುವ 60 ಜನ ಬುದ್ಧಿಜೀವಿಗಳು ಯಾರೂ ಬುದ್ಧಿಜೀವಿಗಳೇ ಅಲ್ಲ. ಮೇಲು-ಕೀಳು ಎಂಬುದನ್ನು ತೊಡೆಯುವುದಕ್ಕೆ ಸಮವಸ್ತ್ರ ಜಾರಿಗೊಳಿಸಲಾಗಿದೆ. ಈ ಬುದ್ಧಿವಂತರು ಹಿಜಾಬ್ ವಿಚಾರದಲ್ಲಿ ಏನ್ ಹೇಳಿದರು? ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಪ್ರಶ್ನಿಸಿದ್ದಾರೆ.
ಗುರುವಾರ ಇಲ್ಲಿನ ಮುನಿರಾಬಾದ್‍ನ ಕರ್ನಾಟಕ ರಾಜ್ಯ ಮೀಸಲು ತರಬೇತಿ ಶಾಲೆಯ 24ನೆ ತಂಡದ ಮತ್ತು ಹೆಚ್ಚುವರಿ ಪೊಲೀಸ್ ತರಬೇತಿ ಶಾಲೆ, ಐಆರ್‍ಬಿ ಮುನಿರಾಬಾದ್‍ನ ಪ್ರಥಮ ತಂಡದ ವಿಶೇಷ ಮೀಸಲು ಪೊಲೀಸ್ ಕಾನ್‍ಸ್ಟೇಬಲ್ ಪ್ರಶಿಕ್ಷಣಾರ್ಥಿಗಳ ನಿಗರ್ಮನ ಪಥ ಸಂಚಲನ ಕಾರ್ಯಕ್ರಮದಲ್ಲಿ ಪಾಲ್ಗೊಂಡ ನಂತರ ಮಾತನಾಡಿದ ಅವರು, ರಾಜ್ಯದಲ್ಲಿ ಚರ್ಚೆಯಾಗುತ್ತಿರುವ ‘ಹಲಾಲ್' ವಿವಾದ ಕಾನೂನು ಸುವ್ಯವಸ್ಥೆ ಸಮಸ್ಯೆ ಅಲ್ಲ. ಧಾರ್ಮಿಕತೆ ಮತ್ತು ಭಾವನೆಯ ತಾಕಲಾಟವಾಗಿದೆ. ಎಲ್ಲವೂ ಸರಿಯಾಗಲಿದೆ' ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.
‘ಹಲಾಲ್, ಜಟ್ಕಾ ಯಾವುದು ಕಾನೂನು ಸಮಸ್ಯೆಯಲ್ಲ. ರಾಜ್ಯದ ಜನ ತುಂಬಾ ಬುದ್ಧಿವಂತರು, ಉಪದೇಶ ಹೇಳುವವರಿದ್ದಾರೆ. ಒಬ್ಬರಿಗೆ ಕೋಮುವಾದಿ ಆಗಿ ಇರುವಂತೆ ಹೇಳುತ್ತಾರೆ. ಮತ್ತೊಬ್ಬರು ಜಾತ್ಯತೀತವಾಗಿ ಬದುಕಬೇಕು ಎನ್ನುತ್ತಾರೆ. ಸೆಕ್ಯೂಲರಿಸಂ ಎನ್ನುವುದು ನಮ್ಮ ರಕ್ತದಲ್ಲೇ ಬಂದಿದೆ' ಎಂದು ಹೇಳಿದರು.
‘ಈ ದೇಶದ ಕಾನೂನು ಗೌರವಿಸದವರಿಗೆ ಬುದ್ಧಿಜೀವಿಗಳು ಮೊದಲು ಪಾಠ ಹೇಳಲಿ. ನೆಲದ ಕಾನೂನಿಗೆ ಗೌರವ ಕೊಡಲು ಮೊದಲು ಕಲಿಯಲಿ. ಈ ದೇಶದಲ್ಲಿ ಯಾರನ್ನು ಯಾರು ವಿರೋಧಿಸಿಲ್ಲ. ರಾಜಕಾರಣಿಗಳಂತೂ ವೋಟ್ ಬ್ಯಾಂಕಿಗಾಗಿ ಓಲೈಕೆ ಮಾಡುತ್ತಾರೆ. ಉಳಿದವರಿಗೆ ಸತ್ಯ ಹೇಳಲು ಏನು ಸಮಸ್ಯೆ. ಅವರಿಗೆ ಏನು ತೆವಲು' ಎಂದು ಅವರು ಪ್ರಶ್ನಿಸಿದರು.
‘ಸಿದ್ದರಾಮಯ್ಯ ಅವರ ಬಗ್ಗೆ ನಾನು ಮಾತನಾಡುವುದಿಲ್ಲ. ಅವರು ರಾಜಕಾರಣಿ, ಅವರನ್ನು ಜನ ತಿರಸ್ಕಾರ ಮಾಡುತ್ತಾರೆ. ದೇಶದಲ್ಲಿ ಕಾಂಗ್ರೆಸ್ ಇಲ್ಲ. ಅದರ ಇಬ್ಬಗೆ ನೀತಿಯಿಂದ ಅದು ನಾಶವಾಗುತ್ತದೆ. ಬಿ.ಕೆ. ಹರಿಪ್ರಸಾದ್ ಚಿಲ್ಲರೆ ರಾಜಕಾರಣ ಮಾತನಾಡುತ್ತಾರೆ. ಅವರ ಬಗ್ಗೆ ಹೆಚ್ಚು ಪ್ರತಿಕ್ರಿಯೆ ನೀಡುವುದಿಲ್ಲ' ಎಂದು ನಿವಾಕರಿಸಿದರು.
‘ಈ ವರ್ಷ 2,220 ಕೆಎಸ್‍ಆರ್‍ಪಿ ಹುದ್ದೆಗಳನ್ನು ನೇಮಕ ಮಾಡಿಕೊಳ್ಳಲಾಗಿದೆ. ಪೊಲೀಸರಿಗಾಗಿ 20 ಸಾವಿರ ಮನೆಗಳನ್ನು ಕಟ್ಟುತ್ತಿದ್ದೇವೆ. ಒಂದೇ ವರ್ಷದಲ್ಲಿ 100 ಪೊಲೀಸ್ ಠಾಣೆ ನಿರ್ಮಾಣ ಮಾಡಲಾಗುತ್ತಿದೆ. ನಮ್ಮ ಸರಕಾರ ಅಧಿಕಾರಕ್ಕೆ ಬಂದ ಮೇಲೆ ಪೊಲೀಸರ ಅಭಿವೃದ್ಧಿಗೆ ಸಾಕಷ್ಟು ಕೆಲಸ ಮಾಡಲಾಗುತ್ತಿದೆ' ಎಂದು ಆರಗ ಜ್ಞಾನೇಂದ್ರ ಹೇಳಿದರು.