ರಮಝಾನ್ ತಿಂಗಳಲ್ಲಿ ಎಲ್ಲರೊಂದಿಗೂ ವ್ಯಾಪಾರ ಮಾಡಿ: ಮುಸ್ಲಿಮರಿಗೆ ಜಮೀಯತುಲ್ ಉಲಮಾ ಮನವಿ
ಬೆಂಗಳೂರು, ಮಾ. 31: ‘ರಮಝಾನ್ ತಿಂಗಳಲ್ಲಿ ಮುಸಲ್ಮಾನರ ಬಳಿ ಮಾತ್ರ ವ್ಯಾಪಾರ ಮಾಡಬೇಕು ಎಂಬ ಸಂದೇಶಕ್ಕೆ ಕಿವಿಗೊಡಬಾರದು’ ಎಂದು ಜಮೀಯತುಲ್ ಉಲಮಾ ಕರ್ನಾಟಕ ಮನವಿ ಮಾಡಿದೆ.
‘ಜಾತ್ರೆ ಮತ್ತು ಉತ್ಸವಗಳಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ಬಹಿಷ್ಕಾರದ ಬೆದರಿಕೆ ಹಾಕಿರುವುದು ಶೋಚನೀಯ. ಇದೇ ವೇಳೆ ರಂಜಾನ್ ತಿಂಗಳಲ್ಲಿ ಮುಸ್ಲಿಮರ ಬಳಿ ಮಾತ್ರ ವ್ಯಾಪಾರ ಮಾಡಬೇಕು ಎಂಬ ಸಂದೇಶವನ್ನು ಕೆಲವು ಕಿಡಿಗೇಡಿಗಳು ಹರಿಬಿಟ್ಟಿದ್ದಾರೆ. ಇವೆಲ್ಲವೂ ಸಮಾಜದಲ್ಲಿ ಅಶಾಂತಿ ಬೆಳೆಸುವ ಪಿತೂರಿಯ ಭಾಗ. ಮುಸ್ಲಿಮರು ಈ ರೀತಿಯ ಕಿಡಿಗೇಡಿ ಸಂದೇಶ ರವಾನಿಸುವುದಿಲ್ಲ. ಇದು ನಮ್ಮ ಸಂಸ್ಕೃತಿಯೂ ಅಲ್ಲ’ ಎಂದು ಜಮಿಯತ್ ಉಲಮಾ ಕರ್ನಾಟಕದ ಅಧ್ಯಕ್ಷ ಮುಫ್ತಿ ಇಫ್ತೇಖಾರ್ ಕಾಸ್ಮಿ ಮತ್ತು ಕಾರ್ಯದರ್ಶಿ ಮುಫ್ತಿ ಶಮ್ಸುದ್ದೀನ್ ಬಜಲಿ ಕಾಸ್ಮಿ ತಿಳಿಸಿದ್ದಾರೆ.
‘ನಮ್ಮ ಸುತ್ತಮುತ್ತಲಿನ ಎಲ್ಲ ಧರ್ಮದವರಿಗೆ ಉಪಕಾರ ಆಗಬೇಕೇ ಹೊರತು ಯಾರಿಗೂ ನಮ್ಮಿಂದ ಕಷ್ಟ-ನಷ್ಟವಾಗದಂತೆ ನೋಡಿಕೊಳ್ಳಬೇಕು. ಅವರ ಸುಖ ಮತ್ತು ಕ್ಷೇಮದ ಬಗ್ಗೆ ಕಾಳಜಿ ವಹಿಸಬೇಕಾದುದು ನಮ್ಮ ಕರ್ತವ್ಯ. ಸಮಾಜದಲ್ಲಿ ಶಾಂತಿ, ನ್ಯಾಯ, ಸೌಜನ್ಯ ಮತ್ತು ನೈತಿಕತೆಯ ವಾತಾವರಣ ಕಾಯ್ದುಕೊಳ್ಳಬೇಕಾದುದು ನಮ್ಮೆಲ್ಲರ ಕರ್ತವ್ಯ. ಇದುವೇ ಇಸ್ಲಾಮ್ ಧರ್ಮ ನಮಗೆ ನೀಡಿರುವ ಉಪದೇಶ. ವ್ಯಾಪಾರ-ವ್ಯವಹಾರಗಳಲ್ಲಿ ಮುಸಲ್ಮಾನ ಅಥವಾ ಬೇರೆ ಧರ್ಮದವ ಅನ್ನುವ ಭೇದ–ಭಾವ ಸಲ್ಲದು. ನೆರೆಹೊರೆಯವರ ಜತೆ ಸೌಜನ್ಯದೊಂದಿಗೆ ವರ್ತಿಸಬೇಕು ಎಂಬುದೇ ನಮಗೆ ಪ್ರವಾದಿ ಮುಹಮ್ಮದ್(ಸ) ನೀಡಿರುವ ಮಾರ್ಗದರ್ಶನ’ ಎಂದು ವಿವರಿಸಿದ್ದಾರೆ.
‘ಬಾಂಧವರು ಈ ರೀತಿಯ ಸಂದೇಶಗಳ ಬಗ್ಗೆ ಎಚ್ಚರಿಕೆ ವಹಿಸಬೇಕು. ನೀಚ ಸಂಚುಗಳನ್ನು ಸೋಲಿಸಬೇಕು’ ಎಂದು ಮನವಿ ಮಾಡಿದ್ದಾರೆ.