×
Ad

ಚುನಾವಣೆ ಸುಧಾರಣೆ; ಸಂಸತ್‍ನಲ್ಲಿ ಚರ್ಚೆಗೆ ಲೋಕಸಭೆ ಸ್ಪೀಕರ್ ಗೆ ಪತ್ರ: ವಿಶ್ವೇಶ್ವರ ಹೆಗಡೆ ಕಾಗೇರಿ

Update: 2022-03-31 20:17 IST

ಬೆಂಗಳೂರು, ಮಾ. 31: ‘ಚುನಾವಣಾ ವ್ಯವಸ್ಥೆ ಸುಧಾರಣೆ ಬಗ್ಗೆ ಸಂಸತ್ತಿನಲ್ಲಿ ಚರ್ಚೆ ಮಾಡುವ ಬಗ್ಗೆ ಲೋಕಸಭಾ ಸ್ಪೀಕರ್‍ಗೆ ಪತ್ರ ಬರೆದಿದ್ದೇನೆ. ಎಪ್ರಿಲ್ 10ಕ್ಕೆ ಗೌಹಾಟಿಯಲ್ಲಿ ಸ್ಪೀಕರ್‍ಗಳ ಸಮ್ಮೇಳನ ನಡೆಯಲಿದ್ದು, ಅಲ್ಲಿ ಈ ವಿಷಯದ ಕುರಿತು ಅವರ ಗಮನಕ್ಕೆ ತರುತ್ತೇನೆ' ಎಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದ್ದಾರೆ.

ಗುರುವಾರ ವಿಧಾನಸೌಧದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಚುನಾವಣಾ ವ್ಯವಸ್ಥೆ ಸುಧಾರಣೆ ವಿಷಯ ಎಪ್ರಿಲ್ 10ರಿಂದ ಗೌಹಾತಿಯಲ್ಲಿ ಸ್ಪೀಕರ್‍ಗಳ ಸಭೆ ಇದೆ. ನಮ್ಮ ವಿಧಾನಸಭೆಯಲ್ಲಿ ಇಷ್ಟೆಲ್ಲ ವಿಷಯಗಳ ಬಗ್ಗೆ ಚರ್ಚೆಯಾಗುತ್ತಿರುವ ಬಗ್ಗೆ ಎಲ್ಲ ರಾಜ್ಯಗಳ ವಿಧಾನಸಭೆಗಳಲ್ಲಿ ಚರ್ಚೆಯಾಗುವ ಬಗ್ಗೆ ಮಾತುಗಳು ಕೇಳಿ ಬರುತ್ತಿವೆ' ಎಂದರು.

‘ಈ ಬಾರಿ ಅಧಿವೇಶನದಲ್ಲಿ ಶೇ.82ರಷ್ಟು ಹಾಜರಾತಿ ಇತ್ತು. ವಿಧಾನ ಪರಿಷತ್ತಿಗೆ ನೂರಾರು ವರ್ಷದ ಇತಿಹಾಸ ಇದೆ. ಇತ್ತೀಚಿನ ದಿನಗಳಲ್ಲಿ ಪರಿಷತ್ತು ಚುನಾವಣೆಗಳು ಹೇಗೆ ನಡೆದಿವೆ. ಪರಿಷತ್ತಿನಲ್ಲಿ ನಡೆದ ಘಟನೆಗಳನ್ನು ಜನರು ನೋಡುತ್ತಿದ್ದಾರೆ. ಸ್ಪೀಕರ್ ಆಗಿ ಅದರ ಸುಧಾರಣೆಗೆ ನಾವೆಲ್ಲರೂ ಕಾರಣಕರ್ತರಾಗಬೇಕು. ಪರಿಷತ್ತಿನಿಂದಲೇ ಚುನಾವಣಾ ಸುಧಾರಣೆ ಬಗ್ಗೆ ಚರ್ಚೆ ನಡೆಯಬೇಕಿತ್ತು. ಅಲ್ಲಿ ಸುಧಾರಣಾ ಪುಸ್ತಕ ವಿತರಣೆಗೆ ವಿರೋಧ ಮಾಡುವ ಮನಸ್ಥಿತಿ ಇದ್ದರೆ ಅವರ ಮಾನಸಿಕ ಸ್ಥಿತಿ ಹೇಗಿದೆ ಎಂದು ಬಿಡಿಸಿ ಹೇಳುವ ಅಗತ್ಯವಿಲ್ಲ' ಎಂದು ಅವರು ಟೀಕಿಸಿದರು.

‘ಈ ವಿಷಯ ಸಾರ್ವಜನಿಕ ಚರ್ಚೆಗೆ ಒಳಪಡಬೇಕು ಎಂದು ಅನೇಕ ಗಣ್ಯರಿಗೆ ಚರ್ಚೆ ನಡೆಸುವಂತೆ ಪತ್ರ ಬರೆದಿದ್ದೇನೆ. ಕಾನೂನು ಕಾಲೇಜುಗಳಲ್ಲಿ ಈ ಬಗ್ಗೆ ಚರ್ಚೆ ನಡೆಯುತ್ತಿದೆ. ನಾನು ಹೋದ.ಕಡೆಗಳಲ್ಲಿ ಈ ವಿಷಯ ಚರ್ಚೆ ಮಾಡುತ್ತಿದ್ದೇನೆ' ಎಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಇದೇ ಸಂದರ್ಭದಲ್ಲಿ ಮಾಹಿತಿ ನೀಡಿದರು.

ಬಜೆಟ್ ಅಧಿವೇಶನ ಅತ್ಯಂತ ಯಶಸ್ವಿ: ‘ಇದೇ ತಿಂಗಳ 4ರಿಂದ ಆರಂಭವಾದ ಬಜೆಟ್ ಅಧಿವೇಶನ 19 ದಿನಗಳಲ್ಲಿ ಒಟ್ಟು 116 ಗಂಟೆ ಸದನ ನಡೆದಿದ್ದು, ಕಲಾಪದಲ್ಲಿ ಅರ್ಥಪೂರ್ಣ ಚರ್ಚೆಗಳಾಗಿವೆ. ಇದಕ್ಕೆ ಕಾರಣಕರ್ತರಾದವಿ ಪಕ್ಷ ನಾಯಕರು ಹಾಗೂ ಆಡಳಿತ ಪಕ್ಷದ ನಾಯಕರು ಸೇರಿದಂತೆ ಎಲ್ಲ ಸದಸ್ಯರನ್ನು ಅಭಿನಂದಿಸುತ್ತೇನೆ. ಎಲ್ಲರೂ ಉತ್ಸಾಹದಲ್ಲಿ ಕಲಾಪದಲ್ಲಿ ಪಾಲ್ಗೊಳ್ಳುವ ಮೂಲಕ ಸದನದ ಗೌರವ ಹೆಚ್ಚಿಸಿದ ಅಧಿವೇಶನ ಇದಾಗಿತ್ತು' ಎಂದು ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದರು.

‘ಅಧಿವೇಶನ ಕಲಾಪಗಳು ಚನ್ನಾಗಿ ನಡೆದರೆ ಜನರಲ್ಲಿ ವಿಶ್ವಾಸ ಹೆಚ್ಚಿಸಲು ಕಾರಣ ಆಗುತ್ತದೆ. ಆಯವ್ಯಯದ ಮೇಲೆ ಮುಖ್ಯಮಂತ್ರಿ ಭಾಷಣ ಮಾಡಿದ ಮೇಲೆ ಸದಸ್ಯರು 23ಗಂಟೆ ಚರ್ಚೆ ಮಾಡಿದ್ದಾರೆ. ಬೇಡಿಕೆಗಳ ಮೇಲಿನ ಚರ್ಚೆಯಲ್ಲಿ 27ಗಂಟೆ ಚರ್ಚೆಯಲ್ಲಿ ಪಾಲ್ಗೊಂಡಿದ್ದರು. ಈ ಬಾರಿ ಸಚಿವರು ಉತ್ತರ ಕೊಟ್ಟಿದ್ದಾರೆ. ಹೊಸ ಶಾಸಕರಿಗೆ ಈ ಬಗ್ಗೆ ಒಂದು ವ್ಯವಸ್ಥೆ ಇದೆ ಅನ್ನುವುದನ್ನು ಮನವರಿಕೆಯಾಯಿತು. ಸದಸ್ಯರಿಗೆ ಹೇಗೆ ಚರ್ಚೆಯಲ್ಲಿ ಪಾಲ್ಗೊಳ್ಳಬೇಕೆಂದು ತಿಳಿಯಿತು' ಎಂದು ಅವರು ಅಭಿಪ್ರಾಯಪಟ್ಟರು.

‘ಸಮಿತಿಗಳ ವರದಿಗಳು, 13 ವಿಧೆಯಕಗಳ ಅಂಗೀಕಾರ, ನಿಯಮ 69ರಡಿ 6 ಸೂಚನೆಗಳ ಚರ್ಚೆ ಮಾಡಲಾಗಿದೆ. 405 ಪ್ರಶ್ನೆಗಳಿಗೆ 355 ಪ್ರಶ್ನೆಗಳಿಗೆ ಉತ್ತರ ನೀಡಲಾಗಿದೆ. ಶೂನ್ಯವೇಳೆಯಲ್ಲಿ 46 ವಿಷಯಗಳ ಬಗ್ಗೆ ಚರ್ಚೆ ಮಾಡಿದ್ದೇವೆ. ಈ ಬಾರಿ ಕಲಾಪ ವೀಕ್ಷಣೆಗೆ ಸಾರ್ವಜನಿಕರಿಗೆ ಮುಕ್ತ ಅವಕಾಶ ಕಲ್ಪಿಸಲಾಗಿತ್ತು. 10,419 ಜನರು ಸದನದ ಕಲಾಪವನ್ನು ವೀಕ್ಷಣೆ ಮಾಡಿದ್ದಾರೆ.

‘ಕೆಲವು ವಿದೇಶಿ ಗಣ್ಯರು, ಹೊರ ರಾಜ್ಯಗಳ ಗಣ್ಯರು ಆಗಮಿಸಿದ್ದು ನೋಡಿದ್ದೇವೆ. ಈ ಬಾರಿಯ ಅಧಿವೇಶನದಲ್ಲಿ ಚುನಾವಣಾ ವ್ಯವಸ್ಥೆಯಲ್ಲಿ ಸುಧಾರಣೆ ತರುವ ವಿಷಯದ ಮೇಲೆ ಎರಡು ದಿನ ಚರ್ಚೆ ನಡೆದಿರುವುದು ಹೆಮ್ಮೆಯ ವಿಷಯ. ಅನೇಕ ಹೊಸ ರೀತಿಯ ವಿಷಯಗಳ ಚರ್ಚೆ ನಡೆಸಲಾಗುತ್ತಿದೆ. 17 ಮಂದಿ ಸದಸ್ಯರು 10 ಗಂಟೆಗಳ ಕಾಲ ಚರ್ಚೆ ನಡೆಸಿದ್ದಾರೆ. ಎಲ್ಲರೂ ಮುಕ್ತವಾಗಿ ಮಾತನಾಡಿದ್ದಾರೆ' ಎಂದು ಅವರು ವಿವರ ನೀಡಿದರು.

‘ಈ ವರ್ಷ ಆರಂಭದಲ್ಲಿ 26 ದಿನಗಳ ಕಾಲ ಸದನದ ಕಲಾಪ ನಡೆದಿದೆ. ಈ ವರ್ಷ ಕನಿಷ್ಟ 60 ದಿನಗಳ ಕಾಲ ಸದನ ನಡೆಸುವ ವಿಶ್ವಾಸ ಇದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಈ ವ್ಯವಸ್ಥೆ ಬಲ ಪಡಿಸುವ ಪ್ರಯತ್ನ ನಡೆಸಿದ್ದಾರೆ' ಎಂದು ಸ್ಪೀಕರ್ ಕಾಗೇರಿ ತಿಳಿಸಿದರು. ವಿಧಾನಸಭೆ ಕಾರ್ಯದರ್ಶಿ ವಿಶಾಲಾಕ್ಷಿ ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News