‘ಸಾವಯವ ಸಿರಿ' ಕಾರ್ಯಕ್ರಮ: ಆರ್ಥಿಕ ಬೆಂಬಲ ದೊರೆತಿಲ್ಲ; ಸಚಿವ ಬಿ.ಸಿ.ಪಾಟೀಲ್

Update: 2022-03-31 15:31 GMT

ಬೆಂಗಳೂರು, ಮಾ. 31: ‘ಸಾವಯವ ಸಿರಿ ಕಾರ್ಯಕ್ರಮದ ಅನುಷ್ಠಾನ ಸಂಬಂಧ ಸರಕಾರಿ ಆದೇಶದಲ್ಲಿ ತಾಲೂಕು ಮಟ್ಟದ ಸಂಸ್ಥೆಗಳಿಗೆ ನೀಡಬಹುದಾದ, ಆರ್ಥಿಕ ಬೆಂಬಲ ನೀಡುವ ಬಗ್ಗೆ ಸ್ಪಷ್ಟತೆ ಇರದ ಕಾರಣ ಸೃಷ್ಟೀಕರಣ ಕೋರಿ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಈ ಹಿನ್ನೆಲೆಯಲ್ಲಿ ತಾಲೂಕು ಮಟ್ಟದ ಸಂಸ್ಥೆಗಳ ಆಯ್ಕೆ ಪ್ರಕ್ರಿಯೆಯನ್ನು ಕೇಂದ್ರ ಕಚೇರಿಯ ಮುಂದಿನ ಆದೇಶದವರೆಗೆ ತಾತ್ಕಾಲಿಕವಾಗಿ ತಡೆಹಿಡಿಯಲು ಜಿಲ್ಲೆಗಳಿಗೆ ತಿಳಿಸಲಾಗಿದೆ' ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಸ್ಪಷ್ಟಪಡಿಸಿದ್ದಾರೆ . 

‘2021-22ನೆ ಸಾಲಿನ ಆಯವ್ಯಯದಲ್ಲಿ ಸಿಎಂ ಸಾವಯವ ಕೃಷಿಯನ್ನು ಉತ್ತೇಜಿಸಲು 500 ಕೋಟಿ ರೂ. ಘೋಷಿಸಿದರೂ ವ್ಯಾಲುಮ್ 3ನಲ್ಲಿ ಯಾವುದೇ ಅನುದಾನ ಒದಗಿಸಲಾಗಿರುವುದಿಲ್ಲ. ತದನಂತರ 2021ರ ಸೆಪ್ಟಂಬರ್ 23ರನ್ವಯ ಉದ್ದೇಶಿತ ಸಾವಯವ ಸಿರಿ ಕಾರ್ಯಕ್ರಮದ 500 ಕೋಟಿ ರೂ.ಕ್ರಿಯಾ ಯೋಜನೆ ಪ್ರಸಕ್ತ ಸಾಲಿನ ಚಾಲ್ತಿ ಕಾರ್ಯಕ್ರಮಗಳ, ಮುಂದುವರಿಕೆಗಾಗಿ ಸರಕಾರ ಒದಗಿಸಲಾಗಿರುವ 50ಕೋಟಿ ರೂ. ಅನುದಾನದಲ್ಲಿ ಪ್ರಾರಂಭಿಸಲು ತಿಳಿಸಲಾಗಿರುತ್ತದೆ' ಎಂದು ಮಾಹಿತಿ ನೀಡಿದ್ದಾರೆ.

‘2021-22ನೆ ಸಾಲಿನಲ್ಲಿ 30ಕೋಟಿ ರೂ.ಅನುದಾನದಲ್ಲಿ ಉದ್ದೇಶಿತ ಕಾರ್ಯಕ್ರಮವಾದ ‘ಸಾವಯವ ಸಿರಿ' ಯೋಜನೆಯನ್ನು ಪ್ರಾರಂಭಿಸಲು 2022ರ ಫೆಬ್ರವರಿ 8ರಲ್ಲಿ ಆದೇಶ ಹೊರಡಿಸಲಾಗಿರುತ್ತದೆ. ಆದೇಶದಲ್ಲಿ ‘ಸಾವಯವ ಸಿರಿ' ಯೋಜನೆಯನ್ನು ಮೂರು(ಹಂತದ) ಕಾರ್ಯಕ್ರಮವಾಗಿ 3 ವರ್ಷಗಳ ಅವಧಿಯಲ್ಲಿ ಯೋಜನೆಯನ್ನು ಜಿಲ್ಲಾ ಮಟ್ಟದಲ್ಲಿ ಸಾಮಾಜಿಕ ಸಂಸ್ಥೆಗಳ ಮುಖಾಂತರ ಹಾಗೆಯೇ ತಾಲೂಕು ಮಟ್ಟದಲ್ಲಿ ಸಾವಯವ ಕೃಷಿಕರ ಸಂಘ ಸಂಸ್ಥೆ/ಒಕ್ಕೂಟಗಳ ಮುಖಾಂತರ ಮತ್ತು ಕ್ಷೇತ್ರ ಮಟ್ಟದಲ್ಲಿ ಆಯ್ಕೆಯಾಗುವ ಸಾವಯವ ರೈತರ ಮುಖಾಂತರ ಅನುಷ್ಠಾನಗೊಳಿಸಲಾಗುವುದು. ಮುಂದುವರೆದು, ಜಿಲ್ಲಾ ಮಟ್ಟದಲ್ಲಿ ಟ್ರಸ್ಟ್ ಸೊಸೈಟಿ ಕಾಯ್ದೆಯಡಿ ನೋಂದಾಯಿತ ಸಾಮಾಜಿಕ ಸಂಸ್ಥೆಯನ್ನು ಆಯ್ಕೆಮಾಡಿ ಆ ಜಿಲ್ಲೆಯ ಕ್ಷೇತ್ರ ಮಟ್ಟದಲ್ಲಿ ಗುರುತಿಸಲಾಗುವ ರೈತರನ್ನು ಸಾವಯವ ಕೃಷಿಯ ವ್ಯಾಪ್ತಿಗೆ ಉತ್ತೇಜಿಸುವ ಜವಾಬ್ದಾರಿ ಹೊಂದಿರುತ್ತವೆ ಎಂದು ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News