ರಾಜ್ಯದಲ್ಲಿ ಎಕ್ಸೈಡ್ ಇಂಡಸ್ಟ್ರೀಸ್ 6 ಸಾವಿರ ಕೋಟಿ ರೂ. ಹೂಡಿಕೆ: ಸಚಿವ ಮುರುಗೇಶ್ ನಿರಾಣಿ

Update: 2022-03-31 16:45 GMT

ಬೆಂಗಳೂರು, ಮಾ. 31: ‘ರಾಜ್ಯದಲ್ಲಿ ಲಿಥಿಯಂ-ಐಯಾನ್ ಸೆಲ್ ಉತ್ಪಾದನೆಗೆ 6 ಸಾವಿರ ಕೋಟಿ ರೂ.  ಬಂಡವಾಳ ಹೂಡಿಕೆ ಮಾಡಲು ಎಕ್ಸೈಡ್ ಇಂಡಸ್ಟ್ರೀಸ್ ಮುಂದೆ ಬಂದಿದೆ' ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ಆರ್.ನಿರಾಣಿ ಇಂದಿಲ್ಲಿ ತಿಳಿಸಿದ್ದಾರೆ.

ಗುರುವಾರ ಬೆಂಗಳೂರಿನ ಕರ್ನಾಟಕ ಉದ್ಯೋಗ ಮಿತ್ರ ಕಚೇರಿಯಲ್ಲಿ ಎಕ್ಸೈಡ್ ಇಂಡಸ್ಟ್ರೀಸ್ ವ್ಯವಸ್ಥಾಪಕ ನಿದೇರ್ಶಕ ಮತ್ತು ಸಿಇಒ ಸುಬೀರ್ ಚಕ್ರವರ್ತಿ, ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಡಾ.ಮುರುಗೇಶ್ ಆರ್.ನಿರಾಣಿ ಅವರನ್ನು ಭೇಟಿ ಮಾಡಿ ಸಮಾಲೋಚನೆ ನಡೆಸಿದರು. ಎಕ್ಸೈಡ್ ಇಂಡಸ್ಟ್ರೀಸ್ ಬಂಡವಾಳ ಹೂಡಿಕೆ ಮಾಡುತ್ತಿರುವ ಪರಿಣಾಮ ರಾಜ್ಯದಲ್ಲಿ ಒಟ್ಟು 1,200ರಿಂದ 1,400ರಷ್ಟು ಉದ್ಯೋಗ ಸೃಷ್ಟಿಸುವ ನಿರೀಕ್ಷೆಯಿದೆ.

ಇದು ಸುಧಾರಿತ ಕೋಶ ರಸಾಯನಶಾಸ್ತ್ರ ತಂತ್ರಜ್ಞಾನಕ್ಕಾಗಿ ಭಾರತದ ಅತಿದೊಡ್ಡ ಗಿಗಾ ಕಾರ್ಖಾನೆಗಳಲ್ಲಿ ಒಂದಾಗಿದೆ ಎಂದು ಚಕ್ರವರ್ತಿ ಹೇಳಿದರು. ಎಕ್ಸೈಡ್ ಇಂಡಸ್ಟ್ರೀಸ್ ಬೆಂಗಳೂರಿನ ಕೆಂಪೇಗೌಡ ಅಂತರ್‍ರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿಯ ಹರಳೂರು ಕೈಗಾರಿಕಾ ಪ್ರದೇಶದಲ್ಲಿ 80 ಎಕರೆ ಭೂಮಿಯನ್ನು ಕೋರಿದೆ. ಕಂಪೆನಿಗೆ ಅಗತ್ಯವಿರುವ ಎಲ್ಲ್ಲ ರೀತಿಯ ಸಹಕಾರವನ್ನು ಸರಕಾರ ನೀಡಲಿದೆ ಎಂದು ಸಚಿವ ಮುರುಗೇಶ್ ನಿರಾಣಿ ಹೇಳಿದ್ದು, ಈ ಯೋಜನೆಯು ಶೀಘ್ರ ಕಾರ್ಯಗತಗೊಳ್ಳಲಿ ಎಂದು ಹಾರೈಸಿದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಸರಕಾರವು ಹೂಡಿಕೆಗಳನ್ನು ಆಕರ್ಷಿಸುವಲ್ಲಿ ಸಕ್ರಿಯವಾಗಿದ್ದು, ಕರ್ನಾಟಕದಲ್ಲಿ ಇರುವಂತಹ ಹೂಡಿಕೆದಾರ ಸ್ನೇಹಿ ವಾತಾವರಣ ದೇಶದ ಯಾವುದೇ ರಾಜ್ಯದಲ್ಲೂ ಇಲ್ಲ ಎಂದು ಮನವರಿಕೆ ಮಾಡಿಕೊಟ್ಟರು.ಮೂರು ತ್ರೈಮಾಸಿಕಗಳಲ್ಲಿ ವಿದೇಶಿ ನೇರ ಹೂಡಿಕೆ (ಎಫ್‍ಡಿಐ)ಆಕರ್ಷಿಸುವಲ್ಲಿ ಕರ್ನಾಟಕ ಮೊದಲ ಸ್ಥಾನದಲ್ಲಿದೆ ಎಂದು ನಿರಾಣಿ, ಸುಬೀರ್ ಚಕ್ರವರ್ತಿಗೆ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News