ವಿಜಯಪುರ: ಸಮ್ಮೇಳನದಲ್ಲಿ ಮರಾಠಿ ನೃತ್ಯ ಆಯೋಜನೆ; ಕ್ಷಮೆ ಕೇಳುವಂತೆ ಕಸಾಪ ಅಧ್ಯಕ್ಷರಿಗೆ ಮಹೇಶ ಜೋಶಿ ಪತ್ರ

Update: 2022-03-31 17:06 GMT
ಡಾ. ಮಹೇಶ ಜೋಶಿ

ಬೆಂಗಳೂರು, ಮಾ.31: ವಿಜಯಪುರ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮರಾಠಿ ನೃತ್ಯವನ್ನು ಆಯೋಜಿಸಿ, ಕನ್ನಡ ಸಾಹಿತ್ಯ ಪರಿಷತ್ತಿಗೆ ಮುಜುಗರ ಉಂಟು ಮಾಡಿದ್ದ ವಿಜಯಪುರ ಜಿಲ್ಲಾ ಘಟಕದ ಅಧ್ಯಕ್ಷರಿಗೆ ತಕ್ಷಣವೇ ಕನ್ನಡಿಗರಲ್ಲಿ ಕ್ಷಮೆ ಯಾಚಿಸುವಂತೆ ಕೇಂದ್ರ ಪರಿಷತ್ತಿನ ಅಧ್ಯಕ್ಷ ಡಾ. ಮಹೇಶ ಜೋಶಿ ಅವರು ಸೂಚಿಸಿದ್ದಾರೆ.

ಮರಾಠಿ ಭಾಷಿಕರು ಬೆಳಗಾವಿಯ ಗಡಿಯಲ್ಲಿ ಇನ್ನಿಲ್ಲದ ದಾಂಧಲೆ ಸೃಷ್ಟಿಸುತ್ತಿರುತ್ತಾರೆ. ಸದಾ ಕನ್ನಡಿಗರನ್ನು ಕೆಣಕುತ್ತಾ ಶಾಂತಿ ಮತ್ತು ಶಿಸ್ತನ್ನು ಉಲ್ಲಂಘಿಸುತ್ತಾರೆ. ಕನ್ನಡ ಸಾಹಿತ್ಯ ಪರಿಷತ್ತಿನ ವೇದಿಕೆ ಪವಿತ್ರವಾದುದ್ದು, ಅದನ್ನು ಯಾವುದೇ ಕಾರಣಕ್ಕೂ ಮಲಿನಗೊಳಿಸಬಾರದು. ಇಂತಹ ಕೃತ್ಯಗಳು ಮರುಕಳಿಸಬಾರದು. ಎಚ್ಚರದ ನಡೆ ನಿಮ್ಮದಾಗಬೇಕು. ಪರಿಷತ್ತಿನ ಘನತೆ ಮತ್ತು ಗೌರವಕ್ಕೆ ಧಕ್ಕೆ ತರಬಾರದು. ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮರಾಠಿ ನೃತ್ಯ ಆಯೋಜಿಸಿದ್ದು, ಪರಿಷತ್ತಿನ ಇತಿಹಾಸದಲ್ಲಿ ಕಪ್ಪು ಚುಕ್ಕೆಯಾಗಿದೆ. ಇಂತಹ ಕಾರ್ಯ ಯಾವುದೇ ಕಾರಣಕ್ಕೂ ಸಮರ್ಥನೀಯವಲ್ಲ. ಆದ್ದರಿಂದ ಈ ಕುರಿತು ತಕ್ಷಣ ವಿಷಾದ ವ್ಯಕ್ತಪಡಿಸಿ ಮಾಧ್ಯಮಗಳ ಮೂಲಕ ಕನ್ನಡಿಗರಲ್ಲಿ ಕ್ಷಮೆ ಯಾಚಿಸಬೇಕು. ಯಾವ ರೀತಿಯಲ್ಲಾದರೂ ಇದಕ್ಕೆ ತಪ್ಪಿ ನಡೆದರೆ ನಿಮ್ಮ ಮೇಲೆ ಪರಿಷತ್ತಿನ ನಿಬಂಧನೆಗಳ ಪ್ರಕಾರ ಕ್ರಮಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿ, ಅವರು ವಿಜಯಪುರ ಜಿಲ್ಲಾ ಘಟಕದ ಅಧ್ಯಕ್ಷರಿಗೆ ಪತ್ರ ಬರೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News