ಪಕ್ಷದ ಮುಖಂಡರೊಂದಿಗೆ ಶುಕ್ರವಾರ ರಾಹುಲ್ ಗಾಂಧಿ ಸಭೆ
ಬೆಂಗಳೂರು, ಮಾ. 31: ‘ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ನಾಳೆ(ಎ.1) ಬೆಳಗ್ಗೆ 10.30ಕ್ಕೆ ಪಕ್ಷದ ನಾಯಕರನ್ನು ಭೇಟಿ ಮಾಡಲಿದ್ದು, ಶಾಸಕರು, ಸಂಸದರು, ಪರಾಜಿತ ಅಭ್ಯರ್ಥಿಗಳು, ಮಾಜಿ ಶಾಸಕರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ' ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ತಿಳಿಸಿದ್ದಾರೆ.
ಗುರುವಾರ ಇಲ್ಲಿನ ಕೆಂಪೇಗೌಡ ಅಂತರ್‍ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ‘ನಾಳೆ ಮಧ್ಯಾಹ್ನ ಯುವ, ವಿದ್ಯಾರ್ಥಿ ಹಾಗೂ ಮಹಿಳಾ ಘಟಕಗಳ ಪದಾಧಿಕಾರಿಗಳ ಜತೆ ಸಭೆ ನಡೆಸಲಿದ್ದಾರೆ. ರಾಹುಲ್ ಗಾಂಧಿ ಅವರು ರಾಜ್ಯಕ್ಕೆ ಆಗಮಿಸಿದ್ದು, ಅಕ್ಷರ, ಅನ್ನ ದಾಸೋಹ ನೀಡಿರುವ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಲಿದ್ದು, ಡಾ.ಶಿವಕುಮಾರ ಸ್ವಾಮೀಜಿ ಅವರ ಗದ್ದುಗೆಗೆ ನಮಿಸಲಿದ್ದಾರೆ' ಎಂದು ಹೇಳಿದರು.
‘ಇಂದಿರಾ ಗಾಂಧಿ ಅವರಿಂದ ಹಿಡಿದು ರಾಜೀವ್ ಗಾಂಧಿ ಹಾಗೂ ಸೋನಿಯಾ ಗಾಂಧಿ ಅವರು ನಮ್ಮ ರಾಜ್ಯದ ಎಲ್ಲ ಸಮುದಾಯಗಳ ಮಠದ ಬಗ್ಗೆ ಅಪಾರ ಗೌರವ ಇಟ್ಟುಕೊಂಡಿದ್ದು, ಅವರೆಲ್ಲರೂ ಇಲ್ಲಿನ ಮಠಗಳಿಗೆ ಭೇಟಿ ಕೊಟ್ಟ ಪರಂಪರೆ ಇದೆ. ಇದೀಗ ಅದನ್ನು ರಾಹುಲ್ ಗಾಂಧಿ ಅವರು ಅದನ್ನು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ' ಎಂದುಅವರು ತಿಳಿಸಿದರು.
‘ಹಲಾಲ್ ವಿವಾದಕ್ಕೆ ಸಂಬಂಧಿಸಿದಂತೆ ಸಿಎಂಗೆ ಗಂಡಸ್ತನ ಇಲ್ಲ, ಕಾಂಗ್ರೆಸ್‍ಗೆ ತಾಕತ್ತಿಲ್ಲ' ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಕುಮಾರಸ್ವಾಮಿ ಹೇಳಿದ್ದಾರೆ. ಅವರು ಬಹಳ ಹಿರಿಯರಿದ್ದಾರೆ. ಡಾ.ಅಶ್ವಥ್ ನಾರಾಯಣ್ ಅವರು ಗಂಡಸ್ತನದ ಬಗ್ಗೆ ಮಾತನಾಡುತ್ತಾರೊ, ಬೇರೆಯವರು ಮಾತನಾಡುತ್ತಾರೋ ಆ ಬಗ್ಗೆ ಉತ್ತರ ನೀಡುವುದಿಲ್ಲ' ಎಂದು ಶಿವಕುಮಾರ್ ಪ್ರತಿಕ್ರಿಯೆಗೆ ನಿರಾಕರಿಸಿದರು.
‘ಸದ್ಯ ನಾವು ಪಕ್ಷದ ಸದಸ್ಯತ್ವ ಮಾಡುತ್ತಿದ್ದು, ಇಂದು ಕಡೆ ದಿನವಾಗಿದ್ದು ಕಾರ್ಯಕರ್ತರು ಸಕ್ರಿಯವಾಗಿ ಭಾಗವಹಿಸುವಂತೆ ನೋಡಿಕೊಳ್ಳುತ್ತಿದ್ದೇವೆ. ಇಂತಹ ವಿಚಾರಗಳಲ್ಲಿ ಜನ ಉತ್ತರ ನೀಡುತ್ತಾರೆ' ಎಂದು ಶಿವಕುಮಾರ್ ಪ್ರತಿಕ್ರಿಯೆ ನೀಡಿದರು.