ವಕೀಲರಿಗೆ ವಿಮೆ ಸೌಲಭ್ಯ ಕಲ್ಪಿಸಲು ಮುಂದಾದ ಸರಕಾರ: ವಯೋಮಿತಿಯಡಿ ಪಟ್ಟಿ ಸಲ್ಲಿಸಲು ಸೂಚನೆ

Update: 2022-03-31 17:40 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಮಾ.31: ವಕೀಲರ ಬಹಳ ದಿನಗಳ ಬೇಡಿಕೆಯಂತೆ ರಾಜ್ಯ ಸರಕಾರ ರಾಜ್ಯದ ಎಲ್ಲ ವಕೀಲರಿಗೆ ವಿಮೆ ಸೌಲಭ್ಯ ಕಲ್ಪಿಸಲು ಮುಂದಾಗಿದೆ. ರಾಜ್ಯದ ವಕೀಲರಿಗೆ ವಿಮೆ ಸೌಲಭ್ಯ ನೀಡಲು ವಯೋಮಿತಿ ಅನುಸಾರ ವಕೀಲರ ಪಟ್ಟಿಯನ್ನು ಸಿದ್ಧಪಡಿಸಿ ಕೊಡುವಂತೆ ರಾಜ್ಯ ಕಾನೂನು ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿನ ಅಧ್ಯಕ್ಷರಿಗೆ ಲಿಖಿತ ಮನವಿ ಕಳುಹಿಸಿದ್ದಾರೆ.

ಕೊರೋನ ಮಧ್ಯೆಯೂ ಆರೋಗ್ಯ ಹಾಗೂ ಜೀವ ಲೆಕ್ಕಿಸದೆ ಕೆಲಸ ಮಾಡುತ್ತಿದ್ದ ವಕೀಲರಿಗೆ ಹೊಸದಿಲ್ಲಿ ಮಾದರಿಯಲ್ಲಿ ವಿಮಾ ಸೌಲಭ್ಯ ಕಲ್ಪಿಸಬೇಕು ಎಂದು ಬೆಂಗಳೂರು ವಕೀಲರ ಸಂಘವೂ ಸೇರಿದಂತೆ ರಾಜ್ಯದ ಹಲವು ವಕೀಲರ ಸಂಘಟನೆಗಳು ಸರಕಾರಕ್ಕೆ ಸಾಕಷ್ಟು ಬಾರಿ ಒತ್ತಾಯಿಸಿದ್ದವು. 

ಈ ಕುರಿತಂತೆ ಬೆಂಗಳೂರು ವಕೀಲರ ಸಂಘದ ನಿಕಟಪೂರ್ವ ಅಧ್ಯಕ್ಷ ಎ.ಪಿ ರಂಗನಾಥ್ ಹಲವು ಬಾರಿ ಗೃಹ ಮತ್ತು ಕಾನೂನು ಇಲಾಖೆಯೊಂದಿಗೆ ಚರ್ಚಿಸಿದ್ದರಲ್ಲದೇ 2020ರ ಮಾರ್ಚ್ ನಲ್ಲಿ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಿಗೂ ಪತ್ರ ಬರೆದಿದ್ದರು. ಈ ಕುರಿತು ಪಿಐಎಲ್ ದಾಖಲಿಸಿಕೊಂಡಿದ್ದ ಹೈಕೋರ್ಟ್, ಎಲ್ಲ ವಕೀಲರಿಗೆ ವಿಮೆ ನೀಡುವ ಕುರಿತು ಸರಕಾರಕ್ಕೆ ನಿರ್ದೇಶನ ನೀಡಿತ್ತು.

ಅಂತಿಮವಾಗಿ ವಕೀಲರಿಗೆ ವಿಮೆ ಸೌಲಭ್ಯ ಕಲ್ಪಿಸಲು ಮುಂದಾಗಿರುವ ರಾಜ್ಯ ಸರಕಾರ 18ರಿಂದ 85 ವಯಸ್ಸಿನ ನಡುವಿನ ವಕೀಲರ ಪಟ್ಟಿಯನ್ನು ವಯೋಮಾನದಡಿ ವರ್ಗೀಕರಿಸಿ ಕೊಡುವಂತೆ ವಕೀಲರ ಪರಿಷತ್ತಿಗೆ ಸೂಚಿಸಿದೆ. ವಿಮೆ ಸೌಲಭ್ಯ ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿನಲ್ಲಿ ನೋಂದಣಿಯಾಗಿರುವ ಎಲ್ಲ ವಕೀಲರಿಗೆ ಲಭಿಸಲಿದೆ ಎಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News