ಶಿವಮೊಗ್ಗ: ಪರೀಕ್ಷೆಯಲ್ಲಿ ಕಾಪಿ ಹೊಡೆದ ವಿದ್ಯಾರ್ಥಿಯ ಕೈಕಚ್ಚಿದ ಉಪನ್ಯಾಸಕ!

Update: 2022-04-01 06:33 GMT
ಉಪನ್ಯಾಸಕ ಕಚ್ಚಿದ್ದರಿಂದ ಗಾಯಗೊಂಡಿದ್ದೆನ್ನಲಾದ ವಿದ್ಯಾರ್ಥಿಯ ಕೈ (ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ)

ಶಿವಮೊಗ್ಗ, ಎ.1: ಪರೀಕ್ಷೆಯಲ್ಲಿ ಕಾಪಿ ಹೊಡೆಯುತ್ತಿದ್ದ ಆರೋಪದಲ್ಲಿ ವಿದ್ಯಾರ್ಥಿ ಮತ್ತು ಕೊಠಡಿ ಮೇಲ್ವಿಚಾರಣೆ ನಡೆಸುತ್ತಿದ್ದ ಉಪನ್ಯಾಸಕನ ಮಧ್ಯೆ ಮಾತಿಗೆ ಮಾತು ಬೆಳೆದು, ಸಿಟ್ಟಿಗೆದ್ದ ಉಪನ್ಯಾಸಕ ವಿದ್ಯಾರ್ಥಿಯ ಕೈಗೆ ಕಚ್ಚಿ ಗಾಯಗೊಳಿಸಿರುವ ಘಟನೆ ಹೊಸನಗರದಲ್ಲಿ ನಡೆದಿರುವುದು ವರದಿಯಾಗಿದೆ. ಈ ನಡುವೆ ಪ್ರಕರಣ ಪೊಲೀಸ್ ಠಾಣೆವರೆಗೆ ತಲುಪಿದರೂ ರಾಜಿ ಪಂಚಾಯಿತಿಕೆಯಲ್ಲಿ ಸುಖಾಂತ್ಯ ಕಂಡಿದೆ ಎಂದು ತಿಳಿದು ಬಂದಿದೆ.

ಹೊಸನಗರ ತಾಲೂಕಿನ ಪ್ರಥಮ ದರ್ಜೆಕಾಲೇಜೊಂದರಲ್ಲಿ ಬಿ.ಎ. ಪದವಿ ಪರೀಕ್ಷೆಯಲ್ಲಿ ವಿದ್ಯಾರ್ಥಿಯೊಬ್ಬ ಕಾಪಿ ಹೊಡೆಯುತ್ತಿದ್ದ ಎಂದು ಆರೋಪಿಸಲಾಗಿದೆ. ಇದನ್ನು ಗಮನಿಸಿದ ಉಪನ್ಯಾಸಕ ವಿದ್ಯಾರ್ಥಿಗೆ ಬೈದು ಬುದ್ಧಿ ಹೇಳಿದ್ದಾರೆ. ನಕಲು ಮಾಡಲು ಬಳಕೆ ಮಾಡಿದ್ದ ಮೊಬೈಲ್ ಫೋನನ್ನು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ.

ಈ ಸಂದರ್ಭ ವಿದ್ಯಾರ್ಥಿ ಮತ್ತು ಉಪನ್ಯಾಸಕನ ನಡುವೆ ಮಾತಿಗೆ ಮಾತು ಬೆಳೆದಿದೆ. ಸಿಟ್ಟಿಗೆದ್ದ ಉಪನ್ಯಾಸಕ ವಿದ್ಯಾರ್ಥಿಯ ಕೈಗೆ ಕಚ್ಚಿದ್ದಾರೆ ಎಂದು ತಿಳಿದು ಬಂದಿದೆ.

ರಾಜಿಯಾಯ್ತು ಪ್ರಕರಣ: ಘಟನೆ ಸಂಬಂಧ ದೂರು, ಪ್ರತಿ ದೂರು ನೀಡಲು ಸಿದ್ಧತೆಯಾಗಿತ್ತು. ಆದರೆ ವಿದ್ಯಾರ್ಥಿಯ ಭವಿಷ್ಯದ ದೃಷ್ಟಿಯಿಂದ ಪ್ರಕರಣ ರಾಜಿಯಲ್ಲಿ ಇತ್ಯರ್ಥಗೊಂಡಿದೆ ಎಂದು ತಿಳಿದು ಬಂದಿದೆ. ಆದರೆ ವಿದ್ಯಾರ್ಥಿಗೆ ಉಪನ್ಯಾಸಕ ಕೈಕಚ್ಚಿರುವ ವಿಚಾರ ಮತ್ತು ಅದರದ್ದೆನ್ನಲಾದ ಫೋಟೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News