×
Ad

'ಧರ್ಮೋದ್ಧಾರದ ಸೋಗಿನಲ್ಲಿ ಅಶಾಂತಿ' ಸೃಷ್ಟಿ ಸಹಿಸುವ ಪ್ರಶ್ನೆಯೇ ಇಲ್ಲ: ಎಚ್.ಡಿ. ಕುಮಾರಸ್ವಾಮಿ

Update: 2022-04-01 18:08 IST

ಬೆಂಗಳೂರು: ‘ಕರಪತ್ರಗಳನ್ನು ಹಂಚಿ ಸಮಾಜ ಒಡೆಯುತ್ತಿರುವ ವಿಶ್ವ ಹಿಂದೂ ಪರಿಷತ್, ಬಜರಂಗದಳದ ಬಗ್ಗೆ ನನ್ನ ಹೇಳಿಕೆಯಲ್ಲಿ ಯಾವ ಬದಲಾವಣೆಯೂ ಇಲ್ಲ. ಧರ್ಮ-ಜಾತಿ ಆಧಾರದ ಮೇಲೆ ಜನರನ್ನು ವಿಘಟಿಸುವ ಇಂಥ ಸಂಘಟನೆಗಳ ಕಿಡಿಗೇಡಿಗಳ ಬಗ್ಗೆ ನನ್ನ ನಿಲುವು ಅಚಲ. ‘ಧರ್ಮೋದ್ಧಾರದ ಸೋಗಿನಲ್ಲಿ ಅಶಾಂತಿ' ಸೃಷ್ಟಿಸುವ ಕೃತ್ಯವನ್ನು ಸಹಿಸುವ ಪ್ರಶ್ನೆಯೇ ಇಲ್ಲ' ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಎಚ್ಚರಿಕೆ ನೀಡಿದ್ದಾರೆ.

ಶುಕ್ರವಾರ ಸರಣಿ ಟ್ವೀಟ್ ಮಾಡಿರುವ ಅವರು, ‘ಕರ್ನಾಟಕ ಸರ್ವ ಜನಾಂಗದ ಶಾಂತಿಯ ತೋಟ. ಇದು ವಿಶ್ವ ಹಿಂದೂ ಪರಿಷತ್, ಬಜರಂಗದಳದ ಜಹಗೀರಲ್ಲ. ಇವೇನು ಹಿಂದೂಗಳ ಪ್ರಾತಿನಿಧಿಕ ಸಂಸ್ಥೆಗಳೂ ಅಲ್ಲ. ಒಂದು ರಾಜಕೀಯ ಪಕ್ಷದ ಬಾಲಂಗೋಚಿಗಳಷ್ಟೇ. ಹಿಂದೂ, ಹಿಂದುತ್ವ ಎನ್ನುವ ಪರಂಪರೆ ಇವರ ಗುತ್ತಿಗೆಯಲ್ಲ' ಎಂದು ವಾಗ್ದಾಳಿ ನಡೆಸಿದ್ದಾರೆ.

‘ಧರ್ಮೋ ರಕ್ಷತಿ ರಕ್ಷಿತಃ' ಎನ್ನುವುದರ ಅರಿವು ನನಗೂ ಇದೆ. ಧರ್ಮ ರಕ್ಷಣೆ ಎಂದರೆ ಇನ್ನೊಬ್ಬರ ಅನ್ನ ಕಸಿಯುವುದಲ್ಲ? ನೆಮ್ಮದಿಯ ನಾಡಿಗೆ ಕಿಚ್ಚಿಡುವುದಲ್ಲ? ಮನಸ್ಸುಗಳನ್ನು ಒಡೆದು ದೇಶವನ್ನು ‘ಒಡೆದ ಮಡಿಕೆ' ಮಾಡುವುದಲ್ಲ. ದೇಶವೆಂದರೆ ಮಣ್ಣಲ್ಲ, ಮನುಷ್ಯರು. ವಿಶ್ವ ಹಿಂದೂ ಪರಿಷತ್, ‘ವಿಶ್ವ ವಿನಾಶಕ ಪರಿಷತ್' ಅಥವಾ ‘ಧರ್ಮ ವಿನಾಶಕ ಪರಿಷತ್' ಆಗುವುದು ಬೇಡ. ಬಜರಂಗದಳ ಭಾವನೆಗಳ ಭಯೋತ್ಪಾದಕ ಆಗುವುದು ಬೇಡ. ಹಿಂದೂ ಧರ್ಮದ ನಾಶ ಚಕ್ರವರ್ತಿ, ಸಾಮ್ರಾಟರಿಗೇ ಆಗಲಿಲ್ಲ. ಹಿಂದುತ್ವ ಅಂದೂ ಉಳಿದಿತ್ತು, ಮುಂದೆಯೂ ಉಳಿಯುತ್ತದೆ. ನಿಮ್ಮ ಕಿತಾಪತಿ ಏಕೆ?' ಎಂದು ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.

‘ಕೊರೋನ ಕಾಲದಲ್ಲಿ ನೀವೊಬ್ಬರೇ ಜನರ ಸೇವೆ ಮಾಡಿಲ್ಲ. ಎಲ್ಲರೂ ಜಾತಿ, ಧರ್ಮ ಮೀರಿ ಸೇವೆ ಮಾಡಿದ್ದಾರೆ. ‘ಶವ ಸಂಸ್ಕಾರದಲ್ಲೂ ಕೀರ್ತಿ'ಯನ್ನು ಹುಡುಕುವ ನಿಮ್ಮಗಳ ವಿಕೃತ ಮನಸ್ಥಿತಿಗೆ ನನ್ನ ಮರುಕವಿದೆ. ಇದಾ ನಿಮ್ಮ ಧರ್ಮ? ಸೋಂಕಿಗೆ ಬಲಿಯಾದವರ ಪಾರ್ಥೀವ ಶರೀರಗಳನ್ನು ನೀವು ಬಾಲಂಗೋಚಿ ಆಗಿರುವ ಪಕ್ಷದ ಸರಕಾರ ಹೇಗೆ ಕಂಡಿತು ಎಂಬುದಕ್ಕೆ ಕೇಂದ್ರ ಮಂತ್ರಿ ಸುರೇಶ ಅಂಗಡಿಯವರೇ ಸಾಕ್ಷಿ. ಅವರ ಅಂತ್ಯಕ್ರಿಯೆ ಹೇಗಾಯಿತು ಎಂದು ಮಾಧ್ಯಮಗಳ ಮೂಲಕ ಕಣ್ಣಾರೆ ನೋಡಿದ್ದೇನೆ' ಎಂದು ಕುಮಾರಸ್ವಾಮಿ ಆಕ್ರೋಶ ಹೊರಹಾಕಿದ್ದಾರೆ.

‘ಅಂದು ಕೇಂದ್ರ-ರಾಜ್ಯ ಸರಕಾರಗಳ ವೈಫಲ್ಯಗಳು ಯಾವ ಮಟ್ಟದಲ್ಲಿದ್ದವು? ಬೆಂಗಳೂರಿನಲ್ಲಿ ಯಾರೆಲ್ಲ ಶವ ಸಂಸ್ಕಾರ ಮಾಡಿದರು ಎನ್ನುವುದನ್ನು ನಾವೂ ಮಾಧ್ಯಮಗಳಲ್ಲಿ ಕಂಡಿದ್ದೇವೆ. ಆಗ ಇವರೆಲ್ಲ ಎಲ್ಲಿದ್ದರೋ ನನಗಂತೂ ಗೊತ್ತಿಲ್ಲ. ಡಿಜೆ ಹಳ್ಳಿ ಗಲಭೆ ಕಾರಣದ ಬಗ್ಗೆ ನೀವು ಏಕೆ ದನಿಯೆತ್ತುವುದಿಲ್ಲ? ಠಾಣೆಗೆ ಬೆಂಕಿ ಬಿದ್ದಾಗ ಅದರಲ್ಲಿ ಚಳಿ ಕಾಯಿಸಿಕೊಂಡವರು ನೀವು. ಧರ್ಮದ ಪಾಠ ಮಾಡುವ ನೀವು, ಧರ್ಮಗುರುಗಳಿಗೆ ಗೌರವ ಕೊಡಬೇಕು ಎನ್ನುವುದನ್ನೂ ತಿಳಿದಿರಬೇಕಲ್ಲವೇ? ನೀವು ಬಾಲಂಗೋಚಿ ಆಗಿರುವ ಸರಕಾರದ ಬೇಹುಗಾರಿಕೆ ವಿಭಾಗ ನಿದ್ದೆ ಮಾಡುತ್ತಿತ್ತು, ಏಕೆ?' ಎಂದು ಕುಮಾರಸ್ವಾಮಿ ಕಿಡಿಕಾರಿದ್ದಾರೆ.

‘ಧರ್ಮ ರಕ್ಷಣೆ ಎಂದರೆ ಶಿವಮೊಗ್ಗದಲ್ಲಿ ಸಚಿವರೇ 144 ಸೆಕ್ಷನ್ ಉಲ್ಲಂಘಿಸುವುದಾ? ಅವರೇ ನಿಂತು ಹಿಂಸೆಗೆ ಪ್ರಚೋದನೆ ಕೊಡುವುದಾ? ನಾವ್ಯಾರೂ ಹೀಗೆ ಮಾಡಿಲ್ಲ. ಸಮಾಜಘಾತುಕ ಶಕ್ತಿಗಳನ್ನು ಮಟ್ಟ ಹಾಕಿ ಎಂದು ನೇರವಾಗಿ ಹೇಳಿದ್ದೇನೆ. ಹಿಜಾಬ್ ಗಲಾಟೆ ಹಿಂದಿರುವ ಕಾಣದ ಕೈಗಳಿಗೆ ಕೋಳ ಹಾಕಿ ಎಂದು ಸದನದಲ್ಲೇ ಆಗ್ರಹಿಸಿದ್ದೇನೆ. ಜಗತ್ತಿಗೆ ಶಾಂತಿ ಸಂದೇಶ ಕೊಟ್ಟ ಕುವೆಂಪು ಅವರು ಜನಿಸಿದ ಶಿವಮೊಗ್ಗ ಜಿಲ್ಲೆಯಲ್ಲಿ ಪ್ರತಿ ಹಬ್ಬ-ಹರಿದಿನದಲ್ಲಿ ನೀವು ಮಾಡುತ್ತಿರುವುದೇನು? ಸೂಕ್ಷ್ಮ ಭಾವನೆಗಳನ್ನು ಕೆರಳಿಸಿ ‘ಅಶಾಂತಿಯ ಅಶ್ವಮೇಧ' ನಡೆಸುತ್ತಿದ್ದೀರಿ. ಬೆಂಕಿ ಹಾಕುವುದು, ಕಲ್ಲು ಹೊಡೆಯುವುದು ನನ್ನ ಅಥವಾ ನನ್ನ ಪಕ್ಷದ ಸಂಸ್ಕೃತಿ ಅಲ್ಲ' ಎಂದು ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.

‘ನಿಮಗೆ ದೇಶ, ಸಂವಿಧಾನದ ಮೇಲೆ ಗೌರವ ಇಲ್ಲ. ಜನರೆಂದರೆ ನಿಮ್ಮ ಪಾಲಿಗೆ ‘ಭಾವನೆಗಳ ದಾಳಗಳು' ಮಾತ್ರ. ನಿಜವಾದ ಹಿಂದೂ ಎಂದೂ ಸಮಾಜ ಒಡೆಯಲಾರ. ‘ಹಿಂದೂ ಎಂದರೆ ಎಲ್ಲರೂ ಒಂದು' ಎನ್ನುವ ಆದರ್ಶ ಮತ್ತು ಪರಂಪರಾಗತ ನಂಬಿಕೆ. ಈ ನಂಬಿಕೆಯ ಮೇಲೆಯೇ ಭಾರತ ನಿಂತಿದೆ. ಭಾವನೆಗಳನ್ನು ಹೇರಿ ಭಾರತವನ್ನು ಒಡೆಯಲು ನಿಮ್ಮಿಂದ ಸಾಧ್ಯವಿಲ್ಲ'
-ಎಚ್.ಡಿ.ಕುಮಾರಸ್ವಾಮಿ, ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News