ನಮ್ಮ ದೇಶಕ್ಕೆ ನಿಜವಾದ ಶತ್ರು ಆರೆಸೆಸ್ಸ್: ಬಿ.ಕೆ. ಹರಿಪ್ರಸಾದ್

Update: 2022-04-01 13:04 GMT

ಬೆಂಗಳೂರು: ‘ನಮಗೆ ಬಿಜೆಪಿ ಶತ್ರುವಲ್ಲ, ನಮ್ಮ ದೇಶಕ್ಕೆ ನಿಜವಾದ ಶತ್ರು ಆರೆಸೆಸ್ಸ್. ಈ ದೇಶಕ್ಕೆ ಶತ್ರುವಾದವರು ಕಾಂಗ್ರೆಸ್ ಶತ್ರುವು ಹೌದು. ಆರೆಸೆಸ್ಸ್ ವಿರುದ್ಧ ನಮ್ಮ ಯುವ ಪೀಳಿಗೆ ಹೋರಾಡಬೇಕಾದರೆ, ಸೈದ್ಧಾಂತಿಕವಾಗಿ ಕಾಂಗ್ರೆಸ್ ಹಾಗೂ ಮಹಾತ್ಮ ಗಾಂಧಿ ಅವರ ಸರ್ವಧರ್ಮ ಸಮಬಾಳು ತತ್ವದ ಬಗ್ಗೆ ಅರಿವು ಹೊಂದಬೇಕು' ಎಂದು ಮೇಲ್ಮನೆ ವಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್ ತಿಳಿಸಿದ್ದಾರೆ.

ಶುಕ್ರವಾರ ಕೆಪಿಸಿಸಿ ಕಚೇರಿಯಲ್ಲಿ ಏರ್ಪಡಿಸಿದ್ದ ಪಕ್ಷದ ಮುಖಂಡರ ಸಭೆಯಲ್ಲಿ ಮಾತನಾಡಿದ ಅವರು, ‘ರಾಹುಲ್ ಗಾಂಧಿ ಬಹಳ ಸಂಕಷ್ಟದ ಸ್ಥಿತಿಯಲ್ಲಿ ರಾಜ್ಯಕ್ಕೆ ಆಗಮಿಸಿದ್ದಾರೆ. ರಾಜ್ಯದಲ್ಲಿರುವ ಬಿಜೆಪಿ ಸರಕಾರ ಕೋಮುವಾದದ ಅಜೆಂಡಾ ಹೊಂದಿದೆ. ರಾಹುಲ್ ಗಾಂಧಿ ರಾಜಸ್ಥಾನದಲ್ಲಿ ಕಾಂಗ್ರೆಸ್ ಸಿದ್ಧಾಂತವನ್ನು ಹೇಳುತ್ತಾ ‘ಹಿಂದೂ ಹಾಗೂ ಹಿಂದುತ್ವ'ದ ನಡುವಣ ವ್ಯತ್ಯಾಸವನ್ನು ಹೇಳಿದ್ದಾರೆ. ಅದನ್ನು ನಾವು ತಳಮಟ್ಟದಲ್ಲಿ ತೆಗೆದುಕೊಂಡು ಹೋಗಬೇಕು' ಎಂದು ಕರೆ ನೀಡಿದರು.

‘ಯುವಕರ ಸಂಖ್ಯೆ ಹೆಚ್ಚಿದ್ದು ಯುವಕರನ್ನು ಪ್ರೋತ್ಸಾಹಿಸಬೇಕು. ಅವರಿಗೆ ಅವಕಾಶ ನೀಡಬೇಕಾಗಿದೆ. ಅದಕ್ಕೂ ಮುನ್ನ ಅವರಿಗೆ ಕಾಂಗ್ರೆಸ್ ಇತಿಹಾಸ ಹಾಗೂ ಸಿದ್ಧಾಂತದ ಬಗ್ಗೆ ಅರಿವು ಮೂಡಿಸಬೇಕು. ಬಿಜೆಪಿ ಈಗ ಕೋಮುವಾದದ ಅಜೆಂಡಾವನ್ನು ಸೃಷ್ಟಿಸುತ್ತಿದೆ. ಅವರು ಈಗ ಮಾತ್ರವಲ್ಲ ನಮ್ಮ ಸ್ವಾತಂತ್ರ್ಯ ಹೋರಾಟದ ಸಮಯದಲ್ಲೂ ಅವರು ನಮ್ಮ ವಿರುದ್ಧವೇ ತಿರುಗಿಬಿದ್ದಿದ್ದರು. ಈಗ ಅದೇ ದುಷ್ಟಶಕ್ತಿಗಳು ದೇಶ ಆಳುತ್ತಿದ್ದು, ಕಾಂಗ್ರೆಸ್ ಸಾಧನೆ ನಾಶ ಮಾಡುತ್ತಿವೆ' ಎಂದು ಅವರು ದೂರಿದರು.

‘ಅವರು ಕೋಮುವಾದದ ಬಗ್ಗೆ ಮಾತನಾಡಿದರೆ ನಾವು ದೇಶಕ್ಕೆ ಕೊಟ್ಟಿರುವ ಪ್ರಜಾಪ್ರಭುತ್ವ, ಸಂವಿಧಾನದ ಮೂಲಕ ದುರ್ಬಲ ವರ್ಗದವರಿಗೆ ಕೊಟ್ಟಿರುವ ಶಕ್ತಿ ಬಗ್ಗೆ ಮಾತನಾಡಬೇಕು. ನಾವು ಹರ್ಡಿಕರ್ ಅವರ ಕ್ಷೇತ್ರದಲ್ಲಿ ತರಬೇತಿ ಕೇಂದ್ರ ಆರಂಭಿಸಿದ್ದು, ಅಲ್ಲಿ ದೇಶದ ಯುವಕರಿಗೆ ಸರಿಯಾದ ಮಾರ್ಗದರ್ಶನ ನೀಡಲಾಗುವುದು' ಎಂದು ಅವರು ತಿಳಿಸಿದರು.

ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ್ ಮಾತನಾಡಿ, ‘ಸ್ವಾತಂತ್ರ್ಯದ ನಂತರ ನಮ್ಮ ಎಲ್ಲ ನಾಯಕರು ದೇಶ ಕಟ್ಟುವ ಕೆಲಸ ಮಾಡಿದರು. ಜನರಿಗೆ ಶಾಲೆಗಳು, ಕುಡಿಯುವ ನೀರು, ಅನ್ನ, ಆಶ್ರಯ ನೀಡುವ ಕೆಲಸ ಮಾಡಿದೆ. 70 ವರ್ಷದಲ್ಲಿ ದೇಶವನ್ನು ಕಟ್ಟುವ ಕೆಲಸ ನಮ್ಮ ನಾಯಕರು ಮಾಡಿದ್ದಾರೆ. ನಮ್ಮ ರಾಜ್ಯ ಸರ್ವಜನಾಂಗದ ಶಾಂತಿಯ ತೋಟವಾಗಿತ್ತು. ಆದರೆ ಬಿಜೆಪಿ ಹಾಗೂ ಆರೆಸೆಸ್ಸ್ ಶಾಂತಿ ಕದಡಿ, ಸಂವಿಧಾನಕ್ಕೆ ಧಕ್ಕೆ ತರುವ ಕೆಲಸ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಕೋಮು ಭಾವನೆ ಕೆದಕುತ್ತಿದ್ದಾರೆ' ಎಂದು ವಾಗ್ದಾಳಿ ನಡೆಸಿದರು. 

‘ನನಗೆ ಪ್ರಚಾರ ಸಮಿತಿ ಅಧ್ಯಕ್ಷನಾಗಿ ಅವಕಾಶ ನೀಡಿದ್ದಾರೆ. ನಾನು ಎಲ್ಲ ಹಿರಿಯ ಹಾಗೂ ಕಿರಿಯ ನಾಯಕರ ಸಲಹೆ ಪಡೆದು ರಾಷ್ಟ್ರ ನಿರ್ಮಾಣದಲ್ಲಿ ಕಾಂಗ್ರೆಸ್ ಕೊಡುಗೆ, ಬಿಜೆಪಿ ದೇಶವನ್ನು ನಾಶ ಮಾಡುತ್ತಿರುವ ಬಗ್ಗೆ ಜನರಿಗೆ ಅರಿವು ಮೂಡಿಸಲು ಕಾರ್ಯಕ್ರಮ ರೂಪಿಸುತ್ತೇನೆ. ಎಲ್ಲರೂ ಒಟ್ಟಾಗಿ ಕೆಲಸ ಮಾಡಿ 2023ರಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುತ್ತೇವೆ' ಎಂದು ಅವರು ವಾಗ್ದಾನ ನೀಡಿದರು.

ಇದೇ ವೇಳೆ ಮಾತನಾಡಿದ ರಾಜ್ಯಸಭೆ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ, ‘ಯಾವ ಜನ ನಿಮ್ಮ ಹಿಂದೆ ನಿಂತು ಶಕ್ತಿ ತುಂಬಿದ್ದಾರೋ ಅವರ ಬಗ್ಗೆ ನಾವೆಲ್ಲರೂ ಮಾತನಾಡುವುದನ್ನು ಕಲಿಯಬೇಕು. ಅಲ್ಪಸಂಖ್ಯಾತರು, ತುಳಿತಕ್ಕೆ ಒಳಗಾದವರ ಜತೆ ನಿಲ್ಲಬೇಕು. ನಾವು ನಿಲ್ಲದಿದ್ದರೆ ಬೇರೆಯವರು ನಮ್ಮ ಜತೆ ಬರುವುದಿಲ್ಲ' ಎಂದು ಎಚ್ಚರಿಸಿದರು.

‘ರಾಜ್ಯದಲ್ಲಿ 60 ಲಕ್ಷ ಸದಸ್ಯರನ್ನು ಮಾಡಲಾಗಿದೆ. ಇದರಲ್ಲಿ ಒಬ್ಬ ಸದಸ್ಯ 3 ಮತ ತಂದರೂ ಪಕ್ಷ ಅಧಿಕಾರಕ್ಕೆ ಬರುತ್ತದೆ. ಹೀಗಾಗಿ ಬಾಯಿಂದ ಬಾಯಿಗೆ ಪ್ರಚಾರ ಸಾಗಬೇಕು. ನೀವು ಸಾಕಷ್ಟು ಪ್ರಯತ್ನ ಮಾಡುತ್ತಿದ್ದೀರಿ. ಆದರೂ ನನ್ನ ಮನವಿ ಎಂದರೆ ನಮ್ಮ ಜತೆ ಇರುವವರ ಪರ ನಾವು ಧ್ವನಿ ಎತ್ತಬೇಕು. ನಮ್ಮ ಜತೆ ಇರುವವರ ರಕ್ಷಣೆ ಮಾಡಬೇಕು' ಎಂದು ಅವರು ಸಲಹೆ ನೀಡಿದರು.

'ನಾನು ರಾಜಕೀಯಕ್ಕೆ ಬಂದು 55 ವರ್ಷವಾಗಿದೆ. ಪಂಡಿತ್ ನೆಹರೂ ಅವರ ತತ್ವ, ಇಂದಿರಾ ಅವರ ಕಾರ್ಯಕ್ರಮ, ಮಾಡಿದ ತ್ಯಾಗವನ್ನು ನಾವು ಪ್ರಸ್ತಾಪಿಸಿದ್ದೇವೆ. ದೀನದಲಿತರು, ರೈತರು, ಬಡವರನ್ನು ನಾವು ಒಟ್ಟಾಗಿ ತೆಗೆದುಕೊಂಡು ಹೋಗುವ ಪ್ರಯತ್ನ ಮಾಡಬೇಕು. ಈ ಗುರಿ ತಲುಪಿದರೆ ಮಾತ್ರ ನಾವು ಅಧಿಕಾರ ಹಿಡಿಯಲು ಸಾಧ್ಯ. ಇಲ್ಲದಿದ್ದರೆ ಕಷ್ಟವಿದೆ. ನಮ್ಮ ಪ್ರಚಾರ ಹಳ್ಳಿ ಹಳ್ಳಿಗೆ ಹೋಗಬೇಕು.'
-ಮಲ್ಲಿಕಾರ್ಜುನ ಖರ್ಗೆ, ರಾಜ್ಯಸಭೆಯ ವಿಪಕ್ಷ ನಾಯಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News