ಚಿಕ್ಕಮಗಳೂರು: ಆರೋಗ್ಯ ಇಲಾಖೆ ಗುತ್ತಿಗೆ ಸಿಬ್ಬಂದಿಯನ್ನು ಸೇವೆಯಲ್ಲಿ ಮುಂದುವರಿಸಲು ಆಗ್ರಹ
ಚಿಕ್ಕಮಗಳೂರು: ಕೊರೋನ ಸೋಂಕಿನ ಆರ್ಭಟದ ತುರ್ತು ಪರಿಸ್ಥಿತಿಯಲ್ಲಿ ಆರೋಗ್ಯ ಇಲಾಖೆಯ ವಿವಿಧ ವಿಭಾಗಗಳಲ್ಲಿ ಕಾರ್ಯನಿರ್ವಹಿಸಲು 6 ತಿಂಗಳ ಅವಧಿಗೆ ನೇಮಕ ಮಾಡಿಕೊಂಡಿದ್ದ ಸಿಬ್ಬಂದಿಯನ್ನು ಏಕಾಏಕಿ ಕೆಲಸದಿಂದ ತೆಗೆದು ಹಾಕಲು ಆರೋಗ್ಯ ಇಲಾಖೆ ಮುಂದಾಗಿದ್ದು, ಸಿಬ್ಬಂದಿಯನ್ನು ಕೆಲಸದಿಂದ ವಜಾ ಮಾಡದೇ ಸೇವೆಯಲ್ಲಿ ಮುಂದುವರಿಸಬೇಕೆಂದು ಒತ್ತಾಯಿಸಿ ನೂರಾರು ಸಿಬ್ಬಂದಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಶುಕ್ರವಾರ ಬೆಳಗ್ಗೆ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಜಮಾಯಿಸಿದ್ದ ನೂರಾರು ಆರೋಗ್ಯ ಇಲಾಖೆ ಸಿಬ್ಬಂದಿ, ಕೊರೋನ ಸೋಂಕಿನ ತುರ್ತು ಸಂದರ್ಭದಲ್ಲಿ ಕೊರೋನ ವಾರಿಯರ್ಸ್‍ಗಳಾಗಿ ಸೇವೆ ಸಲ್ಲಿಸಲು ಆರೋಗ್ಯ ಇಲಾಖೆ ಜಿಲ್ಲಾದ್ಯಂತ 150ಕ್ಕೂ ಹೆಚ್ಚು ಸಿಬ್ಬಂದಿಯನ್ನು 6 ತಿಂಗಳ ಅವಧಿಗೆಂದು ಕೆಲಸಕ್ಕೆ ನೇಮಿಸಿಕೊಂಡಿದೆ. ಸದ್ಯ ಸೋಂಕು ಕ್ಷ್ಯೀಣಗೊಂಡಿರುವುದರಿಂದ ಇಲಾಖೆ ತಮ್ಮನ್ನು ಕೆಲಸದಿಂದ ತೆಗೆದು ಹಾಕುಲು ಸಿದ್ಧತೆ ನಡೆಸಿದೆ ಎಂದು ಆರೋಪಿಸಿದರು.
ಈ ವೇಳೆ ಮಾತನಾಡಿದ ಆರೋಗ್ಯ ಇಲಾಖೆ ಸಿಬ್ಬಂದಿ, ಕಳೆದ 3 ವರ್ಷಗಳಿಂದ ಕೊರೋನಾ ಸೋಂಕು ಇಡೀ ದೇಶವನ್ನು ಕಾಡಿದ್ದು, ಈ ಸಂದರ್ಭದಲ್ಲಿ ಸಾವಿರಾರು ಮಂದಿ ಸೋಂಕಿಗೆ ತುತ್ತಾಗಿ ಸಾವನ್ನಪ್ಪಿದ್ದಾರೆ. ಸೋಂಕಿತರಿಗೆ ಚಿಕಿತ್ಸೆ ನೀಡಲು ಸಿಬ್ಬಂದಿಯ ಕೊರತೆ ಉಂಟಾದ ಸಂದರ್ಭದಲ್ಲಿ ಸರಕಾರ ಆರೋಗ್ಯ ಇಲಾಖೆಯಲ್ಲಿ ಸೇವೆ ಸಲ್ಲಿಸಲು ವೈದ್ಯರೂ ಸೇರಿದಂತೆನರ್ಸ್, ಟೆಕ್ನಿಷಿಯನ್, ಫಾರ್ಮಾಸಿಸ್ಟ್, ಡಾಟಾ ಎಂಟ್ರಿ ಆಪರೇಟರ್ಸ್, ಡಿ ಗ್ರೂಪ್ ಮತ್ತಿತರ ಸಿಬ್ಬಂದಿಯನ್ನು 6 ತಿಂಗಳ ಅವಧಿಗೆ ಕೆಲಸಕ್ಕೆ ನೇಮಿಸಿಕೊಂಡಿತ್ತು. ಆದರೆ ಸದ್ಯ ಸೋಂಕಿನ ಪ್ರಮಾಣ ಸಂಪೂರ್ಣವಾಗಿ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಎಲ್ಲ ಜಿಲ್ಲೆಗಳ ಆರೋಗ್ಯ ಇಲಾಖೆಯಲ್ಲಿ ಕೆಲಸ ಮಾಡುತ್ತಿರುವ ಈ ನೌಕರರನ್ನು ಕೆಲಸದಿಂದ ತೆಗೆದು ಹಾಕುಲು ಸರಕಾರ, ಆರೋಗ್ಯ ಇಲಾಖೆ ಮುಂದಾಗಿದೆ ಎಂದು ಆರೋಪಿಸಿದರು.
ಕೊರೋನ ಸೋಂಕಿನ ತರ್ತು ಸಂದರ್ಭದಲ್ಲಿ ಈ ನೌಕರರು ತಮ್ಮ ಪ್ರಾಣದ ಹಂಗು ತೊರೆದು ಕೆಲಸ ಮಾಡಿದ್ದಾರೆ. ಕೊರೋನ ಸೋಂಕಿಗೆ ತುತ್ತಾದವರ ಬಳಿ ಅವರ ಕುಟುಂಬಸ್ಥರೂ ಹೋಗಲು ಹಿಂಜರಿಯುತ್ತಿದ್ದ ಸಂದರ್ಭದಲ್ಲಿ ಈ ನೌಕರರು ಸೋಂಕಿತರ ಸೇವೆ ಮಾಡಿದ್ದಾರೆ. ಪರಿಣಾಮ ಕೆಲ ನೌಕರರಿಗೆ ಸೋಂಕು ತಗುಲಿ ಅವರ ಮೂಲಕ ಸಿಬ್ಬಂದಿಯ ಕುಟುಂಬದವರಿಗೂ ಸೋಂಕು ಹರಡಿದೆ. ಕೆಲ ಸಿಬ್ಬಂದಿ ತಮ್ಮ ಕುಟುಂಬಸ್ಥರನ್ನೂ ಕಳೆದುಕೊಂಡಿದ್ದಾರೆ. ಹೀಗೆ ಕೊರೋನ ವಾರಿಯರ್ಸ್‍ಗಳಾಗಿ ಸೇವೆ ಸಲ್ಲಿಸಿದ ಸಿಬ್ಬಂದಿಯನ್ನು ಏಕಾಏಕಿ ಕೆಲಸದಿಂದ ವಜಾ ಮಾಡಲು ಆರೋಗ್ಯ ಇಲಾಖೆ ಮುಂದಾಗಿರುವುದರಿಂದ ಸಿಬ್ಬಂದಿಯ ಭವಿಷ್ಯ ಅತಂತ್ರವಾಗಿದೆ. ಇದರಿಂದ ಸಿಬ್ಬಂದಿಯ ದುಡಿಮೆಯನ್ನೇ ನಂಬಿಕೊಂಡಿದ್ದ ಕುಟುಂಬಸ್ಥರೂ ಅತಂತ್ರರಾಗುವಂತಾಗಿದೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ಜಿಲ್ಲಾಸ್ಪತ್ರೆ ಸೇರಿದಂತೆ ಪ್ರತೀ ತಾಲೂಕು ಆಸ್ಪತ್ರೆಗಳಲ್ಲೂ ಸಿಬ್ಬಂದಿ ಸೇವೆ ಸಲ್ಲಿಸುತ್ತಿದ್ದು, ಆರೋಗ್ಯ ಇಲಾಖೆಯ ಈ ಕ್ರಮದಿಂದಾಗಿ ಸಿಬ್ಬಂದಿ ತೀವ್ರ ಸಮಸ್ಯೆಗೆ ತುತ್ತಾಗಲಿದ್ದಾರೆ. ಸರಕಾರದ ಕೆಲಸವೂ ಇಲ್ಲ, ಖಾಸಗಿ ಕೆಲಸವೂ ಇಲ್ಲದಂತಾಗಿ ನೌಕರರು ಆತ್ಮಹತ್ಯೆಯ ಹಾದಿ ತುಳಿಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅಳಲು ತೋಡಿಕೊಂಡರು.
ಸರಕಾರ ಕೊರೋನ ವಾರಿಯರ್ಸ್‍ಗಳಾಗಿ ಸೇವೆಗೆ ಸೇರಿದ ಈ ಸಿಬ್ಬಂದಿಯನ್ನು ಯಾವುದೇ ಕಾರಣಕ್ಕೆ ಕೆಲಸದಿಂತ ತೆಗೆದು ಅತಂತ್ರರನ್ನಾಗಿಸಬಾರದು. ಹಾಲಿ ಇರುವ ಉದ್ಯೋಗದಲ್ಲೇ ಮುಂದುವರಿಸಬೇಕು ಇಲ್ಲವೇ ಎಚ್‍ಆರ್‍ಎಂಎಸ್, ತಾಲೂಕು ಆಸ್ಪತ್ರೆ ಅಥವಾ ಚಿಕ್ಕಮಗಳೂರು ನಗರದಲ್ಲಿ ಆರಂಭವಾಗಲಿರುವ ಮೆಡಿಕಲ್ ಕಾಲೇಜಿನ ಸೇವೆಯಲ್ಲಿ ಮುಂದುವರಿಸಬೇಕು ಎಂದ ಅವರು, ಆರೋಗ್ಯ ಇಲಾಖೆಯಲ್ಲಿ 30 ಸಾವಿರ ಖಾಲಿ ಹುದ್ದೆಗಳಿದ್ದು, ಈ ಹುದ್ದೆಗಳಿಗೆ ತಮ್ಮನ್ನು ನೇಮಿಸಿಕೊಂಡು ಉದ್ಯೋಗ ನೀಡಬೇಕೆಂದು ಮನವಿ ಮಾಡಿದರು.
ಬಳಿಕ ಈ ಸಂಬಂಧದ ಮನವಿಯನ್ನು ಜಿಲ್ಲಾಧಿಕಾರಿ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಮೂಲಕ ಸರಕಾರಕ್ಕೆ ಸಲ್ಲಿಸಿದರು. ಮುಖಂಡರಾದ ಸಂಧ್ಯಾರಾಣಿ, ಉಮೇಶ್, ಜಾಹ್ನವಿ, ಮಮತಾ, ಸಿಂದು, ನಿತಿನ್, ಅಭಿಷೇಕ್, ಅನಿತಾ, ಮಾದೇಶ್, ಶರತ್ ಸೇರಿದಂತೆ ನೂರಾರು ಸಿಬ್ಬಂದಿ ಈ ವೇಳೆ ಉಪಸ್ಥಿತರಿದ್ದರು.