ಕುರ್ಚಿಗಾಗಿ ಮಾತು ಮುರಿದು ವಚನಭ್ರಷ್ಟ ಎನಿಸಿಕೊಂಡಿದ್ದು ನೆನಪಿದೆಯೇ: ಕುಮಾರಸ್ವಾಮಿಗೆ ಬಿಜೆಪಿ ಪ್ರಶ್ನೆ

Update: 2022-04-02 13:09 GMT

ಬೆಂಗಳೂರು: ಕುರ್ಚಿಗಾಗಿ ಮಾತು ಮುರಿದು ವಚನಭ್ರಷ್ಟ ಎನಿಸಿಕೊಂಡಿದ್ದು ನೆನಪಿದೆಯೇ?  ಎಂದು  ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಗೆ ಬಿಜೆಪಿ ಪ್ರಶ್ನೆ ಮಾಡಿದೆ. 

ಶನಿವಾರ ಸರಣಿ ಟ್ವೀಟ್ ಮಾಡಿರುವ ಬಿಜೆಪಿ, ''ಬಾಯಿಗೆ ಬಂದಂತೆ ಮಾತನಾಡುವುದು ಆ ಬಳಿಕ ವಿಷಾದ ವ್ಯಕ್ತಪಡಿಸುವುದು ಸಾಂದರ್ಭಿಕ ಸಿಎಂ  ಎಚ್.ಡಿ  ಕುಮಾರಸ್ವಾಮಿ ಅವರ ರಾಜಕೀಯ ವರಸೆ. ಯಾವ ವಿಚಾರದಲ್ಲಿ ತನ್ನ ಮತಬ್ಯಾಂಕ್‌ ಗಟ್ಟಿಯಾಗುತ್ತದೋ ಆ ವಿಚಾರವನ್ನು ಗಟ್ಟಿಯಾಗಿ ಹಿಡಿದುಕೊಳ್ಳುವುದು ಇವರ ಜಾಯಮಾನ. ಕುಮಾರಸ್ವಾಮಿ ಅವರೇ, ಗಂಡಸ್ತನದ ಬಗ್ಗೆ ಮಾತನಾಡುವುದರಲ್ಲಿ "ಪುರುಷಾರ್ಥ" ಅಡಗಿದೆಯೇ?'' ಎಂದು ಬಿಜೆಪಿ ಪ್ರಶ್ನಿಸಿದೆ. 

''ಕುಮಾರಸ್ವಾಮಿ ಅವರೇ, ಓತಿಕ್ಯಾತಕ್ಕೆ ಬೇಲಿಯ ಗೂಟ ಸಾಕ್ಷಿ ಎಂಬ ಗಾದೆ ಮಾತು ನೆನಪಿಸಿಕೊಳ್ಳಿ. ನಿಮ್ಮ ಜಾತ್ಯತೀತ ನಡೆ ಎಂಬುದು ಅವಕಾಶವಾದದ ಪರಿಷ್ಕೃತ ರೂಪ. ಅಧಿಕಾರ ಅನುಭವಿಸಲು ಏನೂ ಬೇಕಾದರೂ ಮಾಡಲು ಸಿದ್ದವಾಗಿರುವವರು ನೀವು. ನಿಮ್ಮಿಂದ ಯಾವ ವ್ಯಕ್ತಿಯೂ, ಯಾವ ಸಂಘಟನೆಯೂ ಪಾಠ ಕಲಿಯಬೇಕಾಗಿಲ್ಲ'' ಎಂದು ಬಿಜೆಪಿ ಹೇಳಿದೆ.

''ಸಾಂದರ್ಭಿಕ ಕೂಸೊಂದು ಹಿಂದುತ್ವದ ಬಗ್ಗೆ ಹಿಂದೂ ಸಂಘಟನೆಗಳಿಗೆ ಪಾಠ ಮಾಡುತ್ತಿದೆ. ಹಿಂದೂ ಸಂಘಟನೆಗಳು ಅವರಂತೆ ಕೇವಲ ತನ್ನ ಕುಟುಂಬದ ಉನ್ನತಿಗಾಗಿ ಕೆಲಸ ಮಾಡುತ್ತಿಲ್ಲ. ಅವರು ಅಧಿಕಾರಕ್ಕಾಗಿ ಕಣ್ಣೀರು ಹಾಕುತ್ತಾರೆ ಆದರೆ ಹಿಂದೂ ಸಂಘಟನೆಗಳು ಹಿಂದೂ ಸಮಾಜದ ಕಣ್ಣೀರು ಒರೆಸುವ ಕೆಲಸ ಮಾಡುತ್ತಿವೆ'' .

''ಉಪಸಭಾಪತಿಯ ಕುರ್ಚಿಗೆ ಗಂಟುಬಿದ್ದು ಅದು ಸಿಗದಿದ್ದಾಗ ಕಾಂಗ್ರೆಸ್‌ ತ್ಯಜಿಸಿ ಜೆಡಿಎಸ್‌ ಸೇರಿರುವ ವ್ಯಕ್ತಿಯ ಸಮುದಾಯವನ್ನು ಮೆಚ್ಚಿಸಲು ಎಚ್‌ಡಿಕೆ ಸರ್ಕಸ್‌ ಮಾಡುತ್ತಿದ್ದಾರೆ. ಇಂತಹ ಸದಾರಮೆ ನಾಟಕ ಕುಮಾರಸ್ವಾಮಿಗೆ ಹೊಸತಲ್ಲ. ಕುಮಾರ ಸ್ವಾಮಿಯ ರಾಜಕೀಯ ಜೀವನವೇ ಒಂದು ಡ್ರಾಮಾ. ಇವರ ಕುಟುಂಬವೇ ದೊಡ್ಡ ಡ್ರಾಮಾ ಕಂಪೆನಿ'' ಎಂದು ಬಿಜೆಪಿ ಕುಮಾರಸ್ವಾಮಿ ಹಾಗೂ ಜೆಡಿಎಸ್ ವಿರುದ್ಧ ಕಿಡಿಗಾರಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News