ಅಧಿಕಾರಕ್ಕಾಗಿ ಯಡಿಯೂರಪ್ಪನವರೇ ಬಿಜೆಪಿ ಬಿಡಲು ಸಿದ್ಧರಿದ್ದರು: ಬಿಜೆಪಿಗೆ ಜೆಡಿಎಸ್ ತಿರುಗೇಟು

Update: 2022-04-03 05:50 GMT

ಬೆಂಗಳೂರು: 'ಕುರ್ಚಿಗಾಗಿ ಮಾತು ಮುರಿದು ವಚನಭ್ರಷ್ಟ ಎನಿಸಿಕೊಂಡಿದ್ದು ನೆನಪಿದೆಯೇ' ಎಂದು ಕುಮಾರಸ್ವಾಮಿಗೆ ಪ್ರಶ್ನೆ ಮಾಡಿದ್ದ ಬಿಜೆಪಿಗೆ ಇದೀಗ ಜೆಡಿಎಸ್ ತಿರುಗೇಟು ನೀಡಿದೆ. 

ಈ ಕುರಿತು ಸರಣಿ ಟ್ವೀಟ್ ಮಾಡಿರುವ ಜೆಡಿಎಸ್,  'ಕುರ್ಚಿಗಾಗಿ ಹೆಚ್.ಡಿ.ಕುಮಾರಸ್ವಾಮಿ ಅವರು ನಿಮ್ಮ ಯಾವ ಮುಖಂಡರ ಮನೆ ಬಾಗಿಲಿಗೂ ಬರಲಿಲ್ಲ. ಅಧಿಕಾರಕ್ಕಾಗಿ ಅವರ ಮನೆ ಬಾಗಿಲಿಗೇ ಬಂದರು ನಿಮ್ಮವರು, ನೆನಪಿರಲಿ' ಎಂದು  ಕಿಡಿಗಾರಿದೆ. 

'ಅಧಿಕಾರಕ್ಕಾಗಿ ಯಡಿಯೂರಪ್ಪನವರೇ ಬಿಜೆಪಿ ಬಿಡಲು ಸಿದ್ಧರಿದ್ದರು. ಮಂತ್ರಿಯಾದರೆ ಸಾಕಪ್ಪಾ ಎಂದು ಕುಮಾರಣ್ಣನ ಮನೆ ಕದತಟ್ಟಿದ್ದರು. ಆದರೆ, ತಾಯಿಯಂಥ ಪಕ್ಷ ಬಿಡಬೇಡಿ ಎಂದು ಸಲಹೆ ನೀಡಿದ್ದರು ಹೆಚ್ಡಿಕೆ. ಅವರಿಗೆ ಪಕ್ಷ ಬಿಡಿ ಎಂದಿದ್ದರೆ ಆವತ್ತೇ ಕರ್ನಾಟಕದಲ್ಲಿ ಬಿಜೆಪಿ ಸಮಾಧಿ ಆಗುತ್ತಿತ್ತು. ಬಿಜೆಪಿಯನ್ನು ಉಳಿಸಿದವರೇ ಕುಮಾರಸ್ವಾಮಿ' ಎಂದು ಹೇಳಿದೆ.

'9 ದಿನ ಸಿಎಂ ಆಗಿದ್ದ ಯಡಿಯೂರಪ್ಪಗೆ ಬೆಂಬಲ ಕೊಟ್ಟಿದ್ದು ಇದೇ ಕುಮಾರಸ್ವಾಮಿ. ಆಗ ನಿಮ್ಮ ಹೈಕಮಾಂಡ್, ʼಅಗ್ರಿಮೆಂಟ್ ಹೈ ಡ್ರಾಮಾʼ ಆಡಿ ಯಡಿಯೂರಪ್ಪ ಬೆನ್ನಿಗೆ ತಿವಿದದ್ದು ಗೊತ್ತಿಲ್ಲವಾ? ಕೊನೆಗೆ ಅಗ್ರಿಮೆಂಟನ್ನೇ ಹೈಜಾಕ್ ಮಾಡಿ ವಚನಭ್ರಷ್ಟರಾಗಿದ್ದು ನೀವು. ಅದನ್ನು ಕುಮಾರಸ್ವಾಮಿ ತಲೆಗೆ ಕಟ್ಟಿದಿರಿ. ಸತ್ಯ ಮರೆತರೆ ಹೇಗೆ?' ಎಂದು ಪ್ರಶ್ನಿಸಿದೆ. 

'ಕೃತಜ್ಞತೆ ಎನ್ನುವುದು ನಿಮಗೆ ಆಗದ ಪದ. ಯಾರು ಶಕ್ತಿ ತುಂಬುತ್ತಾರೋ ಅವರ ಕತ್ತು ಕುಯ್ಯುವುದು ನಿಮ್ಮ ಜಾಯಮಾನ. 2006ರಲ್ಲಿ ಸರಕಾರ ರಚನೆಯಾದ ಎರಡೇ ತಿಂಗಳಿಗೆ ಕುಮಾರಸ್ವಾಮಿ ವಿರುದ್ಧ ಸಲ್ಲದ ಸುಳ್ಳು ಆರೋಪ ಮಾಡಿ ಬೆನ್ನಿಗಿರಿದದ್ದು ಯಾರು? ಬಿಜೆಪಿಯ ʼಬ್ರೂಟಸ್ ಪಾಲಿಟಿಕ್ಸ್ʼ ಅಲ್ಲವೇ ಅದು?' ಎಂದು ಜೆಡಿಎಸ್ ಬಿಜೆಪಿಯನ್ನು ಪ್ರಶ್ನಿಸಿದೆ. 

ಇದನ್ನೂ ಓದಿಕುರ್ಚಿಗಾಗಿ ಮಾತು ಮುರಿದು ವಚನಭ್ರಷ್ಟ ಎನಿಸಿಕೊಂಡಿದ್ದು ನೆನಪಿದೆಯೇ: ಕುಮಾರಸ್ವಾಮಿಗೆ ಬಿಜೆಪಿ ಪ್ರಶ್ನೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News