×
Ad

ಗೊಬ್ಬರದ ಬೆಲೆ ಏರಿಸಿ ರೈತರ ರಕ್ತ ಕುಡಿಯುತ್ತಿರುವ ಕೇಂದ್ರ ಸರಕಾರ: ಸಿದ್ದರಾಮಯ್ಯ

Update: 2022-04-03 17:23 IST

ಬೆಂಗಳೂರು, ಎ.3: ಯುಗಾದಿ ಸಿಹಿ, ಕಹಿಗಳ ಹಬ್ಬ, ಆದರೆ ಕೇಂದ್ರ ಸರಕಾರ ಜನರಿಗೆ ಬರೀ ಕಹಿಯನ್ನು ನೀಡಿದೆ. ಗೊಬ್ಬರದ ಬೆಲೆ ಏರಿಸಿ ರೈತ ವರ್ಗವನ್ನು ಸಂಕಷ್ಟಕ್ಕೆ ದೂಡಿದೆ ಎಂದು ವಿಧಾನ ಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.

ರವಿವಾರ ನಗರದ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಒಂದು ಚೀಲ ಗೊಬ್ಬರದ ಮೇಲೆ 150ರೂ. ಏರಿಕೆಯಾಗಿದೆ. ಇದರಿಂದ ಒಂದು ಚೀಲ ಗೊಬ್ಬರದ ಬೆಲೆ ಈಗ 1,350ರೂ. ತಲುಪಿದೆ. ದೇಶದ ರೈತರು ವರ್ಷದಲ್ಲಿ 1 ಕೋಟಿ 20 ಲಕ್ಷ ಟನ್ ಗೊಬ್ಬರ ಬಳಕೆ ಮಾಡುತ್ತಾರೆ. ಕೇಂದ್ರ ಸರಕಾರ ರೂ. 3,600 ಕೋಟಿಯನ್ನು ರೈತರಿಂದ ಹೆಚ್ಚುವರಿ ಹಣ ಸುಲಿಗೆ ಮಾಡುತ್ತಿದೆ ಎಂದು ಟೀಕಿಸಿದರು.

ಅದೂ ಅಲ್ಲದೆ, ಪ್ರಧಾನಿ ನರೇಂದ್ರ ಮೋದಿ ಅವರು 2022ಕ್ಕೆ ರೈತರ ಆದಾಯ ದುಪ್ಪಟ್ಟು ಮಾಡುತ್ತೇವೆ ಎಂದಿದ್ದರು, ಅದನ್ನು ಮಾಡುವ ಬದಲು ರೈತರ ರಕ್ತ ಕುಡಿಯಲು ಆರಂಭ ಮಾಡಿದ್ದಾರೆ. ಕೃಷಿಗೆ ಬಳಕೆಯಾಗುವ ಕೀಟನಾಶಕಗಳ ಮೇಲೆ ಶೇ.18ರಷ್ಟು, ಕೃಷಿ ಯಂತ್ರೋಪಕರಣಗಳ ಮೇಲೆ ಶೇ.12ರಷ್ಟು, ರಸಗೊಬ್ಬರದ ಮೇಲೆ ಶೇ.5ರಷ್ಟು ಜಿಎಸ್ಟಿ ವಿಧಿಸಲಾಗುತ್ತಿದೆ. ಈ ರೀತಿ ರೈತರಿಂದ ಸುಲಿಗೆ ಮಾಡಿ ಅವರ ಬದುಕನ್ನು ಕಸಿಯಲಾಗುತ್ತಿದೆ ಎಂದು ವಾಗ್ದಾಳಿ ನಡೆಸಿದರು.

ಕಳೆದ ಬಾರಿ ರಾಗಿ ಬೆಳೆಗೆ ಉತ್ತಮ ಬೆಲೆ ಬಂದಿದ್ದರಿಂದ ಈ ಬಾರಿ ರಾಜ್ಯದ ರೈತರು 15 ಲಕ್ಷ ಮೆಟ್ರಿಕ್ ಟನ್ ರಾಗಿ ಬೆಳೆದಿದ್ದಾರೆ. ಇದರಲ್ಲಿ ಕನಿಷ್ಠ ಅರ್ಧದಷ್ಟನ್ನಾದರೂ ಖರೀದಿ ಮಾಡಿ ಎಂದು ಸರಕಾರವನ್ನು ಒತ್ತಾಯ ಮಾಡುತ್ತಿದ್ದಾರೆ. ಆದರೆ ಸರಕಾರ ಕೇವಲ 2.1 ಮೆಟ್ರಿಕ್ ಲಕ್ಷ ಟನ್ ರಾಗಿಯನ್ನು ಕನಿಷ್ಠ ಬೆಂಬಲ ಬೆಲೆಯಡಿ ಕೊಳ್ಳಲು ನಿಗದಿ ಮಾಡಿ, ಈವರೆಗೆ 1.9 ಲಕ್ಷ ಮೆಟ್ರಿಕ್ ಟನ್ ಖರೀದಿ ಮಾಡಿದೆ.

ಕನಿಷ್ಠ ಬೆಂಬಲ ಬೆಲೆಯಡಿ ಖರೀದಿಸುವ ರಾಗಿಗೂ, ಮಾರುಕಟ್ಟೆ ಬೆಲೆಗೂ ಸುಮಾರು 1,500 ರೂಪಾಯಿ ವ್ಯತ್ಯಾಸವಿದೆ. ರಾಗಿಯ ಎಂಎಸ್‍ಪಿ ಬೆಲೆ 3,377 ರೂ. ಮಾರುಕಟ್ಟೆ ಬೆಲೆ 1,700-1,800 ರೂಪಾಯಿ ಇದೆ. ರೈತರ ಬಗ್ಗೆ ದೊಡ್ಡದೊಡ್ಡ ಭಾಷಣ ಮಾಡುವ ಮೋದಿಯವರು ರೈತರಿಗೆ ಅನ್ಯಾಯ ಮಾಡುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

2014ರ ಮೇನಲ್ಲಿ ಮನಮೋಹನ್ ಸಿಂಗ್ ಅವರು ಪ್ರಧಾನಿ ಹುದ್ದೆಯಿಂದ ಕೆಳಗಿಳಿಯುವಾಗ ಕಚ್ಚಾ ತೈಲ ಬೆಲೆ ಬ್ಯಾರಲ್‍ವೊಂದಕ್ಕೆ 108 ಡಾಲರ್ ಇತ್ತು. ಡೀಸೆಲ್ ಮೇಲೆ ಹೆಚ್ಚುವರಿ ಅಬಕಾರಿ ಸುಂಕ 3 ರೂಪಾಯಿ 46 ಪೈಸೆ, ಪೆಟ್ರೋಲ್ ಮೇಲೆ 9 ರೂಪಾಯಿ 20 ಪೈಸೆ ಇತ್ತು.

ನರೇಂದ್ರ ಮೋದಿ ಅವರು ಪ್ರಧಾನಿಯಾದ ಮೇಲೆ ಪೆಟ್ರೋಲ್ ಮೇಲೆ ಲೀಟರ್ ಒಂದಕ್ಕೆ 18 ರೂಪಾಯಿ 70 ಪೈಸೆ, ಡೀಸೆಲ್ ಮೇಲೆ 18 ರೂಪಾಯಿ 34 ಪೈಸೆ ಹೆಚ್ಚುವರಿ ಅಬಕಾರಿ ಸುಂಕ ಏರಿಕೆ ಮಾಡಿದ್ದಾರೆ. ಡೀಸೆಲ್ ಮೇಲೆ ಹೆಚ್ಚುವರಿ ಅಬಕಾರಿ ಸುಂಕ ಶೇ.531ರಷ್ಟು, ಪೆಟ್ರೋಲ್ ಮೇಲೆ ಶೇ.203ರಷ್ಟು ಏರಿಕೆ ಮಾಡಲಾಗಿದೆ. ಆದರೆ ಕಾರ್ಪೊರೇಟ್ ತೆರಿಗೆಯನ್ನು ಶೇ.35ರಿಂದ ಶೇ.23ರಷ್ಟು ಇಳಿಕೆ ಆಗಿದೆ. ಸಾಮಾನ್ಯ ಜನರ ಮೇಲೆ ತೆರಿಗೆ ಬರೆ ಹಾಕಲಾಗಿದೆ. ಇದು ನರೇಂದ್ರ ಮೋದಿ ಅವರ ಸಾಧನೆನಾ? ಎಂದು ಸಿದ್ದರಾಮಯ್ಯ ಲೇವಡಿ ಮಾಡಿದರು.

ಅದೇರೀತಿ, ಜನೌಷಧಗಳ ಬೆಲೆಯನ್ನು ಶೇ.10ರಷ್ಟು ಏರಿಕೆ ಮಾಡಲಾಗಿದೆ. ಅಡುಗೆ ಎಣ್ಣೆ ಬೆಲೆ 220 ರೂಪಾಯಿ ಆಗಿದೆ, ಕಬ್ಬಿಣ ಟನ್‍ಗೆ 90,000 ರೂಪಾಯಿ ಆಗಿದೆ. ಈ ರೀತಿ ಅಗತ್ಯ ವಸ್ತುಗಳ ಬೆಲೆ ಏರಿಕೆ ಆಗುವುದರಿಂದ ಹಣದುಬ್ಬರ ಏರಿಕೆಯಾಗಿ ಜನಸಾಮಾನ್ಯರ ಬದುಕು ದುಸ್ತರವಾಗುತ್ತದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News