ಸರಕಾರದ ಅನುಮತಿ ಇಲ್ಲದೆ ಟೋಲ್ ಹೆಚ್ಚಳ: ಎಚ್.ಡಿ.ದೇವೇಗೌಡ ಆರೋಪ

Update: 2022-04-03 13:28 GMT

ಬೆಂಗಳೂರು, ಎ.3: ನೈಸ್ ಸಂಸ್ಥೆ ಟೋಲ್ ಹಣವನ್ನು ಸರಕಾರದ ಅನುಮತಿಯನ್ನು ಪಡೆಯದೇ ಹೆಚ್ಚಳ ಮಾಡಿದ್ದು, ಸರಕಾರದ ಎಲ್ಲ್ಲ ನಿಯಮಗಳನ್ನೂ ಗಾಳಿಗೆ ತೂರಿದೆ ಎಂದು ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರು ಆರೋಪಿಸಿದ್ದಾರೆ.

ರವಿವಾರ ನಗರದ ಜೆಡಿಎಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದು ನೈಸ್ ಸಂಸ್ಥೆಗೆ ಕೊಮ್ಮನಘಟ್ಟದ ಬಳಿ ನೀಡಿರುವ 41 ಎಕರೆ ಜಾಗದ ಸೇಲ್ ಡೀಡ್ ರದ್ದುಗೊಳಿಸುವಂತೆ ಕೋರಿದ್ದೇನೆ ಎಂದರು.

ವಿಧಾನ ಪರಿಷತ್, ವಿಧಾನ ಸಭೆಯಲ್ಲಿ ಈ ಕುರಿತಂತೆ ಚರ್ಚೆಯಾದರೂ ಯಾವುದೇ ಸಚಿವರು ಸೂಕ್ತ ಉತ್ತರವನ್ನು ಕೊಟ್ಟಿಲ್ಲ. ನಾನು ಹಲವು ಪತ್ರಗಳನ್ನು ಸಿಎಂ ಮತ್ತು ಸರಕಾರದ ಮುಖ್ಯ ಕಾರ್ಯದರ್ಶಿ, ಕೈಗಾರಿಕೆ ಇಲಾಖೆ ಕಾರ್ಯದರ್ಶಿಗೂ ಕೂಡ ಪತ್ರ ಬರೆದಿದ್ದೇನೆ ಎಂದು ಹೇಳಿದರು.

ಸರಕಾರ ನೈಸ್ ವಿಚಾರವಾಗಿ ಸಮಿತಿಯನ್ನು ರಚನೆ ಮಾಡಿತ್ತು. ಸಮಿತಿಯನ್ನು ಪದೇ ಪದೇ ಬದಲಾಯಿಸುತ್ತಾ ಹೋದರು. ಸಚಿವ ಮಾಧುಸ್ವಾಮಿ ಅವರು ಈ ಕಂಪೆನಿ ವ್ಯವಹಾರಗಳು ಸರಿಯಿಲ್ಲವೆಂದು ಹೇಳಿದ್ದಾರೆ. ಈಗ ಮಾಧುಸ್ವಾಮಿ ಅವರನ್ನು ಸಮಿತಿಯಿಂದ ಕೈ ಬಿಟ್ಟಿದ್ದಾರೆ. ಅಲ್ಲದೆ, ನಾನು ಒಳ್ಳೆಯ ಉದ್ದೇಶಕ್ಕಾಗಿ ಬಿಎಂಐಸಿಎಲ್ ಯೋಜನೆಯನ್ನು ಜಾರಿಗೆ ತಂದಿದ್ದೆ. ಆದರೆ ನಂತರ ಇದರಲ್ಲಿ ಅನೇಕ ನಿಯಮಗಳನ್ನೂ ಬದಲಾವಣೆ ಮಾಡಿದ್ದಾರೆ. ನೈಸ್ ಬಗ್ಗೆ ಸದನ ಸಮಿತಿ ಮಾಡಿದರು. ರಸ್ತೆ ಮಾಡಿದ ಮೇಲೆ ಟೌನ್‍ಶಿಪ್ ಮಾಡಬೇಕು ಅಂತ ಇತ್ತು. ಆದರೆ ರಸ್ತೆ ಮಾಡದೇ ಟೋಲ್ ಸಂಗ್ರಹ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಸದನ ಸಮಿತಿ ಟೋಲ್ ಸಂಗ್ರಹ ರದ್ದು ಮಾಡಿ ಎಂದು ವರದಿ ನೀಡಿದ್ದರೂ 2016ರಲ್ಲಿ ನೈಸ್ ಸಂಸ್ಥೆ ಹೈಕೋರ್ಟ್‍ನಲ್ಲಿ ತಡೆಯಾಜ್ಞೆ ಪಡೆಯಿತು. ಸದನ ಸಮಿತಿಯ ವರದಿ ಮೀರಿ ಟೋಲ್ ಸಂಗ್ರಹವಾಗಿದೆ. 2016 ರಿಂದ 2022 ರವರೆಗೆ ಟೋಲ್ ಸಂಗ್ರಹ ಮಾಡಿದ್ದಾರೆ. ನಿತ್ಯ 2-3 ಕೋಟಿ ರೂ. ಸಂಗ್ರಹ ಆಗುತ್ತದೆ. ಯಾರಾದರೂ ಅಧಿಕಾರಿಗಳು ಸ್ಥಳಕ್ಕೆ ಹೋಗಿ ಪರಿಶೀಲನೆ ಮಾಡಿ ಬಂದಿದ್ದಾರಾ ಎಂದು ಪ್ರಶ್ನಿಸಿದರು.

ಯಾವುದೇ ರಸ್ತೆ ಮಾಡದೇ ಟೋಲ್ ಸಂಗ್ರಹ ಮಾಡುತ್ತಿದ್ದಾರೆ, ಜೊತೆಗೆ ಕಾಂಕ್ರೀಟ್ ರಸ್ತೆ ಮಾಡಿರುವುದಾಗಿ ಹೇಳಿದರು. ಅದು ಕೂಡ ಕಳಪೆ ರಸ್ತೆಯಾಗಿದೆ. ಈ ಬಗ್ಗೆ ಅನೇಕ ಪತ್ರ ಬರೆದರೂ ಸರಕಾರ ಏನೂ ಕ್ರಮ ತೆಗೆದುಕೊಂಡಿಲ್ಲ. ಹೈಕೋರ್ಟ್‍ಗೆ ಸರಕಾರ ಅರ್ಜಿ ಹಾಕಬೇಕಿತ್ತು. ಆದರೆ ಯಾವ ಸರಕಾರವೂ ಈ ಕೆಲಸವನ್ನು ಮಾಡಲಿಲ್ಲ ಎಂದರು.

ಎಚ್.ಡಿ.ಕುಮಾರಸ್ವಾಮಿ ಅವರು ಮೈತ್ರಿ ಸರಕಾರದ ಸಿಎಂ ಆಗಿದ್ದಾಗಲೂ ಕೂಡ ಸುಪ್ರೀಂಕೋರ್ಟ್ ಆದೇಶ ಪಾಲನೆ ಮಾಡುವಂತೆ ಹೇಳಿದ್ದೆ. ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ, ಯಡಿಯೂರಪ್ಪ ಅವರಿಗೂ ಪತ್ರ ಬರೆದಿದ್ದೆ. ಈಗ ಬೊಮ್ಮಾಯಿ ಅವರ ಸರಕಾರಕ್ಕೆ ಬಹುಮತ ಇದೆ. ಈಗಲಾದರೂ ಕ್ರಮ ತೆಗೆದುಕೊಳ್ಳಲಿ ಎಂದು ಆಗ್ರಹಿಸಿದರು.

ಭೂಮಿ ಕಳೆದುಕೊಂಡವರು ನನ್ನ ಬಳಿ ಬಂದು ನೋವು ತೋಡಿಕೊಂಡಿದ್ದಾರೆ. ಇದು ಪ್ರಾರಂಭ. ಮುಂದೆ ಇನ್ನು ಹೋರಾಟ ಇದೆ. ನಾನು ಕಣ್ಣು ಮುಚ್ಚಿಕೊಂಡು ಈ ಪ್ರಾಜೆಕ್ಟ್ ಮಾಡಿಲ್ಲ. ನಿಯಮಬದ್ಧವಾಗಿ ಮಾಡಿದ್ದೆ ಎಂದು ಸಮರ್ಥಿಸಿಕೊಂಡರು. ನನ್ನ ಮೇಲೆ ಎರಡು ಕೋಟಿ ಮಾನನಷ್ಟ ಮೊಕದ್ದಮೆ ಹಾಕಿದರು. ಅದಕ್ಕೆ ಕೋರ್ಟ್ ತಡೆಯಾಜ್ಞೆ ಕೊಟ್ಟಿದೆ. ಎಲ್ಲ ಸಿಎಂಗಳಿಗೆ ಪತ್ರ ಬರೆದಿದ್ದೇನೆ. ಆದರೆ ಏನು ಪ್ರಯೋಜನ ಆಗಿಲ್ಲ. ಲೋಕೋಪಯೋಗಿ ಇಲಾಖೆ ಸಚಿವರು ಮಾತ್ರ ನನ್ನ ಪತ್ರಕ್ಕೆ ಉತ್ತರ ಬರೆದಿದ್ದಾರೆ.

ಈಗಿನ ಮುಖ್ಯಮಂತ್ರಿ ಸಂಬಂಧಪಟ್ಟ ಮಂತ್ರಿಗಳಿಗೆ ಕೆಲಸ ಮಾಡಲು ಹೇಳಲಿ ಎಂದು ನೈಸ್ ವಿರುದ್ಧ ಕ್ರಮಕ್ಕೆ ಸರಕಾರವನ್ನು ಒತ್ತಾಯಿಸುವುದಾಗಿ ಹೇಳಿದರು. ಸುದ್ದಿಗೋಷ್ಠಿಯಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯ ಟಿ.ಎ.ಶರವಣ ಉಪಸ್ಥಿತರಿದ್ದರು.

ಸದನ ಸಮಿತಿ ವರದಿ ಅನುಷ್ಠಾನ ಮಾಡಲಿ

‘ನೈಸ್ ಕಂಪೆನಿ ವಿರುದ್ದ ಸದನ ಸಮಿತಿ ಕೊಟ್ಟಿರೋ ವರದಿ ಅನುಷ್ಠಾನಕ್ಕೆ ಕ್ರಮ ತೆಗೆದುಕೊಳ್ಳಬೇಕು. ಅಲ್ಲದೆ, ಸದನ ಸಮಿತಿ ಟೋಲ್ ಸಂಗ್ರಹ ರದ್ದು ಮಾಡಿ ಎಂದು ವರದಿ ನೀಡಿದ್ದರೂ 2016ರಲ್ಲಿ ನೈಸ್ ಸಂಸ್ಥೆ ಹೈಕೋರ್ಟ್‍ನಲ್ಲಿ ತಡೆಯಾಜ್ಞೆ ಪಡೆಯಿತು. ಸದನ ಸಮಿತಿಯ ವರದಿ ಮೀರಿ ಟೋಲ್ ಸಂಗ್ರಹವಾಗಿದೆ. 2016 ರಿಂದ 2022 ರವರೆಗೆ ಟೋಲ್ ಸಂಗ್ರಹ ಮಾಡಿದ್ದಾರೆ. ನಿತ್ಯ 2-3 ಕೋಟಿ ರೂ. ಸಂಗ್ರಹ ಆಗುತ್ತದೆ. ಯಾರಾದರೂ ಅಧಿಕಾರಿಗಳು ಸ್ಥಳಕ್ಕೆ ಹೋಗಿ ಪರಿಶೀಲನೆ ಮಾಡಿಲ್ಲ ಎಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಹೇಳಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News