ಕಾಳಿ ನದಿ ಜಲಾನಯನ ಪ್ರದೇಶದಲ್ಲಿ ಕಾಮಗಾರಿಗೆ ತಡೆ ಕೋರಿ ಅರ್ಜಿ: ಮನವಿ ತಿರಸ್ಕರಿಸಿದ ಹೈಕೋರ್ಟ್
ಬೆಂಗಳೂರು, ಎ.3: ಉತ್ತರ ಕನ್ನಡ ಜಿಲ್ಲೆಯ ಕಾಳಿ ನದಿ ಜಲಾನಯನ ಪ್ರದೇಶದಲ್ಲಿ ಕೈಗೊಂಡಿರುವ ಜಾಕ್‍ವೆಲ್(ತೂಬು) ನಿರ್ಮಾಣ ಕಾಮಗಾರಿಗೆ ತಡೆ ನೀಡಲು ಹೈಕೋರ್ಟ್ ನಿರಾಕರಿಸಿದೆ.
ಈ ಸಂಬಂಧ ಕಾಳಿ ಬ್ರಿಗೇಡ್ ಸಂಘಟನೆ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ವಿಭಾಗೀಯ ಪೀಠ, ಕಾಮಗಾರಿಗೆ ತಡೆ ನೀಡಲು ನಿರಾಕರಿಸಿದೆ. ನದಿಗೆ ಹೊಂದಿಕೊಂಡಿರುವ ಸಮೀಪದ ಹಳ್ಳಿಗಳಿಗೆ ಕುಡಿಯುವ ನೀರು ಸರಬರಾಜು ಮಾಡುವ ಉದ್ದೇಶದಿಂದ ಜಾಕ್‍ವೆಲ್ ನಿರ್ಮಾಣ ಯೋಜನೆ ಕೈಗೊಳ್ಳಲಾಗಿದೆ. ಹೀಗಾಗಿ, ಕಾಮಗಾರಿಯನ್ನು ತಡೆಹಿಡಿಯಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.
ಇದರ ಜೊತೆಗೆ, ಅಗತ್ಯವಿದ್ದರೆ ಅರ್ಜಿದಾರರು ತಮ್ಮ ಸಮಸ್ಯೆ ಬಗ್ಗೆ ರಾಜ್ಯ ಅರಣ್ಯ ಇಲಾಖೆ ಅಥವಾ ಸಂಬಂಧಪಟ್ಟ ಪ್ರಾಧಿಕಾರಕ್ಕೆ ಮನವಿಪತ್ರ ಸಲ್ಲಿಸಬಹುದು ಎಂದು ಸೂಚಿಸಿದೆ. ಹಾಗೆಯೇ, ಅರ್ಜಿದಾರರು ಮನವಿ ಸಲ್ಲಿಸಿದರೆ ಅದನ್ನು ಕಾನೂನು ರೀತಿ ಪರಿಗಣಿಸಿ ಸೂಕ್ತ ನಿರ್ಧಾರ ಕೈಗೊಳ್ಳಬೇಕು ಹಾಗೂ ಯೋಜನೆಯನ್ನು ನಿಯಮಾನುಸಾರವೇ ಜಾರಿಗೊಳಿಸಬೇಕು ಎಂದು ಸರಕಾರಕ್ಕೆ ನಿರ್ದೇಶಿಸಿ ಅರ್ಜಿ ಇತ್ಯರ್ಥಗೊಳಿಸಿದೆ.
ಜಾಕ್‍ವೆಲ್ ನಿರ್ಮಾಣದಿಂದ ನದಿ ಜಲಾಯನ ಪ್ರದೇಶ ಮತ್ತು ಸ್ಥಳೀಯ ಪರಿಸರ ಹಾಳಾಗುತ್ತದೆ. ಹಾಗೆಯೇ, ನದಿ ಮತ್ತು ಸ್ಥಳೀಯ ಪರಿಸರದ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂದು ಅರ್ಜಿದಾರರು ಇದೇ ವೇಳೆ ಆಕ್ಷೇಪಿಸಿದ್ದರು.