ಅಂಗಡಿಗಳಲ್ಲಿ ಮಾಂಸ ಖರೀದಿಗೆ ನೂಕುನುಗ್ಗಲು: ಹಲಾಲ್-ಜಟ್ಕಾ ಕಟ್ ವಿವಾದ ಸುಳ್ಳು ವದಂತಿಗಳಿಗೆ ಕಿವಿಗೊಡದ ಜನ
ಬೆಂಗಳೂರು, ಎ.3: ಯುಗಾದಿ ಹಬ್ಬದ ಅಂಗವಾಗಿ ‘ಹೊಸ ತೊಡಕು’ ಆಚರಣೆ ರಾಜ್ಯದ ಎಲ್ಲೆಡೆ ಸಂಭ್ರಮದಿಂದ ನಡೆದಿದ್ದು, ಹಲಾಲ್-ಜಟ್ಕಾ ಕುರಿತ ಸುಳ್ಳು ವದಂತಿಗಳಿಗೆ ಕಿವಿಗೂಡದ ಜನ ಎಲ್ಲ್ಲ ಧರ್ಮಿಯ ಮಳಿಗೆಗಳಲ್ಲೂ ಮಾಂಸ ಖರೀದಿಸಲು ಮುಗಿಬಿದ್ದರು.
ರವಿವಾರ ಮುಂಜಾನೆಯಿಂದಲೇ ರಾಜಧಾನಿ ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲಾ ಕೇಂದ್ರಗಳಲ್ಲಿರುವ ಮಾಂಸದ ಅಂಗಡಿಗಳ ಮುಂದೆ ಸಾಲು ಸಾಲಾಗಿ ನಿಂತ ಜನರು, ಮೀನು, ಕುರಿ, ಮೇಕೆ ಮತ್ತು ಕೋಳಿ ಮಾಂಸ ಖರೀದಿಸಲು ಮುಗಿಬಿದ್ದದ್ದು ಕಂಡುಬಂತು.
ಪ್ರಮುಖವಾಗಿ ಬೆಂಗಳೂರಿನ ಆರ್‍ಟಿನಗರ, ಶಿವಾಜಿನಗರ, ಹೆಬ್ಬಾಳ, ಬ್ಯಾಟರಾಯನಪುರ, ಬಿಟಿಎಂ, ಮಹಮಡನ್ ಬ್ಲಾಕ್, ಗುರಪ್ಪನಪಾಳ್ಯ, ತಿಲಕ್ ನಗರ, ವಿಜಯನಗರ ಸೇರಿದಂತೆ ಹಲವು ಪ್ರದೇಶಗಳಲ್ಲಿ ಬೆಳಗ್ಗೆಯಿಂದಲೇ ಮಾಂಸದ ಅಂಗಡಿಗಳ ಮುಂದೆ ಜನರ ಸಾಲು ನೆರೆದಿತ್ತು. ಹಲಾಲ್-ಜಟ್ಕಾ ಕಟ್ ಗೊಂದಲ ಇಲ್ಲದೆಯೇ ಜನರು ಖರೀದಿ ನಡೆಸಿದರು.
ಅದೂ ಅಲ್ಲದೆ, ಮುಸ್ಲಿಮ್ ಸಮುದಾಯದವರ ಮಟನ್ ಸ್ಟಾಲ್‍ಗಳ ಮುಂದೆಯೂ ಜನರ ಉದ್ದನೆಯ ಸಾಲು ಇತ್ತು. ಈ ವೇಳೆ ಪ್ರತಿಕ್ರಿಯಿಸಿದ ಗ್ರಾಹಕರು, ಆಹಾರಕ್ಕೂ ಧರ್ಮಕ್ಕೂ ಯಾವುದೇ ಸಂಬಂಧವಿಲ್ಲ. ಕೆಲ ಕಿಡಿಗೇಡಿಗಳು ಮಾತ್ರ ಅಪಪ್ರಚಾರ ನಡೆಸುತ್ತಿದ್ದಾರೆ ಎಂದರು.
ಕಳೆದ ವರ್ಷಕ್ಕಿಂತಲೂ ಈ ವರ್ಷ ಒಳ್ಳೆಯ ವ್ಯಾಪಾರ ಆಗುತ್ತಿದೆ. ನಮ್ಮ ಅಂಗಡಿಯಲ್ಲಿ ಹಲಾಲ್ ಕಟ್ ಮಾಂಸವನ್ನೆ ಮಾರುತ್ತಿದ್ದೇವೆ. ಹಿಂದೂ ಗ್ರಾಹಕರೇ ಹೆಚ್ಚಿನ ಸಂಖ್ಯೆಯಲ್ಲಿ ಖರೀದಿಸ್ತಿದ್ದಾರೆ ಎಂದು ಬೆಂಗಳೂರಿನ ಶಿವಾಜಿನಗರ, ಆರ್‍ಟಿನಗರ, ಹೆಬ್ಬಾಳ ಸೇರಿದಂತೆ ಹಲವು ಕಡೆಯ ಕುರಿ ಮಾಂಸ ಮಾರಾಟಗಾರರು ಅಭಿಪ್ರಾಯಪಟ್ಟರು.
ಅದೇ ರೀತಿ, ಮೈಸೂರು ರಸ್ತೆಯ ಬ್ಯಾಟರಾಯನಪುರದಲ್ಲಿರುವ ಪಾಪಣ್ಣ ಮಟನ್ ಸ್ಟಾಲ್‍ನಲ್ಲಿ ಮಾಂಸ ಖರೀದಿಸುವವರ ಸಂಖ್ಯೆ ಹೆಚ್ಚಿತ್ತು. ಸುಮಾರು 74 ವರ್ಷಗಳ ಇತಿಹಾಸವಿರುವ ಈ ಅಂಗಡಿಯನ್ನು ಮೂರು ತಲೆಮಾರಿನಿಂದ ನಡೆಸಿಕೊಂಡು ಬರುತ್ತಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿದ ಪಾಪಣ್ಣರ ಮೊಮ್ಮಗ ರೋಹಿತ್, ಆಯ್ದ, ಉತ್ತಮ ಗುಣಮಟ್ಟದ ಕುರಿಗಳನ್ನು ಮಾತ್ರ ನಾವು ಮಾಂಸಕ್ಕೆ ಬಳಕೆ ಮಾಡುತ್ತೇವೆ. ಕುರಿಗಳನ್ನು ಕನಕಪುರ, ರಾಮನಗರ, ಗೌರಿಬಿದನೂರು ಮತ್ತು ಮಾಗಡಿಯಿಂದ ಆರಿಸಿ ತರಲಾಗುತ್ತದೆ. ಪ್ರತಿ ವರ್ಷ ಹೊಸ ತೊಡಕಿನ ದಿನ ಸರಾಸರಿ 1,500 ಕಿಲೋ ಮಟನ್ ಮಾರಾಟವಾಗುತ್ತದೆ. ಆದರೆ, ಹಲಾಲ್, ಜಟ್ಕಾ ಕಟ್ ಕುರಿತು ಮಾತನಾಡುವುದಿಲ್ಲ ಎಂದರು.
ದರ ಏರಿಕೆಯಿಲ್ಲ: ಯುಗಾದಿ ಹಬ್ಬಕ್ಕೆ ಬೇರೆಲ್ಲ ವಸ್ತುಗಳ ದರ ಏರಿಕೆಯಾದರು, ಮಾಂಸದ ದರದಲ್ಲಿ ಯಾವುದೇ ಏರಿಕೆಯಾಗಿಲ್ಲ. ನಗರದಲ್ಲಿ 700ರಿಂದ 800 ರೂಗಳಿಗೆ ಉತ್ತಮ ಗುಣಮಟ್ಟದ ಮೇಕೆ, ಕುರಿ ಮಾಂಸ ದೊರೆಯಿತು.
ಮತ್ತೊಂದೆಡೆ ಕಳೆದೆರಡು ವರ್ಷಗಳಿಂದ ಕೋವಿಡ್‍ನಿಂದ ಕಳೆಗುಂದಿದ್ದ ಯುಗಾದಿ ಈ ಬಾರಿ ರಂಗು ಹೆಚ್ಚಿಸಿಕೊಂಡಿದ್ದು, ಜನರು ಹಬ್ಬದ ಆಚರಣೆಗೆ ಮುಂದಾಗಿದ್ದು, ಹಬ್ಬದ ಹಿನ್ನೆಲೆಯಲ್ಲಿ ಭರ್ಜರಿ ವ್ಯಾಪಾರ ವಹಿವಾಟು ನಡೆದಿದೆ.
ಒಟ್ಟಾರೆ, ಹಲಾಲ್-ಜಟ್ಕಾ ಕಟ್ ವಿವಾದದಿಂದ ವ್ಯಾಪಾರ ಕುಂಠಿತವಾಗಬಹುದೆಂಬ ಭೀತಿಯಲ್ಲಿದ್ದ ವ್ಯಾಪಾರಸ್ಥರು ಸಹ ಹೆಚ್ಚಿನ ಮರಿಗಳನ್ನು ಕಡಿದು ಮಾಂಸ ಮಾರಾಟ ಮಾಡಿದರು.
ನೆಲಮಂಗಲದಲ್ಲಿ ತಗ್ಗಿದ ಮಾರಾಟ
ನೆಲಮಂಗಲ ವ್ಯಾಪ್ತಿಯ ಹಲಾಲ್ ಮಾಂಸ ಮಳಿಗೆಗಳಲ್ಲಿ ವ್ಯಾಪಾರ ವಹಿವಾಟು ತಗ್ಗಿದೆ ಎಂದು ವ್ಯಾಪಾರಸ್ಥರು ತಿಳಿಸಿದ್ದಾರೆ. ಪ್ರತಿ ವರ್ಷ ಮೂವತ್ತು ಮರಿ ಹೊಡೀತಿದ್ದೋ, ಈ ಸಲ ಎಂಟು ಮರಿ ಕುಯ್ದಿದೀವಿ. ಕೋವಿಡ್ ಹಾಗೂ ಕೆಲ ಸಂಘಟನೆಗಳ ಅಪಪ್ರಚಾರದಿಂದ ಕೊಂಚ ಮಟ್ಟಿಗೇನೂ ಸಿಕ್ಕಾಪಟ್ಟೆ ವ್ಯಾಪಾರ ತಗ್ಗಿದೆ ಎಂದರು.
ಗುಡ್ಡೆ ಮಾಂಸಕ್ಕೆ ಬೇಡಿಕೆ
ಹಲಾಲ್-ಜಟ್ಕಾ ಕಟ್ ವಿವಾದದ ನಡುವೆಯೂ ಗುಡ್ಡೆ ಮಾಂಸ ಖರೀದಿಯಲ್ಲಿ ಹೆಚ್ಚು ಜನರು ಆಸಕ್ತರಾಗಿದ್ದರು. ಕತ್ತರಿಸಿದ ಕುರಿ ಅಥವಾ ಮೇಕೆಯ ಮಾಂಸ, ಮೂಳೆ, ಲಿವರ್, ಕೊಬ್ಬು ಸೇರಿ ಎಲ್ಲ ಭಾಗವನ್ನೂ ಸಮವಾಗಿ ಒಂದು ಕೆಜಿ ವಿಂಗಡಣೆ ಮಾಡಿಡಲಾಗುತ್ತದೆ. ಈ ರೀತಿ ವಿಂಗಡಿಸಿಟ್ಟಿದ್ದಕ್ಕೆ ಗುಡ್ಡೆ ಮಾಂಸ ಎಂದು ಕರೆಯಲಾಗುತ್ತದೆ. ಬೆಂಗಳೂರು ಸೇರಿದಂತೆ ಹಲವು ಕಡೆಗಳಲ್ಲಿ ಗುಡ್ಡೆ ಮಾಂಸ ಖರೀದಿ ಹೆಚ್ಚಾಗಿತ್ತು.
ಕರಪತ್ರ.. ಕ್ರಮಕ್ಕೆ ಆಗ್ರಹ
ಮುಸ್ಲಿಮರ ಕಟ್ಟಿಗೆ ಅಂಗಡಿಯಿಂದ ಹಲಾಲ್ ಮಾಂಸ ಖರೀದಿಸದಂತೆ ವಿಶ್ವ ಹಿಂದು ಪರಿಷತ್, ಬಜರಂಗದಳ ಸಂಘಟನೆಗಳವರು ಕರಪತ್ರ ಹಂಚಿದ್ದು, ಈ ಸಂಬಂಧ ಕ್ರಮ ಕೈಗೊಳ್ಳುವಂತೆ ಮಾಂಸ ಮಾರಾಟ ಮಳಿಗೆದಾರರು ಆಗ್ರಹಿಸಿದರು.
ಕರಪತ್ರದಲ್ಲಿ ಆತ್ಮೀಯ ಹಿಂದು ಬಾಂಧವರೇ, ಈ ಬಾರಿ ಯುಗಾದಿ ವರ್ಷದೊಡಕಿನ (ಹೊಸ ತಡಕು) ದಿನ ನಾವೆಲ್ಲರೂ ಒಂದು ಸಂಕಲ್ಪ ಮಾಡೋಣ. ಯಾರೊಬ್ಬರೂ ಮುಸ್ಲಿಮರ ಕಟ್ಟಿಗೆ ಅಂಗಡಿಯಿಂದ ಅವರು ಹಲಾಲ್ ಮಾಡಿರುವ ಮಾಂಸವನ್ನು ಖರೀದಿ ಮಾಡದಿರೋಣ. ಹಲಾಲ್ ಎಂದರೆ ಮುಸ್ಲಿಂ ವ್ಯಕ್ತಿ ತನ್ನ ದೇವರಾದ ಅಲ್ಲಾಹು ಹೆಸರಿನಲ್ಲಿ ನೈವೇದ್ಯ ಅರ್ಪಿಸಿ ನಂತರ ಮಾಂಸ ವಿತರಣೆ ಮಾಡುವುದು. ನಾವೆಲ್ಲಾ ಒಗ್ಗಟ್ಟಾಗಿ ನಮ್ಮ ಹಿಂದುಗಳ ಬಳಿಯೇ ಮಾಂಸವನ್ನು ಖರೀದಿಸಿ ನಮ್ಮವರಿಗೆ ಸಹಾಯ ಮಾಡೋಣ ಎಂದು ಮುದ್ರಿಸಲಾಗಿದೆ.
ಆದರೆ, ಈ ರೀತಿ ಯಾವುದು ನಡೆಯುವುದಿಲ್ಲ. ಪ್ರಾಣಿವಧೆ ಕ್ರಮವನ್ನೆ ತಿರುಚಿ ಅಪ್ರಚಾರ ಮಾಡುವವರ ವಿರುದ್ಧ ಪೊಲೀಸ್ ಇಲಾಖೆ ಕ್ರಮ ಕೈಗೊಳ್ಳಬೇಕೆಂದು ಮಾಲಕರು ಆಗ್ರಹಿಸಿದ್ದಾರೆ.
ಕ್ಯಾಮೆರಾಮನ್ ಕಿತಾಪತಿ
ಬೆಳಗ್ಗೆ 5ಗಂಟೆಯಿಂದಲೂ ನಮ್ಮ ಮಾಂಸದಂಗಡಿ ಮುಂದೆ ಜನರು ಜಾತಿ, ಧರ್ಮ ನೋಡದೆ ಬಂದು ಖರೀದಿ ಮಾಡಿದರು. ಆದರೆ, ಬೆಳಗ್ಗೆ 11 ಗಂಟೆ ಸುಮಾರಿಗೆ ನಮ್ಮ ಅಂಗಡಿ ಮುಂಭಾಗ ಬಂದ ಖಾಸಗಿ ಸುದ್ದಿ ವಾಹಿನಿಯ ಕ್ಯಾಮೆರಾಮನ್, ಮುಸ್ಲಿಮ್, ಹಲಾಲ್ ಅಂಗಡಿ ಬಳಿ ಗ್ರಾಹಕನೇ ಇಲ್ಲ ಎಂದು ಅಪಪ್ರಚಾರ ಮಾಡಿದ್ದಾರೆ. ಈ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ಬೆಂಗಳೂರಿನ ಮಾಂಸದಂಗಡಿ ಮಾಲಕರೊಬ್ಬರು ಒತ್ತಾಯ ಮಾಡಿದರು.