ಎಸ್‍ಡಿಪಿಐ, ಪಿಎಫ್‍ಐ ನಿಷೇಧಿಸುವಂತೆ ಸಿಎಂಗೆ ಮನವಿ ಸಲ್ಲಿಸಿಲ್ಲ: ಶಾಸಕ ಝಮೀರ್ ಅಹ್ಮದ್ ಸ್ಪಷ್ಟನೆ

Update: 2022-04-04 16:13 GMT
 ಶಾಸಕ ಝಮೀರ್ ಅಹ್ಮದ್

ಬೆಂಗಳೂರು, ಎ.4: 'ಯಾವುದೇ ಸಂಘ ಸಂಸ್ಥೆ ನಿಷೇಧಿಸಬೇಕೆಂದು ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿಲ್ಲ. ಒಂದು ವೇಳೆ ನಿಷೇಧ ಹೇರಬೇಕೆಂದರೆ, ಮೊದಲು ಆರೆಸ್ಸೆಸ್, ಬಜರಂಗದಳ ನಿಷೇಧಿಸಿ ಎನ್ನುತ್ತೇನೆ' ಎಂದು ಶಾಸಕ ಝಮೀರ್ ಅಹ್ಮದ್ ಖಾನ್ ಹೇಳಿದರು.

ಮಂಗಳವಾರ ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿ ಹೆಚ್ಚುವರಿ ಹಣ ಮೀಸಲಿಡಬೇಕೆಂದು ಮುಖ್ಯಮಂತ್ರಿಗಳಿಗೆ ನಿಯೋಗವು ಭೇಟಿ ಮಾಡಿ ಮನವಿ ಸಲ್ಲಿಸಿತು. ಆದರೆ, ಇದೇ ಬೆಳವಣಿಗೆಯನ್ನಿಟ್ಟುಕೊಂಡು ಕೆಲವರು ಅಪಪ್ರಚಾರ ನಡೆಸಿದ್ದಾರೆ ಎಂದರು.

ನಾವು ಎಸ್‍ಡಿಪಿಐ, ಪಿಎಫ್‍ಐ ನಿಷೇಧಿಸಬೇಕೆಂದು ರಾಜ್ಯ ಸರಕಾರಕ್ಕೆ ಒತ್ತಾಯಿಸಿಲ್ಲ. ಒಂದು ವೇಳೆ ನಿಷೇಧಿಸಬೇಕಾಗಿ ಬಂದರೆ ಅದು ಆರೆಸ್ಸೆಸ್, ಬಜರಂಗದಳವನ್ನು. ಇವರೇ ನಾಡಿನ ಶಾಂತಿಯನ್ನು ಹದಗೆಡಿಸುತ್ತಿದ್ದಾರೆ. ಇಲ್ಲಸಲ್ಲದ ಧಾರ್ಮಿಕ ಭಾವನೆಗಳನ್ನು ಚರ್ಚೆಗೆ ಎಳೆದುತಂದು ಆತಂಕಕಾರಿ ವಾತಾವರಣ ಸೃಷ್ಟಿ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಮಸೀದಿಗಳಲ್ಲಿ ಧ್ವನಿವರ್ಧಕ ಅಳವಡಿಕೆಯೂ ಕಾನೂನು ಪ್ರಕಾರ ನಡೆಯುತ್ತಿದೆ. ಬೆಳಗಿನ ಜಾವ ಆದೇಶದಂತೆ ಯಾರು ಹೆಚ್ಚಾಗಿ ಶಬ್ದ ಇಡುತ್ತಿಲ್ಲ. ಇದು ಪೊಲೀಸ್ ಇಲಾಖೆಗೂ ಗೊತ್ತಿದೆ. ಆದರೆ, ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಅಪಪ್ರಚಾರ ನಡೆಸುತ್ತಿದ್ದು, ಇದರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಅವರು ಒತ್ತಾಯ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News