ಚಿಕ್ಕಮಗಳೂರು: ಸಹಕಾರಿ ಸಾರಿಗೆ ಸಂಸ್ಥೆ ಪುನರಾರಂಭಿಸದಿದ್ದಲ್ಲಿ ಶೃಂಗೇರಿ ಬಂದ್‍ಗೆ ಕರೆ

Update: 2022-04-04 16:23 GMT

ಚಿಕ್ಕಮಗಳೂರು, 4: ಜಿಲ್ಲೆಯ ಕೊಪ್ಪ ಪಟ್ಟಣದಲ್ಲಿರುವ ಸಹಕಾರಿ ಸಾರಿಗೆ ಸಂಸ್ಥೆ ಜಿಲ್ಲೆ ಹಾಗೂ ನೆರೆಯ ಜಿಲ್ಲೆಗಳಲ್ಲಿ ಅನೇಕ ವರ್ಷಗಳಿಂದ ಸೇವೆ ಸಲ್ಲಿಸಿಕೊಂಡು ಮಲೆನಾಡಿನ ಹೆಗ್ಗಳಿಕೆಗೆ ಪಾತ್ರವಾಗಿದ್ದು, ಕಳೆದ ಎರಡು ವರ್ಷಗಳಿಂದ ಆರ್ಥಿಕ ಮುಗ್ಗಟ್ಟು ಹಾಗೂ ಸಮರ್ಥ ಆಡಳಿತದ ಕೊರತೆಯಿಂದಾಗಿ ಸಂಸ್ಥೆ ಸ್ಥಗಿತಗೊಂಡಿದೆ. ಸಂಸ್ಥೆಯ ಪುನರಾರಂಭಕ್ಕೆ ಹೋರಾಟ, ಮನವಿ ನೀಡಿ ಸರಕಾರ, ಜಿಲ್ಲಾಡಳಿತದ ಗಮನ ಸೆಳೆದಿದ್ದರೂ ಪ್ರಯೋಜನವಾಗಿಲ್ಲ. ಸಹಕಾರಿ ಸಾರಿಗೆ ಸಂಸ್ಥೆಯ ಪುನಾರಂಭಕ್ಕೆ ಶೀಘ್ರ ಕ್ರಮವಹಿಸದಿದ್ದಲ್ಲಿ ಶೃಂಗೇರಿ ವಿಧಾನಸಭೆ ಕ್ಷೇತ್ರ ಬಂದ್‍ಗೆ ಕರೆ ನೀಡಿ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಜಿಲ್ಲಾ ಟ್ರಾನ್ಸ್‍ಪೋರ್ಟ್ ಅಂಡ್ ಜನರಲ್ ಮಜ್ದೂರ್ ಸಂಘ ಜಿಲ್ಲಾಡಳಿತವನ್ನು ಎಚ್ಚರಿಸಿದೆ.

ಈ ಸಂಬಂಧ ಜಿಲ್ಲಾಧಿಕಾರಿ ಕೆ.ಎನ್.ರಮೇಶ್ ಅವರಿಗೆ ಸೋಮವಾರ ಮನವಿ ಸಲ್ಲಿಸಿದ ಸಂಘದ ಪದಾಧಿಕಾರಿಗಳು, ಸಹಕಾರಿ ಸಾರಿಗೆ ಸಂಸ್ಥೆಯನ್ನು ಕೂಡಲೇ ಪುನರಾರಂಭಿಸಿ ಕಾರ್ಮಿಕರ ಜೀವನೋಪಾಯಕ್ಕೆ ಅನುವು ಮಾಡಿಕೊಡಬೇಕು. ಸಹಕಾರ ಸಾರಿಗೆ ಸಂಸ್ಥೆಯ ಕಾರ್ಮಿಕರ ಸಮಸ್ಯೆಗೆ ಗೃಹ ಸಚಿವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಗಿದ್ದು, ಒಂದು ವಾರದೊಳಗಾಗಿ ಸಮಸ್ಯೆಗಳನ್ನು ಬಗೆಹರಿಸುವ ಭರವಸೆಯನ್ನು ನೀಡಿದ್ದರು. ಆದರೆ ಆರು ತಿಂಗಳು ಕಳೆದರೂ ಯಾವುದೇ ಕ್ರಮ ಕೈಗೊಳ್ಳದಿರುವುದು ಭಾರೀ ನೋವುಂಟು ಮಾಡಿದೆ. 

ಸಂಘದ ಆಡಳಿತ ಮಂಡಳಿಯ ಬಹುತೇಕ ಸದಸ್ಯರುಗಳು ತಮ್ಮ ನಿರ್ದೇಶಕರ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಸಂಸ್ಥೆಯ ಮುಂದಿನ ವ್ಯವಹಾರಗಳಿಗೆ ಆಡಳಿತ ಮಂಡಳಿಯ ಆವಶ್ಯಕತೆಯಿದೆ. ಈ ಸಂಬಂಧ ಕೊಪ್ಪ ತಹಶೀಲ್ದಾರ್ ಅವರನ್ನು ಆಡಳಿತಾಧಿಕಾರಿಗಳನ್ನಾಗಿ ನೇಮಿಸಿ ಎರಡು ತಿಂಗಳು ಕಳೆದರೂ ಅಧಿಕಾರ ವಹಿಸಿ ಕೊಂಡಿರುವುದಿಲ್ಲ ಎಂದು ಆರೋಪಿಸಿದ ಅವರು, ಸಂಘದ ಸಂಸ್ಥೆಗೆ ಬೀಗ ಹಾಕಿರುವುದರಿಂದ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತಿಲ್ಲ. ಸಂಸ್ಥೆಯ ಪುನರಾರಂಭಕ್ಕೆ ಪತ್ರ ವ್ಯವಹಾರಗಳನ್ನು ನಡೆಸಲು ಸಾಧ್ಯವಾಗುತ್ತಿಲ್ಲ. ಕೂಡಲೇ ಸಂಸ್ಥೆಗೆ ಹಾಕಲಾದ ಬೀಗವನ್ನು ತೆರವುಗೊಳಿಸಿ ಭ್ರಷ್ಟಾಚಾರದ ತನಿಖೆಗೆ ಅನುಕೂಲ ಮಾಡಿಕೊಡಬೇಕು ಎಂದರು.

ಸಹಕಾರಿ ಸಾರಿಗೆ ಸಂಸ್ಥೆಯ ಪುನಾರಂಭಕ್ಕೆ ಆಡಳಿತ ಮಂಡಳಿ ಅತ್ಯಗತ್ಯ. ಆದ್ದರಿಂದ ನೂತನ ಆಡಳಿತ ಮಂಡಳಿ ರಚನೆಗೆ ಶೀಘ್ರ ಕ್ರಮವಹಿಸಬೇಕು. ತಪ್ಪಿದಲ್ಲಿ ಎ.14ರಂದು ಕೊಪ್ಪ ತಾಲೂಕು ಕಚೇರಿ ಎದುರು ಧರಣಿ ಸತ್ಯಾಗ್ರಹ ನಡೆಸಲಾಗುವುದು. ಇದಕ್ಕೂ ಸ್ಪಂದಿಸದಿದ್ದಲ್ಲಿ ಎ.22ರಂದು ಶೃಂಗೇರಿ ಕ್ಷೇತ್ರ ಬಂದ್‍ಗೆ ಕರೆ ಕೊಡುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ  ಎಚ್.ಆರ್.ಸಂಜೀವ, ಉಪಾಧ್ಯಕ್ಷ ಎಚ್.ಸಿ.ಕಟ್ಟೇಗೌಡ, ಸದಸ್ಯರಾದ ರಮೇಶ್ ಶಾಸ್ತ್ರಿ, ಎನ್.ಎಂ.ನಾಗೇಶ್, ಜಯಪ್ರಕಾಶ್, ಹಾಲಪ್ಪಗೌಡ, ಚೇತನ್, ಸುರೇಶ್ ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News