ಬೆಂಗಳೂರು: ಹೊಟೇಲ್‍ಗಳಲ್ಲಿ ಊಟ, ತಿಂಡಿ ಬೆಲೆ ಶೇ.10ರಷ್ಟು ಏರಿಕೆ; ಮಾಲಕರ ಸಂಘದ ನಿರ್ಧಾರ

Update: 2022-04-04 16:27 GMT
ಫೈಲ್ ಚಿತ್ರ

ಬೆಂಗಳೂರು, ಎ.4: ದಿನೇ ದಿನೇ ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆ ಆಗುತ್ತಿರುವ ಕಾರಣದಿಂದಾಗಿ ದಿನಸಿ ಮತ್ತು ಸಾಮಗ್ರಿಗಳ ಬೆಲೆಯೂ ಹೆಚ್ಚಾಗಿದೆ. ಇದರಿಂದ, ಕಂಗೆಟ್ಟಿರುವ ಹೊಟೇಲ್ ಮಾಲಕರು, ಬೆಂಗಳೂರು ನಗರದಲ್ಲಿ ತಿಂಡಿ, ಊಟ, ಟೀ, ಕಾಫಿ ಬೆಲೆಗಳಲ್ಲಿ ಶೇ.10ರಷ್ಟು  ಏರಿಕೆ ಮಾಡಿದ್ದಾರೆ. 

ಊಟ, ತಿಂಡಿ ಬೆಲೆಗಳಲ್ಲಿ ಏರಿಕೆ ಮಾಡಲಾಗಿದೆ ಎಂದು ಬೆಂಗಳೂರು ಹೊಟೇಲ್ ಮಾಲಕರ ಸಂಘದ ಅಧ್ಯಕ್ಷ ಪಿ.ಸಿ.ರಾವ್ ತಿಳಿಸಿದ್ದಾರೆ. ಈ ಕುರಿತಂತೆ ಸಭೆಯಲ್ಲಿ ನಿರ್ಧಾರ ಮಾಡಲಾಗಿದೆ ಎಂದು ಅವರು ಹೇಳಿದರು. 

ಅಡುಗೆ ಎಣ್ಣೆ, ಕಾಫಿ ಪುಡಿ, ಗ್ಯಾಸ್ ಮುಂತಾದ ಅಗತ್ಯ ವಸ್ತುಗಳ ಬೆಲೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವುದು ಹೊಟೇಲ್ ಮಾಲಕರಿಗೆ ನುಂಗಲಾರದ ತುತ್ತಾಗಿದೆ. ಆದರೆ ಈ ಸಂದರ್ಭದಲ್ಲಿ ಹೊಟೇಲ್‍ಗಳಲ್ಲಿ ಬೆಲೆ ಏರಿಕೆಯು ಅನಿವಾರ್ಯವಾಗಿದೆ. ಗ್ರಾಹಕರ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಶೇ.10ರಷ್ಟು ಆಹಾರ ಪದಾರ್ಥಗಳ ಬೆಲೆ ಜಾಸ್ತಿ ಮಾಡಬೇಕೆಂಬ ನಿರ್ಧಾರ ತೆಗೆದುಕೊಂಡಿರುತ್ತೇವೆ ಎಂದು ಪತ್ರಿಕಾ ಪ್ರಕಟಣೆ ಹೊರಡಿಸಿದ್ದಾರೆ.

ಮುಂದಿನ ವಾರದಿಂದ ಜಾರಿಗೆ: ಮುಂದಿನ ವಾರದಿಂದ ಹೊಟೇಲ್‍ನಲ್ಲಿ ಬೆಲೆ ಏರಿಕೆ ಮಾಡಲಾಗುವುದು ಎಂದು ಬೆಂಗಳೂರು ಹೊಟೇಲ್ ಮಾಲಕರ ಸಂಘದ ಅಧ್ಯಕ್ಷ ಪಿ.ಸಿ. ರಾವ್ ತಿಳಿಸಿದ್ದಾರೆ. ಯಾವ್ಯಾವ ತಿನಿಸು ದರ ಏರಿಕೆ ಎಷ್ಟು ಎಂಬುದು ಆಯಾ ಹೊಟೇಲ್‍ನವರಿಗೆ ಬಿಟ್ಟಿದ್ದು. ತಿಂಡಿ ಐದು ರೂ. ಕಾಫಿ, ಟೀ ಎರಡು ರೂ. ಹೆಚ್ಚಳ ಆಗುತ್ತೆ. ಸದ್ಯ ಬೆಂಗಳೂರು ನಗರದಲ್ಲಿ ದರ ಏರಿಕೆ ಮಾಡಲು ನಿರ್ಧಾರ ಮಾಡಲಾಗಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News