ರಾಜ್ಯಾದ್ಯಂತ ಶಾಲೆಗಳ ಭೂ-ದಾಖಲಾತಿ ಅಭಿಯಾನ: ಸಚಿವ ಆರ್.ಅಶೋಕ್

Update: 2022-04-05 11:28 GMT

ಬೆಂಗಳೂರು, ಎ.5: ರಾಜ್ಯವ್ಯಾಪಿ ಒತ್ತುವರಿ ಆಗಿರುವ ಸರಕಾರಿ ಶಾಲಾ ಸ್ವತ್ತುಗಳನ್ನು ತೆರವುಗೊಳಿಸಿ, ಶಿಕ್ಷಣ ಇಲಾಖೆಗೆ ಒಪ್ಪಿಸುವ ಅಭಿಯಾನವನ್ನು ಕೈಗೊಳ್ಳಲಾಗುವುದು ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದರು.

ಮಂಗಳವಾರ ನಗರದ ಕೆಜಿ ರಸ್ತೆಯ ಶಿಕ್ಷಕರ ಸದನ ಸಭಾಂಗಣದಲ್ಲಿ ಸರಕಾರಿ ಶಾಲೆಗಳ ಆಸ್ತಿ ಸಂರಕ್ಷಣೆ ಮತ್ತು ಅಭಿವೃದ್ಧಿಪಡಿಸಲು ವಿವಿಧ ಇಲಾಖೆಗಳ ಸಮನ್ವಯದೊಂದಿಗೆ ಶಿಕ್ಷಣ ಇಲಾಖೆಯಿಂದ ಕೈಗೊಂಡಿರುವ ಕ್ರಮಗಳ ಭಾಗವಾಗಿ ಬೆಂಗಳೂರು ನಗರಜಿಲ್ಲೆ ಸರಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಆಸ್ತಿ ನೋಂದಣಿ ಸಂಬಂಧಿಸಿದ ದಾಖಲೆಗಳನ್ನು  ಮಂಜೂರಾತಿ ಪ್ರಾಧಿಕಾರಗಳಿಂದ ಶಾಲಾ ಎಸ್‍ಡಿಎಂಸಿಗಳಿಗೆ ಹಸ್ತಾಂತರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. 

ಸರಕಾರಿ ಶಾಲಾ ಕಾಲೇಜುಗಳ ಆಸ್ತಿಗಳನ್ನು ಸಂರಕ್ಷಣೆ ಮಾಡಲು ಕಂದಾಯ ಇಲಾಖೆ ಪಣತೊಟ್ಟಿದ್ದು, ಇದಕ್ಕಾಗಿ ವಿಶೇಷ ಅಭಿಯಾನ ಹಮ್ಮಿಕೊಂಡಿದೆ. ಅದರಂತೆ, ಕರ್ನಾಟಕದ ಎಲ್ಲೆಡೆ ಸರಕಾರಿ ಶಾಲೆಗಳ ಆಸ್ತಿ ದಾಖಲೆಯ ಸಮೀಕ್ಷೆ ನಡೆಸಿ, ಅದರ ಮೂಲ ದಾಖಲಾತಿಗಳನ್ನು ಸೃಷ್ಟಿಸಿ, ಶಿಕ್ಷಣ ಇಲಾಖೆಗೆ ನೀಡಲಾಗುವುದು ಎಂದರು.

ಒಂದು ವೇಳೆ ಯಾರಾದರೂ ಒತ್ತುವರಿ ಮಾಡಿಕೊಂಡಿದ್ದರೆ, ಅದನ್ನು ವಾಪಸ್ಸು ಪಡೆಯುವ ಪ್ರಕ್ರಿಯೆ ನಡೆಯಲಿದೆ ಎಂದ ಅವರು, ನಾವು ಇಂದು ಸರಕಾರಿ ಶಾಲೆಗಳ ಆಸ್ತಿ ರಕ್ಷಣೆ ಮಾಡದಿದ್ದರೆ, ಮುಂದಿನ ಇಪ್ಪತ್ತು ವರ್ಷಗಳಲ್ಲಿ ಸರಕಾರಿ ಜಾಗವೇ ಇಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂದೂ ನುಡಿದರು.

ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಮಾತನಾಡಿ, ಬೇರೆಯವರ ಆಸ್ತಿಗಳನ್ನು ಕಬಳಿಕೆ ಮಾಡಬೇಕು ಎನ್ನುವ ಮನೋಭಾವ ಕೆಲ ಜನರಲ್ಲಿ ಸೃಷ್ಟಿಯಾಗಿದೆ. ಹೀಗಾಗಿ, ಇಂತಹ ಸಂದರ್ಭದಲ್ಲಿ ಸರಕಾರಿ ಆಸ್ತಿ ಉಳಿಸುವುದು ಅನಿವಾರ್ಯವಾಗಿದೆ. ಸದ್ಯಕ್ಕೆ ಬೆಂಗಳೂರು ವ್ಯಾಪ್ತಿಯಲ್ಲಿ ದಾಖಲೆ ಹಸ್ತಾಂತರ ಮಾಡಲಿದ್ದು, ಈ ಕಾರ್ಯ ರಾಜ್ಯಾದ್ಯಂತ ನಡೆಯಲಿದೆ ಎಂದು ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಎಸ್.ಸೆಲ್ವಕುಮಾರ್, ಬೆಂಗಳೂರು ನಗರಜಿಲ್ಲಾಧಿಕಾರಿ ಜೆ.ಮಂಜುನಾಥ, ಬೆಂಗಳೂರು ಉತ್ತರ ಉಪವಿಭಾಗಧಿಕಾರಿ ಡಾ.ಎಂ.ಜಿ.ಶಿವಣ್ಣ, ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ನರಸಿಂಹಮೂರ್ತಿ, ಬೆಂಗಳೂರು ನಗರಜಿಲ್ಲಾ ಪಂಚಾಯತ್ ಮಾಜಿ ಸದಸ್ಯರು ಸೇರಿದಂತೆ ಶಿಕ್ಷಣ ಮತ್ತು ಕಂದಾಯ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

ಅಧಿಕಾರಿ ಕಾರ್ಯಕ್ಕೆ ಮೆಚ್ಚುಗೆ

ಸರಕಾರಿ ಶಾಲೆ ದಾಖಲಾತಿ ಮಂಜೂರಾತಿ ಅಭಿಯಾನದಲ್ಲಿ ಸಕ್ರಿಯವಾಗಿರುವ ಬೆಂಗಳೂರು ಉತ್ತರ ಉಪವಿಭಾಗಧಿಕಾರಿ ಡಾ.ಎಂ.ಜಿ.ಶಿವಣ್ಣ ಅವರ ಕಾರ್ಯಕ್ಕೆ ಹಲವು ಶಿಕ್ಷಕರು ಮೆಚ್ಚುಗೆ ವ್ಯಕ್ತಪಡಿಸಿದರು.

ಬೆಂಗಳೂರು ದಕ್ಷಿಣ ಹಾಗೂ ಉತ್ತರ ವಿಭಾಗ ವ್ಯಾಪ್ತಿಯಲ್ಲಿ ಬರೋಬ್ಬರಿ 300ಕ್ಕೂ ಅಧಿಕ ಸರಕಾರಿ ಶಾಲೆಗಳಿಗೆ ಶಿವಣ್ಣ ಮುತುವರ್ಜಿ ವಹಿಸಿ ಭೂದಾಖಲಾತಿ ಮಂಜೂರಾತಿ ಮಾಡಿದ್ದಾರೆ. ಹಲವು ಕಡೆ ಪಹಣಿ, ಸರ್ವೇ ಹಾಗೂ ಖಾತೆ ಸಂಖ್ಯೆಯ ದಾಖಲಾತಿ ಶೇಖರಣೆ ಮಾಡಿ, ಸರಕಾರಿ ಜಾಗ ಉಳಿಸಲು ಶ್ರಮಿಸಿದ್ದಾರೆ ಎಂದು ಎಸ್‍ಡಿಎಂಸಿ ಸದಸ್ಯರು ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News