ಆಡು ಮುಟ್ಟದ ಸೊಪ್ಪಿಲ್ಲ ಎಂಬಂತೆ ಕುಮಾರಸ್ವಾಮಿ ಮುಟ್ಟದ ಪಕ್ಷವೇ ಇಲ್ಲ: ಸಚಿವ ಆರ್.ಅಶೋಕ್ ವ್ಯಂಗ್ಯ

Update: 2022-04-05 11:48 GMT

ಬೆಂಗಳೂರು, ಎ.5: ಆಡು ಮುಟ್ಟದ ಸೊಪ್ಪಿಲ್ಲ ಎಂಬ ಗಾದೆ ಮಾತಿನಂತೆಯೇ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಮುಟ್ಟದ ಪಕ್ಷವೇ ಇಲ್ಲ ಎಂದು ಕಂದಾಯ ಸಚಿವ ಆರ್.ಅಶೋಕ್ ವ್ಯಂಗ್ಯವಾಡಿದರು.

ಮಂಗಳವಾರ ನಗರದ ಕೆಜಿರಸ್ತೆಯ ಶಿಕ್ಷಕರ ಸದನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸದ್ಯದ ಪರಿಸ್ಥಿತಿಯಲ್ಲಿ ಕುಮಾರಸ್ವಾಮಿ ಯಾರ ಕಡೆ ಇದ್ದಾರೆ ಎನ್ನುವುದೇ ಸಂಶಯ. ಅವರು 2006ರಲ್ಲಿ ಬಿಜೆಪಿಯೊಂದಿಗೆ ಸೇರಿ ಸರಕಾರ ರಚನೆ ಮಾಡಿದರು. ಇದಾದ ಬಳಿಕ, ಕಾಂಗ್ರೆಸ್ ಜೊತೆ ಹೋದರು. ಅವರು ಆಡು ಮುಟ್ಟದ ಸೊಪ್ಪಿಲ್ಲ ಎಂಬ ಗಾದೆ ಮಾತಿನಂತೆಯೇ ನಡೆದುಕೊಳ್ಳುತ್ತಿದ್ದಾರೆ ಎಂದು ಟೀಕಿಸಿದರು.

ಕಾಂಗ್ರೆಸ್ ಒಂದು ಮನೆ, ಎರಡು ಬಾಗಿಲು ಆಗಿದ್ದು, ಒಂದು ಕಡೆ ಸಿದ್ದರಾಮಯ್ಯ ಮತ್ತೊಂದೆಡೆ ಡಿ.ಕೆ.ಶಿವಕುಮಾರ್ ಇದ್ದಾರೆ. ಇವರ ನಿಲುವು ಏನು ಎಂಬುವುದು ಗೊತ್ತಿಲ್ಲ. ಹಿಜಾಬ್ ವಿಚಾರದಲ್ಲಿಯೂ ಅವರು ಯಾರ ಕಡೆ ಎನ್ನುವುದು ಬಹಿರಂಗಪಡಿಸಿಲ್ಲ ಎಂದು ಹೇಳಿದರು.

ಸುಪ್ರೀಂ ತೀರ್ಪೆ ಅಂತಿಮ

ಅಝಾನ್ ಕುರಿತು ಗೊಂದಲ ಮಾಡಿಕೊಳ್ಳುವ ಉದ್ದೇಶ ಇಲ್ಲ. ಸುಪ್ರೀಂಕೋರ್ಟ್ ನೀಡಿರುವ ತೀರ್ಪಿನಂತೆಯೇ ಧ್ವನಿವರ್ಧಕ ಪ್ರಮಾಣ ನಿಗದಿ ಮಾಡಬೇಕು. ಇದನ್ನು ಎಲ್ಲ ಸಮುದಾಯದವರು ಪಾಲನೆ ಮಾಡಬೇಕು. ಯಾರು ಸಹ ಕಾನೂನು ಉಲ್ಲಂಘನೆ ಮಾಡಬಾರದು.

-ಆರ್.ಅಶೋಕ್, ಕಂದಾಯ ಸಚಿವ

ನನ್ನದು ಅಝಾನ್ ಇಲಾಖೆಯಲ್ಲ

ಮಸೀದಿ ಧ್ವನಿವರ್ಧಕ ಕುರಿತು ಪ್ರತಿಕ್ರಿಯಿಸಲು ನನ್ನದು ಅಝಾನ್ ಇಲಾಖೆಯಲ್ಲ. ಅಝಾನ್ ಕುರಿತು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ಏಕೆಂದರೆ, ನನ್ನದು ಆಝಾನ್ ಇಲಾಖೆ, ವಿಭಾಗವಲ್ಲ.

-ಬಿ.ಸಿ.ನಾಗೇಶ್, ಶಿಕ್ಷಣ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News