ಮಾಜಿ ಕುಸ್ತಿ ಪೈಲ್ವಾನರ ಮಾಸಾಶನ 1 ಸಾವಿರ ಹೆಚ್ಚಿಸಿ ರಾಜ್ಯ ಸರಕಾರ ಆದೇಶ

Update: 2022-04-05 15:02 GMT

ಬೆಂಗಳೂರು, ಎ.5: ಪ್ರಸಕ್ತ ಸಾಲಿನ(2022-23) ಬಜೆಟ್‍ನಲ್ಲಿ ಘೋಷಿಸಿದಂತೆ, ಆರ್ಥಿಕ ಸಂಕಷ್ಟದಲ್ಲಿರುವ ಕುಸ್ತಿ ಪೈಲ್ವಾನರ ಮಾಸಾಶನವನ್ನು 1 ಸಾವಿರ ರೂ. ಹೆಚ್ಚಿಸಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ.

ರಾಜ್ಯಮಟ್ಟದ ಕುಸ್ತಿ ಪೈಲ್ವಾನರ ಮಾಸಾಶನವನ್ನು 2,500ದಿಂದ 3,500 ರೂ, ರಾಷ್ಟ್ರಮಟ್ಟದ ಕುಸ್ತಿ ಪೈಲ್ವಾನರ ಮಾಸಾಶನವನ್ನು 3 ಸಾವಿರದಿಂದ 4 ಸಾವಿರ ರೂ, ಅಂತರ್‍ರಾಷ್ಟ್ರೀಯ ಮಟ್ಟದ ಕುಸ್ತಿ ಪೈಲ್ವಾನರ ಮಾಸಾಶನವನ್ನು 4 ಸಾವಿರದಿಂದ 5 ಸಾವಿರಕ್ಕೆ ಹೆಚ್ಚಿಸಲಾಗಿದೆ. ಎಪ್ರಿಲ್ ಒಂದರಿಂದಲೇ ಈ ಆದೇಶ ಜಾರಿಯಾಗಲಿದೆ.

50 ವರ್ಷ ದಾಟಿದ, ಸಂಕಷ್ಟದಲ್ಲಿರುವ ಕುಸ್ತಿ ಕ್ರೀಡಾಪಟುಗಳಿಗೆ ನೀಡುತ್ತಿರುವ ಮಾಸಾಶನ ಹೆಚ್ಚಿಸುವುದಾಗಿ ಬಜೆಟ್ ಭಾಷಣದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದ್ದರು.

‘ರಾಜ್ಯದ ವಿವಿಧೆಡೆ ಪ್ರವಾಸ ಕೈಗೊಂಡ ಸಂದರ್ಭದಲ್ಲಿ ಮಾಸಾಶನ ಹೆಚ್ಚಿಸುವಂತೆ ಮಾಜಿ ಕುಸ್ತಿ ಪೈಲ್ವಾನರು ಬೇಡಿಕೆ ಇಟ್ಟಿದ್ದರು. ಆಗ, ಹೆಚ್ಚಿಸುವುದಾಗಿ ಭರವಸೆ ನೀಡಿದ್ದೆ. ಅದರಂತೆ, ಬಜೆಟ್‍ನಲ್ಲಿ ಮಾಸಾಶನ ಹೆಚ್ಚಿಸಿ ಘೋಷಿಸಲಾಗಿತ್ತು. ಇದೀಗ ಆದೇಶ ಹೊರಡಿಸಲಾಗಿದೆ’ ಎಂದು ರೇಷ್ಮೆ, ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಕೆ.ಸಿ. ನಾರಾಯಣಗೌಡ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News