ಮಸೀದಿಗಳ ಧ್ವನಿವರ್ಧಕ ವಿಚಾರದಲ್ಲಿ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕ್ರಮ: ಸಿಎಂ ಬೊಮ್ಮಾಯಿ

Update: 2022-04-05 14:20 GMT

ಬೆಂಗಳೂರು, ಎ.5: ಮಸೀದಿಗಳಲ್ಲಿ ಧ್ವನಿವರ್ಧಕ ಅಳವಡಿಕೆ ಸಂಬಂಧ ಈಗಾಗಲೇ ಸುಪ್ರೀಂ ಕೋರ್ಟ್ ಆದೇಶ ನೀಡಿದ್ದು, ಅದರಂತೆ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಜಾರಿಗೊಳಿಸುತ್ತೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಮಂಗಳವಾರ ಆರ್‍ಟಿನಗರ ತಮ್ಮ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಸೀದಿಗಳಲ್ಲಿ ಧ್ವನಿವರ್ಧಕಗಳ ಮೂಲಕ ಪ್ರಾರ್ಥನೆ(ಅಝಾನ್) ಕುರಿತಂತೆ ನ್ಯಾಯಾಲಯ ಆದೇಶ ನೀಡಿದೆ. ಆದರೆ, ಆದೇಶ ಪಾಲನೆಯಾಗಿಲ್ಲ ಎಂಬ ಬಗ್ಗೆಯೂ ನ್ಯಾಯಾಲಯವೇ ಹೇಳಿದೆ. ಹೀಗಾಗಿ, ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹಂತ ಹಂತವಾಗಿ ನ್ಯಾಯಾಲಯದ ಆದೇಶವನ್ನು ಜಾರಿ ಮಾಡಲಾಗುವುದು ಎಂದು ಹೇಳಿದರು.

ಧ್ವನಿವರ್ಧಕ ಬಳಕೆಯಲ್ಲಿ ಎಷ್ಟು ಡೆಸಿಬಲ್ ಇರಬೇಕು ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ. ಜಿಲ್ಲಾ ಮಟ್ಟದಲ್ಲಿ ಡೆಸಿಬಲ್ ಮೀಟರ್ ಗಳ ಖರೀದಿಗೂ ಸೂಚನೆ ನೀಡಿದೆ. ಇದನ್ನು ಬಲವಂತವಾಗಿ ಮಾಡಲು ಬರುವುದಿಲ್ಲ. ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡೇ ಜಾರಿ ಮಾಡುತ್ತೇವೆ ಎಂದ ಅವರು, ಪೊಲೀಸ್ ಠಾಣಾ ಮಟ್ಟದಲ್ಲಿ ಈಗಾಗಲೇ ಹಲವು ಸಂಘಟನೆಗಳ ಜತೆ ಸಭೆಗಳನ್ನು ಮಾಡಿದ್ದೇವೆ. ತಳಮಟ್ಟದಲ್ಲಿ ಸರಕಾರ ಹೈಕೋರ್ಟ್ ಆದೇಶ ಜಾರಿಗೆ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದು ಅವರು ಹೇಳಿದರು.   

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News