×
Ad

ರಾಷ್ಟ್ರೀಯ ತುರ್ತು ಸಹಾಯವಾಣಿಯಲ್ಲಿ ಲೋಪ: ಸರಕಾರದ ಪ್ರತಿಕ್ರಿಯೆ ಕೇಳಿದ ಹೈಕೋರ್ಟ್

Update: 2022-04-05 20:09 IST

ಬೆಂಗಳೂರು, ಎ.5: ತುರ್ತು ಸಂದರ್ಭಗಳಲ್ಲಿ ನೆರವು ನೀಡಲು ಸರಕಾರ ರೂಪಿಸಿರುವ ಇಂಟರಾಕ್ಟಿವ್ ವಾಯ್ಸ್ ರೆಸ್ಪಾನ್ಸ್(ಐವಿಆರ್) ವ್ಯವಸ್ಥೆ ಅಥವಾ (112) ರಾಷ್ಟ್ರೀಯ ತುರ್ತು ಸಹಾಯವಾಣಿ ಸಂಖ್ಯೆ ಸಂಪರ್ಕಿಸಲು ವಿಳಂಬವಾಗುತ್ತಿದೆ ಎಂದು ಆಕ್ಷೇಪಿಸಿ ಸಲ್ಲಿಸಿರುವ ಅರ್ಜಿ ಸಂಬಂಧ ಪ್ರತಿಕ್ರಿಯೆ ನೀಡುವಂತೆ ಹೈಕೋರ್ಟ್ ರಾಜ್ಯ ಸರಕಾರಕ್ಕೆ ಸೂಚಿಸಿದೆ.

ಬೆಂಗಳೂರಿನ ನಾಗದೇವನಹಳ್ಳಿ ನಿವಾಸಿ ಎನ್.ಟಿ.ಅರುಣ್‍ಕುಮಾರ್ ಎಂಬುವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಹಾಗೂ ನ್ಯಾಯಮೂರ್ತಿ ಎಸ್.ಆರ್. ಕೃಷ್ಣಕುಮಾರ್ ಅವರಿದ್ಧ ವಿಭಾಗೀಯ ಪೀಠ ರಾಜ್ಯ ಸರಕಾರದ ಪ್ರತಿಕ್ರಿಯೆ ಕೇಳಿತು.

ಅರ್ಜಿದಾರರು ಸಂಕಷ್ಟದಲ್ಲಿರುವವ್ಯಕ್ತಿಗಳು ರಾಷ್ಟ್ರೀಯ ತುರ್ತು ಸಹಾಯವಾಣಿ 112ಕ್ಕೆ ಕರೆ ಮಾಡಿದಾಗ ಅದನ್ನು ಸ್ವೀಕರಿಸಲು ಸಾಕಷ್ಟು ವಿಳಂಬವಾಗುತ್ತಿದೆ. ಕರೆ ಮಾಡಿದ ಬಳಿಕವೂ ಹಲವು ನಿಮಿಷಗಳ ಕಾಲ ಕರೆ ಕಾಯ್ದಿರಿಸಲಾಗುತ್ತದೆ. ಇದರಿಂದಾಗಿ ದೂರು ದಾಖಲಿಸಲು ವಿಳಂಬವಾಗುತ್ತಿದೆ. ತುರ್ತು ಸಂದರ್ಭಗಳಲ್ಲಿ ಅಗತ್ಯ ನೆರವು ಲಭ್ಯವಾಗುತ್ತಿಲ್ಲ ಎಂದು ದೂರಿದ್ದಾರೆ.

ಅಲ್ಲದೇ, ಸಹಾಯವಾಣಿ ಸಂಪರ್ಕಿಸಲು ಕಷ್ಟವಾಗುತ್ತಿದೆ. ಲೋಪ ಸರಿಪಡಿಸಲು ಸರಕಾರ ಹಾಗೂ ಪೊಲೀಸ್ ಇಲಾಖೆಗೆ ನಿರ್ದೇಶಿಸಬೇಕು ಎಂದು ಅರ್ಜಿದಾರರು ಮನವಿ ಮಾಡಿದ್ದಾರೆ. ಈ ಕುರಿತಂತೆ ರಾಜ್ಯ ಸರಕಾರದ ಪ್ರತಿಕ್ರಿಯೆ ಕೇಳಿರುವ ಪೀಠ, ಎಪ್ರಿಲ್ 11ಕ್ಕೆ ವಿಚಾರಣೆ ಮುಂದೂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News