ಸಂದರ್ಭ ಬಂದರೆ ಪಕ್ಷದಿಂದ ದಲಿತ ಸಮುದಾಯದವರನ್ನೇ ಮುಖ್ಯಮಂತ್ರಿ ಮಾಡುತ್ತೇನೆ: ಎಚ್.ಡಿ. ಕುಮಾರಸ್ವಾಮಿ
ಬೆಂಗಳೂರು, ಎ.5: ನಮ್ಮ ರಾಜ್ಯದಲ್ಲಿ ಸಾಕಷ್ಟು ನೀರು ಇದ್ದು, ನೆರೆ ರಾಜ್ಯಗಳಲ್ಲಿ ನೀರಿನ ಲಭ್ಯತೆ ಇಲ್ಲ. ಹಾಗಾಗಿ ಈ ಹೋರಾಟ ರೂಪುಗೊಳಿಸಲಾಗಿದೆ. ಜೆಡಿಎಸ್ ಅಧಿಕಾರಕ್ಕೆ ಬಂದು, ಐದು ವರ್ಷಗಳಲ್ಲಿ ರಾಜ್ಯದ ಎಲ್ಲ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸದಿದ್ದರೆ ನಮ್ಮ ಪಕ್ಷವನ್ನು ವಿಸರ್ಜನೆ ಮಾಡುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ತಮ್ಮ ನಿರ್ಧಾರವನ್ನು ತಿಳಿಸಿದರು.
ಮಂಗಳವಾರ ನಗರದ ಸ್ಕೌಟ್ಸ್ ಕ್ಲಬ್‍ನಲ್ಲಿ ಆಯೋಜಿಸಿದ್ದ ರೈತರೊಂದಿಗಿನ ಸಂವಾದದಲ್ಲಿ ಮಾತನಾಡಿದ ಅವರು, ಜನಕ್ಕೋಸ್ಕರ ನಾನು ರಾಜಕಾರಣದಲ್ಲಿ ಇದ್ದೇನೆ. ಇಲ್ಲವಾದರೆ ಯಾವಾಗಲೋ ನಾನು ರಾಜಕೀಯ ನಿವೃತ್ತಿ ತೆಗೆದುಕೊಳ್ಳುತ್ತಿದ್ದೆ. ಎರಡನೇ ಬಾರಿ ಸಿಎಂ ಆಗುವ ಸಂದರ್ಭದಲ್ಲಿಯೇ ರಾಜಕಾರಣದಿಂದ ನಿವೃತ್ತಿ ತೆಗೆದುಕೊಳ್ಳಲು ಬಯಸಿದ್ದೆ. ಆದರೆ ಜನರ ಒತ್ತಡದಿಂದಾಗಿ ನಾನು ರಾಜಕೀಯದಲ್ಲಿ ಉಳಿದುಕೊಂಡಿದ್ದೇನೆ ಎಂದರು.
ನಾನು ಈಗಾಗಲೇ ಮುಖ್ಯಮಂತ್ರಿ ಆಗಿದ್ದೇನೆ. ಸಂಧರ್ಭ ಬಂದರೆ ದಲಿತರನ್ನೇ ನಮ್ಮ ಪಕ್ಷದಿಂದ ಮುಖ್ಯಮಂತ್ರಿ ಮಾಡುತ್ತೇನೆ. ನಮ್ಮ ಕುಟುಂಬದವರೇ ಅಧಿಕಾರದಲ್ಲಿ ಇರಬೇಕು ಎಂಬ ಆಸೆ ಇಲ್ಲ. ಇಡೀ ರಾಜ್ಯವೇ ನಮ್ಮ ಕುಟುಂಬ ಇದ್ದಂತೆ ಎಂದು ಕಾಳಿ ಸ್ವಾಮಿಯ ಸವಾಲಿಗೆ ತಿರುಗೇಟು ನೀಡಿದರು.
ರಾಜ್ಯದಲ್ಲಿ ಹಲಾಲ್, ಜಟ್ಕಾ ಕಟ್ ವಿವಾದ ಸೃಷ್ಟಿಯಾಗಿದೆ. ಹಿಂದೂ ಮಹಾಸಭಾ, ಬಜರಂಗದಳ ವಿವಾದಗಳನ್ನು ಮಾಡುತ್ತಿವೆ. ಆದರೂ ಮುಸಲ್ಮಾನರು ತಾಳ್ಮೆಯಿಂದ ಇದ್ದಾರೆ. ಅದನ್ನು ನಾವು ಪ್ರಶಂಸಿಸಬೇಕು ಎಂದರು.
ದೀಪ ಹಚ್ಚುವ ಸಂಸ್ಕೃತಿ ನಮ್ಮದಾಗಿದೆ, ಹೊರತು ದೀಪ ಆರಿಸುವ ಸಂಸ್ಕೃತಿ ಅಲ್ಲ. ಮುಸಲ್ಮಾನರು ದಿನಕ್ಕೆ ನಾಲ್ಕಾರು ಬಾರಿ ದೇವರನ್ನು ಸ್ಮರಿಸಲು ಲೌಡ್ ಸ್ಪೀಕರ್ ಹಾಕುತ್ತಾರೆ. ನಾವು ನಮ್ಮ ದೇವರನ್ನು ಸ್ಮರಿಸಲು ಲೌಡ್ ಸ್ಪೀಕರ್ ಹಾಕೋಣ. ನಾವೂ ಪ್ರಾರ್ಥನೆ ಮಾಡೋಣ, ನಮ್ಮ ಮಕ್ಕಳಿಗೆ ನಮ್ಮ ಸಂಸ್ಕಾರ ಕಲಿಸೋಣ ಎಂದು ಕರೆ ನೀಡಿದರು.
ನಾನು ಸಿಎಂ ಆಗಿದ್ದಾಗ ಕೋಮುಗಲಭೆ ಸೃಷ್ಟಿಯಾಗಿಲ್ಲ. ಯಾವ ರೈತ ಸಂಘಟನೆಗಳೂ ಬೀದಿಗೆ ಇಳಿದು ಹೋರಾಟ ಮಾಡಲಿಲ್ಲ. ಎರಡು ಭಾರಿ ಸಿಎಂ ಆಗಿದ್ದಾಗಲೂ, ಯಾವುದೇ ಪ್ರತಿಭಟನೆಗಳು ನಡೆಯಲಿಲ್ಲ. ರೈತರಿಗಾಗಿ ಅನೇಕ ಕಾರ್ಯಕ್ರಮ ರೂಪಿಸಲಾಗಿತ್ತು. ಋಣ ಮುಕ್ತ ಕಾಯ್ದೆ ತರಲು ಮುಂದಾಗಿದ್ದೆ. ಬಿಜೆಪಿ ಸರಕಾರ ಬಂದ ಬಳಿಕ ಅದು ಅಲ್ಲಿಗೆ ನಿಂತು ಹೋಯಿತು.
-ಎಚ್.ಡಿ. ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್‍ನ ನಾಯಕ
ಎ.16ರಿಂದ ಜಲಧಾರೆ ಕಾರ್ಯಕ್ರಮ
ಜನತಾ ಜಲಧಾರೆ ಕಾರ್ಯಕ್ರಮದ ದಿನಾಂಕ ನಿಗದಿ ಮಾಡಲಾಗಿದ್ದು, ಹನುಮ ಜಯಂತಿಯ ಪ್ರಯುಕ್ತ ಎ.16ರಂದು ಜಲಧಾರೆ ಕಾರ್ಯಕ್ರಮ ಆರಂಭ ಮಾಡಲಾಗುವುದು. ರೈತರು ಈ ಹೋರಾಟದಲ್ಲಿ ಕೈಜೋಡಿಸಬೇಕು.
-ಎಚ್.ಡಿ. ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್‍ನ ನಾಯಕ