×
Ad

ನವಪೀಳಿಗೆಗೆ ಗಾಂಧಿಯ ಸತ್ಯ, ಅಹಿಂಸೆ, ಸಂದೇಶ ಸಾರಲು 'ಗಾಂಧಿ ಸಂದೇಶ ಯಾತ್ರೆ' ಆರಂಭ: ಬಿ ಕೆ ಹರಿಪ್ರಸಾದ್

Update: 2022-04-05 22:13 IST

ಬೆಂಗಳೂರು: ಮಹಾತ್ಮ ಗಾಂಧಿಜೀಯವರು ಬ್ರಿಟಿಷರ ವಿರುದ್ಧ ರೈತ ಚಳುವಳಿಯನ್ನ ನಡೆಸಿದ ಪಶ್ಚಿಮ ಬಿಹಾರದ "ಚಂಪಾರಣ್" ಸ್ಥಳದಿಂದ "ಗಾಂಧಿ ಸಂದೇಶ ಯಾತ್ರೆ" ನಡೆಸಲಿದ್ದೇವೆ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಬಿ.ಕೆ ಹರಿಪ್ರಸಾದ್ ಹೇಳಿದ್ದಾರೆ. 

ಗಾಂಧಿ ಸಂದೇಶ ಯಾತ್ರೆಯ ಸಂಬಂಧ ಬಿಹಾರದಲ್ಲಿ ಪೂರ್ವಭಾವಿ ಕಾರ್ಯಕಾರಿಣಿ ಸಭೆಯ ಬಳಿಕ ಪತ್ರಿಕಾಗೋಷ್ಠಿ ಉದ್ದೇಶಿಸಿ ಅವರು ಮಾತನಾಡಿದರು.

ಭಾರತ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿ 75 ವರ್ಷಗಳು ಗತಿಸಿವೆ. ಈ ಹಿನ್ನಲೆಯಲ್ಲಿ ಪಕ್ಷ ದೇಶದಲ್ಲಿ ಸ್ವಾತಂತ್ರ್ಯ ಮಹೋತ್ಸವವನ್ನ ನಡೆಸಲು ಕಾಂಗ್ರೆಸ್ ಎಐಸಿಸಿ ನಿರ್ಧರಿಸಿದ್ದು, ಮಾಜಿ ಪ್ರಧಾನಿ ಡಾ ಮನಮೋಹನ್ ಸಿಂಗ್ ಅವರ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದೆ ಎಂದು ತಿಳಿಸಿದರು.

''ಭಾರತ ಸ್ವಾತಂತ್ರ್ಯ ಚಳುವಳಿ ಹಾಗೂ ಮಹಾತ್ಮ ಗಾಂಧಿಯವರ ಅಹಿಂಸಾತ್ಮಕ ಹೋರಾಟದ ಬಗ್ಗೆ ಇಡೀ ಜಗತ್ತಿಗೆ ಪ್ರೇರಣೆಯಾಗಿದೆ. ಆದ್ದರಿಂದಲೇ ಜಗತ್ತಿನ 125ಕ್ಕೂ ಹೆಚ್ಚು ದೇಶಗಳಲ್ಲಿ ಇಂದಿಗೂ ಗಾಂಧೀಜಿ ಅವರ ಜನ್ಮದಿನವನ್ನ ಅಹಿಂಸಾ ದಿನವನ್ನಾಗಿ ಆಚರಿಸಲಾಗುತ್ತಿದೆ. ಸ್ವಾತಂತ್ರ್ಯ ಪೂರ್ವ ಹಾಗೂ ಸ್ವಾತಂತ್ರ್ಯ ನಂತರದ 2014ರ ವರೆಗೆ ಗಾಂಧೀಜಿಯವರ ಸ್ವಾತಂತ್ರ್ಯ ಹೋರಾಟ ಹಾಗೂ ಅಹಿಂಸಾತ್ಮಕ ಚಳುವಳಿಯ ಬಗ್ಗೆ ಇಡೀ ಜಗತ್ತಿನ ಮೂಲೆ ಮೂಲೆಯಲ್ಲಿ ಅವರ ವಿಚಾರಧಾರೆಗಳ ಬಗ್ಗೆ ವರ್ಣನೆ ಮಾಡಲಾಗುತ್ತಿತ್ತು. ಆದರೆ ಇಂದು ಭಾರತವನ್ನ ಇಡೀ ಜಗತ್ತು ಸೂಕ್ಷ್ಮವಾಗಿ ಗಮನಿಸುತ್ತಿದೆ. ನೋಡುವಂತಹ ದೃಷ್ಟಿಕೋನ ಬದಲಾಗಿದೆ'' ಎಂದರು.

ಭಾರತ ಇಂದು ಕವಲುದಾರಿಯಲ್ಲಿ ನಿಂತಿದೆ. ಮಹಾತ್ಮ ಗಾಂಧಿಯವರ ಸತ್ಯ, ಅಹಿಂಸೆಯ ಮಾರ್ಗದಲ್ಲಿ ನಡೆಯಬೇಕೋ ಅಥವಾ ಗೋಡ್ಸೆಯ ಸುಳ್ಳು, ಹಿಂಸೆಯ ಮಾರ್ಗದಲ್ಲಿ ನಡೆಯಬೇಕೆಂಬ ವಿಚಾರಧಾರೆಗಳ ಮಧ್ಯೆ ನಿಂತಿದೆ. ಸ್ವಾತಂತ್ರ್ಯ ಪೂರ್ವ ಹಾಗೂ ನಂತರದ 2014ರವರೆಗೂ ಜಗತ್ತಿನಲ್ಲಿ ಹಾಗೂ ದೇಶದಲ್ಲಿ ಮಹಾತ್ಮ ಗಾಂಧೀಜಿಯವರ ಸತ್ಯ, ಅಹಿಂಸಾತ್ಮಕ ಹೋರಾಟದ ಬಗ್ಗೆ ಹೆಮ್ಮೆ ಪಟ್ಟಿದೆ. ಆದರೆ ಇಂದು ಗಾಂಧೀಜಿಯವರನ್ನ ಕೊಂದ "ನಾಥುರಾಮ್ ಗೋಡ್ಸೆ ಒಬ್ಬ ದೇಶಭಕ್ತ" ಎಂದು ಭೋಪಾಲ್ ನ ಲೋಕಸಭಾ ಸಂಸದರು ಹೇಳಿಕೆ ಕೊಡುತ್ತಿದ್ದಾರೆ. ಗೋಡ್ಸೆಯ ದೇವಸ್ಥಾನ ಕಟ್ಟಿಸಲು ಮುಂದಾಗುತ್ತಿದ್ದಾರೆ. ಪ್ರಧಾನಮಂತ್ರಿಗಳಿಂದ ಹಿಡಿದು ಬಿಜೆಪಿಯ ಎಲ್ಲಾ ಮಂತ್ರಿಗಳವರೆಗೆ ಸುಳ್ಳು ಹೇಳುವ ಮೂಲಕ, ಗಾಂಧೀಜಿಯವರನ್ನ ಅಪಮಾನ ಮಾಡುವುದರಲ್ಲಿ ಯಾರೂ ಹಿಂದೆ ಬಿದ್ದಿಲ್ಲ ಎಂದು ತಿಳಿಸಿದರು. 

ಭಾರತದ ನವ ಪೀಳಿಗೆ ಮಹಾತ್ಮ ಗಾಂಧೀಜಿಯವರ ಸತ್ಯ, ಅಹಿಂಸಾ ಚಳುವಳಿ, ಸ್ವಾತಂತ್ರ್ಯ ಹೋರಾಟ, ವಿಚಾರ ಧಾರೆಗಳ ಬಗ್ಗೆ ಅರ್ಥೈಸಿಕೊಳ್ಳಬೇಕಿದೆ. ಆದ್ದರಿಂದ ಕಾಂಗ್ರೆಸ್ ಪಕ್ಷ ಸ್ವಾತಂತ್ರ್ಯ ಮಹೋತ್ಸವದ ಹೆಸರಿನಲ್ಲಿ ಗಾಂಧೀ ಸಂದೇಶ ಯಾತ್ರೆಯನ್ನ ನಡೆಸಲು ಯುವ ಕಾಂಗ್ರೆಸ್ ನೇತೃತ್ವವಹಿಸಿದೆ. ಕಾಂಗ್ರೆಸ್ ಪಕ್ಷದ ನೇತೃತ್ವದಲ್ಲಿ 1942ರಲ್ಲಿ ಬ್ರಿಟಿಷ್ ಕ್ವಿಟ್ ಇಂಡಿಯಾ ಚಳುವಳಿ ನಡೆಯುತ್ತಿದ್ದರೆ ಅಟಲ್ ಬಿಹಾರಿ ವಾಜಪೇಯಿ, ವೀರ ಸಾವರ್ಕರ್ ಸೇರಿದಂತೆ ಬಿಜೆಪಿಯ ಮುಖಂಡರುಗಳು ಸ್ವಾತಂತ್ರ್ಯ ಚಳುವಳಿಯ ವಿರುದ್ಧ ಇದ್ದವರು. ಆಗ  ಗಾಂಧೀಜಿಯವರು, ಪಂಡಿತ್ ನೆಹರೂ, ಸೇರಿದಂತೆ ಯಾರೂ ಕೂಡ ಅವರನ್ನ ದೇಶದ್ರೋಹಿ ಎಂದು ಕರೆಯಲಿಲ್ಲ. ಆದರೆ ಈಗ ಪ್ರಧಾನಿ ಮೋದಿ ಹಾಗೂ ಕೇಂದ್ರ ಸರ್ಕಾರವನ್ನ ಪ್ರಶ್ನಿಸಿದರೆ ದೇಶದ್ರೋಹಿ ಪಟ್ಟ ಕಟ್ಟಲಾಗುತ್ತಿದೆ, ಪಾಕಿಸ್ತಾನಕ್ಕೆ ಹೋಗಿ ಎಂದು ಕರೆ ನೀಡುತ್ತಿದ್ದಾರೆ. ಪತ್ರಕರ್ತರು ಪ್ರಶ್ನೆ ಮಾಡಿದರೆ ಜೈಲಿಗೆ ಹಾಕಲಾಗುತ್ತಿದೆ. ಪ್ರಧಾನಿಯನ್ನ ಪ್ರಶ್ನೆ ಮಾಡಿದರೆ ಹೇಗೆ ದೇಶದ್ರೋಹಿಯಾಗುತ್ತೇವೆ? ಇಂತಹ ಹೊಸ ಪರಂಪರೆಯನ್ನ ನಾವು ಎಂದೂ ಆಲೋಚಿಸಿರಲಿಲ್ಲ ಎಂದರು. 

ಧರ್ಮ-ಧರ್ಮಗಳ ಮಧ್ಯೆ ವಿಷಬೀಜ ಬಿತ್ತಲಾಗುತ್ತಿದೆ. ಅಲ್ಪಸಂಖ್ಯಾತರ ಮೇಲೆ ದಾಳಿ ನಡೆಸಲಾಗುತ್ತಿದೆ, ಸಂವಿಧಾನದ ವಿರುದ್ಧ ಘೋಷಣೆಗಳನ್ನ ಕೂಗಲಾಗುತ್ತಿದೆ. 2015ರ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ " ಸಂವಿಧಾನ ಬದಲಾವಣೆ ಮಾಡುತ್ತೇವೆ" ಎಂದು ಆರ್ ಎಸ್ ಎಸ್ ನ ಮುಖ್ಯಸ್ಥ ಮೋಹನ್ ಭಾಗವತ್ ಸ್ವಯಂ ಹೇಳಿಕೆ ನೀಡಿದ್ದರು. ಕರ್ನಾಟಕದ ಒಬ್ಬ ಸಂಸದ ಕೂಡ ಕೇಂದ್ರ ಸಚಿವರಾಗಿದ್ದಾಗ ಬಹಿರಂಗವಾಗಿ ಹೇಳಿಕೆ ನೀಡಿದ್ದಾರೆ.

ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ಪಕ್ಷ ಹಾಗೂ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ನಿಕಟಪೂರ್ವ ಅಧ್ಯಕ್ಷ ರಾಹುಲ್ ಗಾಂಧಿಯವರ ಮಾರ್ಗದರ್ಶನದಲ್ಲಿ ಈ ಕಾರ್ಯಕ್ರಮವನ್ನ ಮಾಡುತ್ತಿದ್ದೇವೆ. ಸ್ವಾತಂತ್ರ್ಯ ಚಳುವಳಿಯಲ್ಲಿ ಲಕ್ಷಾಂತರ ಜನರ ತ್ಯಾಗ, ಬಲಿದಾನವನ್ನ ದೇಶದ ಜನರಿಗೆ ಮನವರಿಕೆ ಮಾಡುವ ಅಗತ್ಯತೆ, ಅನಿವಾರ್ಯತೆ ಹೆಚ್ಚಿದೆ ಎಂದು ಹೇಳಿದರು. 

ಪತ್ರಿಕಾಗೋಷ್ಠಿಯಲ್ಲಿ ಬಿಹಾರ ಎಐಸಿಸಿ ಉಸ್ತುವಾರಿ ಶ್ರೀ ಭಕ್ತ್ ಚರಣ್ ದಾಸ್, ಬಿಹಾರ ಪ್ರದೇಶ ಸಮಿತಿ ಅಧ್ಯಕ್ಷ ಡಾ ಮದನ್ ಮೋಹನ್ ಝಾ, ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಶ್ರೀನಿವಾಸ್ ಬಿವಿ ಸೇರಿದಂತೆ ಪ್ರಮುಖ ಮುಖಂಡರು ಭಾಗಿಯಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News