ಮುಸ್ಲಿಮರ ಮತಗಳನ್ನು ವಿಭಜಿಸಲು ಎಚ್‌ಡಿಕೆಗೆ ಬಿಜೆಪಿ ಸುಪಾರಿ: ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ ಆರೋಪ

Update: 2022-04-05 18:19 GMT
ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ

ಮೈಸೂರು, ಎ.5: ಮುಸ್ಲಿಂ ಸಮುದಾಯದ ಮತಗಳನ್ನು ವಿಭಜಿಸಲು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಬಿಜೆಪಿ ಸುಪಾರಿ ನೀಡಿದೆ ಎಂದು ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ ಅರೋಪಿಸಿದ್ದಾರೆ.

ನಗರದ ಕಾಂಗ್ರೆಸ್ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿಂದಗಿ, ಹಾನಗಲ್ ಉಪಚುನಾವಣೆ ವೇಳೆ ಕುಮಾರಸ್ವಾಮಿ ಆರೆಸ್ಸೆಸ್ ವಿರುದ್ಧವಾಗಿ ಸಾಕಷ್ಟು ಮಾತನಾಡಿದರು. ಆದರೆ ಅದರಿಂದ ಏನೂ ಪ್ರಯೋಜನ ಆಗಲಿಲ್ಲ. ಹಾಗಾಗಿ ಚುನಾವಣೆ ಮುಗಿದ ಬಳಿಕ ಸುಮ್ಮನಾದರು. ಅವರು ಯಾವಾಗ ಯಾರನ್ನು ಬಯ್ಯುತ್ತಾರೆ ಎಂಬುದೇ ಗೊತ್ತಾಗಲ್ಲ ಎಂದು ಕಿಡಿಕಾರಿದರು.

ಬಿಜೆಪಿ ತನ್ನ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ಇಲ್ಲದ ವಿವಾದಗಳನ್ನು ಮಾಡುತ್ತಿದೆ. ಹಿಜಾಬ್, ಮುಸ್ಲಿಂ ವ್ಯಾಪಾರಿಗಳಿಗೆ ನಿಷೇಧ, ಹಲಾಲ್ ಕಟ್, ಟಿಪ್ಪು ಹೀಗೆ ಬೇಡದ ವಿಚಾರಗಳನ್ನು ಮುನ್ನೆಲೆಗೆ ತಂದು ಅಗತ್ಯ ವಸ್ತುಗಳ ಬೆಲೆ ಏರಿಕೆ, ಇಂಧನ ಉತ್ಪನ್ನಗಳ ದರ ಹೆಚ್ಚಳವನ್ನು ಮುಚ್ಚಿ ಕೊಳ್ಳಲು ಈ ರೀತಿಯ ಪ್ರಯತ್ನ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬಿಜೆಪಿ ಪ್ರಾಯೋಜಿತ ಕೆಲವು ಸಂಘಟನೆಗಳು ಹಿಂದೂಗಳನ್ನು ಗುತ್ತಿಗೆಗೆ ಪಡೆದವರಂತೆ ಆಡುತ್ತಿದ್ದಾರೆ. ಇದೆಲ್ಲವನ್ನೂ ನೋಡಿಯೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸುಮ್ಮನೆ ಇದ್ದಾರೆ. ಇವರೊಬ್ಬರು ಅಸಮರ್ಥ ಸಿಎಂ. ಇಂತಹ ಸಿಎಂ ಅನ್ನು ರಾಜ್ಯ ಹಿಂದೆಂದೂ ಕಂಡಿಲ್ಲ ಎಂದು ಬಸವರಾಜ ಬೊಮ್ಮಾಯಿ ವಿರುದ್ಧ ಹರಿಹಾಯ್ದರು.

ಹಲಾಲ್ ಮಾಂಸವನ್ನು ಆರ್ಥಿಕ ಜಿಹಾದ್ ಎಂಬುದಾಗಿ ಸಿಟಿ ರವಿ ಅವರು ಹೇಳಿದ್ದಾರೆ. ಆದರೆ ದನದ ಹಲಾಲ್ ಮಾಂಸವನ್ನು ದೇಶದಿಂದ ರಫ್ತು ಮಾಡುತ್ತಿರುವ ಅಗ್ರ ಹತ್ತು ಜನರ ಪಟ್ಟಿಯಲ್ಲಿ ಬಿಜೆಪಿ ಬೆಂಬಲಿಗರೇ ಇದ್ದಾರೆ. ಇವರು ಹೇಳುವುದು ಒಂದು ಮಾಡುವುದು ಮತ್ತೊಂದು. ತಾಕತ್ತಿದ್ದರೆ ಶೂದ್ರ ಅಥವ ದಲಿತ ಸಮುದಾಯದವರಿಗೆ ಆರೆಸ್ಸೆಸ್‌ನಲ್ಲಿ ಪ್ರಮುಖ ಸ್ಥಾನ ನೀಡಲಿ ಎಂದು ಲಕ್ಷ್ಮಣ ಬಹಿರಂಗ ಸವಾಲು ಹಾಕಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News