×
Ad

ಪದವಿ ವಿದ್ಯಾರ್ಥಿಗಳಿಗೆ ಕಡ್ಡಾಯ ಕನ್ನಡ ಕಲಿಕೆ ಆದೇಶಕ್ಕೆ ತಡೆ ನೀಡಿದ ಹೈಕೋರ್ಟ್

Update: 2022-04-06 17:48 IST

ಬೆಂಗಳೂರು, ಎ.6: ಪದವಿ ಶಿಕ್ಷಣ ಹಂತದಲ್ಲಿ ವಿದ್ಯಾರ್ಥಿಗಳಿಗೆ ಕನ್ನಡ ಭಾಷೆ ಕಲಿಕೆ ಕಡ್ಡಾಯಗೊಳಿಸಿ ರಾಜ್ಯ ಸರಕಾರ ಹೊರಡಿಸಿದ್ದ ಆದೇಶಕ್ಕೆ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿದೆ. 

ಸರಕಾರದ ಆದೇಶ ಪ್ರಶ್ನಿಸಿ ಸಂಸ್ಕೃತ ಭಾರತಿ ಟ್ರಸ್ಟ್ ಹಾಗೂ ಕೆಲ ವಿದ್ಯಾರ್ಥಿಗಳು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ನೇತೃತ್ವದ ವಿಭಾಗೀಯ ಪೀಠ ಈ ಆದೇಶ ಹೊರಡಿಸಿದೆ.

ವಿಚಾರಣೆ ವೇಳೆ, ಸರಕಾರದ ಪರ ವಕೀಲರು ವಾದ ಮಂಡನೆಗೆ ಮತ್ತಷ್ಟು ಕಾಲಾವಕಾಶ ಕೋರಿದರು. ಹಾಗೆಯೇ ಪ್ರಕರಣವನ್ನು ಬೇಸಿಗೆ ರಜೆ ನಂತರ ವಿಚಾರಣೆಗೆ ನಿಗದಿಪಡಿಸುವಂತೆ ಪೀಠಕ್ಕೆ ಮನವಿ ಮಾಡಿದರು. ಇದಕ್ಕೆ ಆಕ್ಷೇಪಿಸಿದ ವಿದ್ಯಾರ್ಥಿಗಳ ಪರ ವಕೀಲರು, ರಾಜ್ಯ ಸರಕಾರ ಪ್ರಕರಣವನ್ನು ಪ್ರತಿ ಬಾರಿ ಮುಂದೂಡಿಕೊಂಡೇ ಬರುತ್ತಿದೆ. ವಿದ್ಯಾರ್ಥಿಗಳ ಭವಿಷ್ಯ ಅಡಕತ್ತರಿಗೆ ಸಿಲುಕುತ್ತಿದೆ. ಹೀಗಾಗಿ, ವಿದ್ಯಾರ್ಥಿಗಳು ತಮಗಿಷ್ಟ ಬಂದ ಭಾಷೆ ಅಧ್ಯಯನ ಮಾಡಲು ಸ್ವತಂತ್ರರು ಎಂಬುದನ್ನು ನ್ಯಾಯಾಲಯ ಪರಿಗಣಿಸಬೇಕು. ಸರಕಾರ ಬೇಸಿಗೆ ರಜೆಯೇನು, ಒಂದು ವರ್ಷದ ನಂತರವೇ ವಾದ ಮಂಡಿಸಲಿ ಎಂದರು.

ವಕೀಲರ ವಾದ ಆಲಿಸಿದ ನ್ಯಾಯಪೀಠ, ಕೇಂದ್ರ ಸರಕಾರ ಈಗಾಗಲೇ ತನ್ನ ನಿಲುವು ಸ್ಪಷ್ಟಪಡಿಸಿದೆ. ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಯಾವುದೇ ಭಾಷೆಯ ಕಲಿಕೆ ಕಡ್ಡಾಯ ಅಲ್ಲವೆಂದು ಹೇಳಿದೆ. ಅದರಂತೆ, ರಾಜ್ಯದ ನಿಲುವು ಕೇಂದ್ರದ ನೀತಿಗೆ ವಿರುದ್ಧವಾಗಿದೆ. ಇನ್ನು ಕಡ್ಡಾಯ ಕಲಿಕೆ ವಿಚಾರವನ್ನು ಮರುಪರಿಶೀಲಿಸಿ ಸೂಕ್ತ ನಿರ್ಣಯ ಕೈಗೊಳ್ಳುವಂತೆ ಸರಕಾರಕ್ಕೆ ನ್ಯಾಯಾಲಯವೂ ಮೊದಲಿನಿಂದ ಹೇಳುತ್ತಲೇ ಬಂದಿದೆ. ಹೀಗಾಗಿ, ಸರಕಾರದ ಆದೇಶಕ್ಕೆ ತಡೆ ನೀಡುತ್ತಿದ್ದೇವೆ ಎಂದು ಪೀಠ ಸ್ಪಷ್ಟಪಡಿಸಿತು.

ರಾಜ್ಯದ ಕಾಲೇಜುಗಳಲ್ಲಿ ಕನ್ನಡ ಭಾಷೆಯನ್ನು ವ್ಯಾವಹಾರಿಕ ಮಟ್ಟದಲ್ಲಿ ಕಲಿಸಲು ರಾಜ್ಯ ಸರಕಾರ 2021ರ ಆ.7 ಮತ್ತು ಸೆ.15ರಂದು ಆದೇಶ ಹೊರಡಿಸಿತ್ತು. ಈ ಆದೇಶ ಪ್ರಶ್ನಿಸಿ ಅರ್ಜಿದಾರರು ಹೈಕೋರ್ಟ್ ಮೆಟ್ಟಿಲೇರಿದ್ದರು. ರಾಜ್ಯ ಸರಕಾರ ಕನ್ನಡವನ್ನು ಸಮಾಜದೊಂದಿಗೆ ವ್ಯವಹರಿಸುವಷ್ಟಾದರೂ ಕಲಿಸುವ ಸದುದ್ದೇಶದಿಂದ ಇಂತಹ ಕನ್ನಡ ಕಲಿಕೆಯನ್ನು ಕಾಲೇಜು ಹಂತದಲ್ಲಿ ತಂದಿದ್ದೇವೆ ಎಂದು ಸಮರ್ಥಿಸಿಕೊಂಡಿತ್ತು.

ಇದನ್ನು ಅಲ್ಲಗೆಳೆದಿದ್ದ ಹೈಕೋರ್ಟ್, ಹೊರ ರಾಜ್ಯಗಳ ವಿದ್ಯಾರ್ಥಿಗಳಿಗೆ ಇದರಿಂದ ತೊಂದರೆಯಾಗಲಿದೆ. ಆದೇಶ ಮರುಪರಿಶೀಲಿಸಿ ಎಂದು ಸೂಚಿಸಿತ್ತು. ನಂತರ ಹೈಕೋರ್ಟ್ ಸೂಚನೆಯಂತೆ ಸ್ಪಷ್ಟನೆ ನೀಡಿದ್ದ ಕೇಂದ್ರ ಸರಕಾರ, ಎನ್‍ಇಪಿಯಲ್ಲಿ ಯಾವುದೇ ಭಾಷೆಯ ಕಲಿಕೆ ಕಡ್ಡಾಯವಲ್ಲ ಎಂದಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News