ಮಡಿಕೇರಿ ನಗರಸಭೆ ವಿರುದ್ಧ ಜೆಡಿಎಸ್ ಪ್ರತಿಭಟನೆ
ಮಡಿಕೇರಿ: ನಗರದ ಬಡ ಜನತೆಗೆ ವಸತಿ ಸೌಲಭ್ಯ ಕಲ್ಪಿಸಬೇಕೆಂದು ಒತ್ತಾಯಿಸಿ ಜಿಲ್ಲಾ ಜಾತ್ಯತೀತ ಜನತಾದಳ ನಗರಸಭೆ ಕಚೇರಿ ಎದುರು ಪ್ರತಿಭಟನೆ ನಡೆಸಿತು.
ಜೆಡಿಎಸ್ ಜಿಲ್ಲಾಧ್ಯಕ್ಷ ಕೆ.ಎಂ.ಗಣೇಶ್ ನೇತೃತ್ವದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದ ನಿವೇಶನ ರಹಿತರು ಹಾಗೂ ಪಕ್ಷದ ಕಾರ್ಯಕರ್ತರು ನಗರಸಭೆ ವಿರುದ್ಧ ಘೋಷಣೆಗಳನ್ನು ಕೂಗಿದರು.
ನಗರಸಭೆ ಸೂರಿಲ್ಲದ ಬಡವರನ್ನು ನಿರ್ಲಕ್ಷಿಸಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ ಗಣೇಶ್, 2018-19ನೇ ಸಾಲಿನಲ್ಲಿ ನಡೆದ ಪ್ರಾಕೃತಿಕ ವಿಕೋಪದ ಸಂತ್ರಸ್ತರಿಗೆ ಅಂದಿನ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ 900 ಮನೆಗಳನ್ನು ನಿರ್ಮಿಸಿಕೊಟ್ಟರು. ಆ ನಂತರದ ಅವಧಿಯಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿಯಿಂದ ಬಡಮಂದಿಗೆ ಒಂದೇ ಒಂದು ಮನೆಯನ್ನು ನಿರ್ಮಿಸಿಕೊಡಲು ಸಾಧ್ಯವಾಗಿಲ್ಲ ಎಂದು ಆರೋಪಿಸಿದರು.
ಇಂದು ನಿವೇಶನಕ್ಕಾಗಿ ಬಡ ಮಂದಿಯೊಂದಿಗೆ ಪ್ರತಿಭಟನೆ ನಡೆಸುವ ಹಂತದಲ್ಲಿ ಅದನ್ನು ತಡೆಯುವ ಪ್ರಯತ್ನ ಮಾಡುವ ಮೂಲಕ ಹಕ್ಕನ್ನು ಕಸಿಯುವ ಪ್ರಯತ್ನ ಮಾಡಲಾಗಿದೆ. ಪ್ರತಿಭಟನೆ ನಡೆಸದಂತೆ ಪೌರಾಯುಕ್ತರು ಪಕ್ಷದ ಮಹಿಳಾ ಘಟಕದ ಪ್ರಧಾನ ಕಾರ್ಯದರ್ಶಿ ಲೀಲಾ ಶೇಷಮ್ಮ ಅವರಿಗೆ ಸೂಚಿಸಿರುವುದು ಖಂಡನೀಯವೆಂದರು.
ಬಡ ಮಂದಿಯ ಸೂರಿನ ಬೇಡಿಕೆ ಈಡೇರುವವರೆಗೆ ಜೆಡಿಎಸ್ ಪ್ರತಿಭಟನೆ ನಿರಂತರವಾಗಿರುತ್ತದೆ. ಒಂದು ತಿಂಗಳ ಒಳಗೆ ನಿವೇಶನ ಒದಗಿಸುವ ಭರವಸೆ ನೀಡಿದಲ್ಲಿ ತಕ್ಷಣ ಪ್ರತಿಭಟನೆ ಕೈಬಿಡುತ್ತೇವೆ. ಅಗತ್ಯವಿದ್ದಲ್ಲಿ ನಾವೇ ಖಾಲಿ ಜಾಗವನ್ನು ಗುರುತಿಸಿಕೊಡುತ್ತೇವೆ ಎಂದು ತಿಳಿಸಿದರು.
ಜನರ ಮೂಲಭೂತ ಸಮಸ್ಯೆಗಳನ್ನು ಬಿಟ್ಟು ಇಂದು ಹಿಜಾಬ್, ಕೇಸರಿ ಶಾಲಿನ ವಿಚಾರವನ್ನು ಚರ್ಚೆಯ ವಿಷಯವನ್ನಾಗಿ ಮಾಡಲಾಗುತ್ತಿದೆ. ಆದರೆ, ಜೆಡಿಎಸ್ ಜನರ ಸಂಕಷ್ಟಗಳ ಮೇಲೆ ಬೆಳಕು ಚೆಲ್ಲುವ ಹೋರಾಟ ನಡೆಸಲಿದೆ ಎಂದು ಸ್ಪಷ್ಟಪಡಿಸಿದರು.
ಜಿಲ್ಲಾ ಜೆಡಿಎಸ್ ಅಲ್ಪಸಂಖ್ಯಾತರ ಘಟನೆಕ ಅಧ್ಯಕ್ಷ ಇಸಾಕ್ ಖಾನ್ ಮಾತನಾಡಿ, ಜಿಲ್ಲೆಯ ಜನಪ್ರತಿನಿಧಿಗಳು ಅಧಿವೇಶನದಲ್ಲಿ ಜನರ ಸಮಸ್ಯೆಗಳ ಬಗ್ಗೆ ಮಾತನಾಡುತ್ತಿಲ್ಲ ಎಂದು ಆರೋಪಿಸಿದರು.
ಸ್ಥಳಕ್ಕಾಮಿಸಿದ ಪೌರಾಯುಕ್ತ ರಾಮದಾಸ್ ಮಾತನಾಡಿ ಅರ್ಹರಿಗೆ ನಿವೇಶನ ಒದಗಿಸಲು ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ನಗರಸಭಾ ಆವರಣಕ್ಕೆ ಬಾರದಂತೆ ಪೊಲೀಸರು ತಡೆಯುವ ಸಂದರ್ಭ ಪ್ರತಿಭಟನಾಕಾರರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ನಂತರ ನಿಗಧಿತ ಸ್ಥಳದಲ್ಲೇ ಪ್ರತಿಭಟನೆ ನಡೆಸಿದರು.
ಜಿಲ್ಲಾ ಮಹಿಳಾ ಪ್ರಧಾನ ಕಾರ್ಯದರ್ಶಿ ಲೀಲಾ ಶೇಷಮ್ಮ, ಮಡಿಕೇರಿ ನಗರಾಧ್ಯಕ್ಷ ಮೋನಿಶ್, ನಗರಸಭಾ ಸದಸ್ಯ ಮುಸ್ತಫ, ಯುವ ಜೆಡಿಎಸ್ ನಗರ ಕಾರ್ಯದರ್ಶಿ ನಚಿಕೇತ್, ಪಕ್ಷದ ಪ್ರಮುಖರಾದ ವಿಶ್ವನಾಥ್, ಯೂಸುಫ್ ಕೊಂಡಂಗೇರಿ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.